ಹೂಳು ತುಂಬಿದ ನಾಲೆಯಲ್ಲಿ ಹರಿಯುತ್ತಿಲ್ಲ ನೀರು: ರೈತರ ಗೋಳು ಕೇಳೋರಿಲ್ಲ
ಮಂಡ್ಯ, ಮಾರ್ಚ್ 25: ಸರ್ಕಾರಗಳೆಲ್ಲವೂ ನಾವು ರೈತಪರ ಎಂದು ಹೇಳಿಕೊಂಡೇ ಬರುತ್ತಿದ್ದರೂ ರೈತರಿಗೆ ಅಗತ್ಯವಾದ ನೀರಾವರಿ ವ್ಯವಸ್ಥೆಯನ್ನು ಮಾಡದಿರುವುದರಿಂದಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಈಗಿರುವ ನಾಲೆ, ಕೆರೆಗಳ ನಿರ್ವಹಣೆ ಮಾಡಿದರೂ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತದೆ. ಆದರೆ ಅದ್ಯಾಕೋ ಗೊತ್ತಿಲ್ಲ. ನೀರಾವರಿ ವಿಚಾರದಲ್ಲಿ ರೈತಾಪಿ ವರ್ಗಕ್ಕೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ಮಾಡಲು ಸಂಬಂಧಿಸಿದವರು ಹಿಂದೇಟು ಹಾಕುತ್ತಿರುವುದು ದುರಂತವೇ ಸರಿ.
ಮಳೆಗಾಲಕ್ಕೂ ಮುನ್ನ ಅಂದರೆ ಬೇಸಿಗೆಯಲ್ಲಿಯೇ ಕೆರೆ ಮತ್ತು ನಾಲೆಗಳ ಸ್ಥಿತಿಗತಿ ನೋಡಿ ಅವುಗಳನ್ನು ದುರಸ್ತಿ ಪಡಿಸುವುದು, ಹೂಳೆತ್ತುವುದು ಹೀಗೆ ನಿರ್ವಹಣಾ ಕಾರ್ಯವನ್ನು ಮಾಡಿದರೆ ನಿಜಕ್ಕೂ ನೀರಾವರಿ ವ್ಯವಸ್ಥೆ ಸುಗಮವಾಗುವುದರೊಂದಿಗೆ ರೈತರು ಅನುಭವಿಸುವ ಸಂಕಷ್ಟವೂ ತಪ್ಪಲಿದೆ. ಆದರೆ ನಮ್ಮನ್ನಾಳುವ ನಾಯಕರು ಮತ್ತು ಅಧಿಕಾರಿಗಳಿಗೆ ದೂರದೃಷ್ಟಿಯ ಕೊರತೆಯೋ?, ನಿರ್ಲಕ್ಷ್ಯವೋ ಗೊತ್ತಿಲ್ಲ. ನೀರಾವರಿ ವಿಚಾರದಲ್ಲಿ ಜಾಣ ಕುರುಡುತನ ತೋರುತ್ತಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿ ಕೃಷಿ ಸಹವಾಸವೇ ಬೇಡ ಎನ್ನುವಂತಾಗಿದೆ.

ಬೇಸಿಗೆಯಲ್ಲಿ ಮುಂಜಾಗ್ರತೆ ವಹಿಸಿ ಕೆರೆಕಟ್ಟೆಗಳ ಏರಿಗಳನ್ನು ದುರಸ್ತಿ ಮಾಡುವುದು, ಸೋರಿಕೆ ತಡೆಯುವುದು, ಹೂಳೆತ್ತುವುದು ಹೀಗೆ ಕೆರೆಗಳ ಅಭಿವೃದ್ಧಿಯನ್ನು ಮಾಡಿದರೆ ಮಳೆಗಾಲದಲ್ಲಿ ಮಳೆ ನೀರು ಸಂಗ್ರಹವಾಗಲು ಸಾಧ್ಯವಾಗುತ್ತದೆ. ಜತೆಗೆ ಕೊಡಿ ಬಿದ್ದಾಗ ಕೆರೆ ಏರಿ ಒಡೆದು ಹೋಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಇದರ ಜತೆಗೆ ನೀರು ಹರಿಸುವ ನಾಲೆಗಳ ಕಡೆಗೂ ಗಮನಹರಿಸಿ ನಾಲೆಯಲ್ಲಿ ತುಂಬಿರುವ ಹೂಳು ಮತ್ತು ಗಿಡಗಂಟಿಗಳನ್ನು ತೆರವುಗೊಳಿಸಿ, ಎಲ್ಲಿಯಾದರೂ ದುಸ್ಥಿತಿಗೀಡಾಗಿದ್ದರೆ ದುರಸ್ತಿ ಮಾಡಿದರೆ ನಾಲೆಗೆ ನೀರು ಬಿಟ್ಟ ಸಂದರ್ಭ ಸರಾಗವಾಗಿ ಹರಿಯುವುದರೊಂದಿಗೆ ನೀರು ಪೋಲಾಗುವುದನ್ನು ತಡೆದು ಕಟ್ಟಕಡೆಯ ರೈತನ ಜಮೀನಿಗೂ ತಲುಪಲು ಸಾಧ್ಯವಾಗುತ್ತದೆ.
ನಾಲೆಗಳ ನಿರ್ವಹಣೆ ಕಾರ್ಯ ನಡೆಯುತ್ತಿಲ್ಲ
ಆದರೆ ಇದ್ಯಾವುದೂ ನಡೆಯದ ಕಾರಣದಿಂದಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಹೇಮಾವತಿ ಜಲಾಶಯದಿಂದ ಹರಿದು ಬರುವ ಹೇಮಾವತಿ ಎಡದಂಡೆ ನಾಲೆ, ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನಾಲಾ ವ್ಯಾಪ್ತಿಯಲ್ಲಿ ರೈತರು ಅರೆ ನೀರಾವರಿ ಮತ್ತು ಪೂರ್ಣ ನೀರಾವರಿ ಬೆಳೆಗಳನ್ನು ಬೆಳೆಯುತ್ತಿದ್ದು, ಹೇಮಾವತಿ ಎಡದಂಡೆ ನಾಲೆಯ ಸುಮಾರು 56ಸಾವಿರ ಎಕರೆ ಪ್ರದೇಶ, ಮಂದಗರೆ ಎಡ ಮತ್ತು ಬಲದಂಡೆ ಮತ್ತು ಹೇಮಗಿರಿ ನಾಲಾ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರ ಎಕರೆ ನೀರಾವರಿ ಪ್ರದೇಶ ಸೇರಿದೆ. ಆದರೆ ಹೇಮಾವತಿ ಎಡದಂಡೆ ನಾಲೆಗೆ ನೀರಾವರಿ ಇಲಾಖೆ ಇದುವರೆಗೂ ನೀರು ಹರಿಸಿಲ್ಲ ಎಂಬುದು ರೈತರ ಆರೋಪವಾಗಿದೆ.

ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳಿಗೆ ಕಟ್ಟು ನೀರು ಪದ್ದತಿಯಡಿ ಇಲಾಖೆ ನೀರು ಹರಿಸುತ್ತಿದೆ. ನದಿ ಅಣೆಕಟ್ಟೆ ನಾಲಾ ವ್ಯಾಪ್ತಿಯ ನಾಲೆಗಳಲ್ಲಿ ರೈತರು ಈಗಾಗಲೇ ಭತ್ತದ ನಾಟಿ ಮಾಡುತ್ತಿದ್ದು ಬೆಳೆದು ನಿಂತಿರುವ ಕಬ್ಬು, ತೆಂಗು, ಅಡಿಕೆ, ಬಾಳೆ ಮುಂತಾದ ಬೆಳೆಗಳು ನಾಲಾ ನೀರನ್ನು ಅವಲಂಭಿಸಿವೆ. ರೈತರ ಹಿತದೃಷ್ಠಿಯಿಂದ 2010ರಲ್ಲಿ ಕ್ಷೇತ್ರದ ಅಂದಿನ ಶಾಸಕ ಕೆ.ಬಿ.ಚಂದ್ರಶೇಖರ್ ಸುಮಾರು 250 ಕೋಟಿ ರೂ ವೆಚ್ಚದಲ್ಲಿ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣ ಮಾಡಿಸಿ ಕೊನೆಯ ಭಾಗದ ರೈತನಿಗೂ ಸುಲಲಿತವಾಗಿ ನೀರು ತಲುಪುವಂತೆ ಮಾಡಿದ್ದರು. ಆಧುನೀಕರಣಗೊಂಡ ನಾಲೆಗಳನ್ನು ನೀರಾವರಿ ಇಲಾಖೆ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಈ ನಾಲೆಗಳಲ್ಲಿ ಅಲ್ಲಲ್ಲಿ ಹೂಳು ತುಂಬಿದೆ. ನಾಲಾ ಏರಿಗಳ ಮೇಲೆ ಗಿಡಗಂಟಿಗಳು ಬೆಳೆದು ನಾಲೆ ದುಸ್ಥಿತಿಯಲ್ಲಿದೆ.
ನಾಲೆಯ ಕಟ್ಟಕಡೆಯ ರೈತರಿಗೆ ನೀರು ತಲುಪುತ್ತಿಲ್ಲ
ಈ ಕಾರಣದಿಂದಾಗಿ ನಾಲೆಯಲ್ಲಿ ನೀರು ಸರಾಗವಾಗಿ ಹರಿದು ಕೊನೆಯ ಭಾಗಕ್ಕೆ ತಲುಪುವುದು ಕಷ್ಟವಾಗುತ್ತಿದೆ. ಆದ್ದರಿಂದ ನೀರಾವರಿ ಇಲಾಖೆ ನಾಲೆಯಲ್ಲಿ ತುಂಬಿರುವ ಹೂಳನ್ನು ತೆಗೆದು ರೈತರಿಗೆ ಅನುಕೂಲ ಮಾಡಿಕೊಡಿ ಎನ್ನುವುದು ರೈತರ ಮನವಿಯಾಗಿದೆ. ತಾಲೂಕಿನ ಹೇಮಾವತಿ ಜಲಾನಯನ ಪ್ರದೇಶದ ವ್ಯಾಪ್ತಿಯ ನಾಲೆಗಳ ಹೂಳು ಮತ್ತು ನಾಲಾ ಏರಿಯ ಮೇಲಿನ ಜಂಗಲ್ ಕಟ್ಟಿಂಗ್ ಮಾಡಿ ನೀರು ಹರಿಯಲು ಅನುವು ಮಾಡಲು ರಾಜ್ಯ ಸರ್ಕಾರ ಸುಮಾರು 1.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. 2025ರ ಜನವರಿ 7 ರಂದು ನೀರಾವರಿ ಇಲಾಖೆ ಹೇಮಾವತಿ ಬೆಳೆಗೆ ಬಿಟ್ಟಿದ್ದ ನೀರನ್ನು ನಿಲ್ಲಿಸಿದೆ.

ನಾಲೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಿದ ಬಳಿಕ ನಾಲೆಗಳ ಹೂಳು ಮತ್ತು ಜಂಗಲ್ ಕಟ್ಟಿಂಗ್ ಕಾಮಗಾರಿ ಮಾಡಬೇಕಾದ ನೀರಾವರಿ ಇಲಾಖೆಯ ತಜ್ಞರು ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಲೆಯಲ್ಲಿ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ 15 ಪ್ಯಾಕೇಜ್ ಮಾಡಿ ನಾಲೆಗಳಲ್ಲಿ ಹೂಳೆತ್ತುವ ಮತ್ತು ಜಂಗಲ್ ಕಟ್ಟಿಂಗ್ ಮಾಡುವ ನಾಟಕ ಮಾಡಿ ಕೋಟ್ಯಂತರ ರೂ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿದ ಪರಿಣಾಮ ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಈಗ ಕಟ್ಟು ನೀರು ಪದ್ದತಿಯಡಿ ನೀರು ಹರಿಸುತ್ತಿದ್ದರೂ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದ ನಾಲೆಗಳ ಕೊನೆಯ ಭಾಗದ ಸಾವಿರಾರು ಎಕರೆ ಪ್ರದೇಶದ ರೈತರ ಬೆಳೆ ನೀರಿದ್ದರೂ ಒಣಗುವಂತಾಗಿದೆ ಎಂಬುದು ರೈತರ ಆರೋಪವಾಗಿದೆ.
ರೈತ ಸಂಘದ ತಾಲೂಕು ಅಧ್ಯಕ್ಷರು ಹೇಳುವುದೇನು?
ನೀರಾವರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜ್ಯ ರೈತಸಂಘ ಬಹಿರಂಗ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ನಾಲೆಯಲ್ಲಿ ನೀರು ನಿಲ್ಲಿಸಿದ ಸಂದರ್ಭದಲ್ಲಿ ಹೂಳೆತ್ತುವ ಬದಲು ಎಂಜಿನಿಯರುಗಳು ನಾಲೆಯಲ್ಲಿ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಹೂಳು ತೆಗೆಸುವಂತೆ ಮಾಡಿ ಸರ್ಕಾರಿ ಹಣವನ್ನು ಹಗಲು ದರೋಡೆ ಮಾಡಿದ್ದಾರೆ.
ನಾಲಾ ಏರಿಯ ಮೇಲೆ ಜಂಗಲ್ ಕಟ್ಟಿಂಗ್ ಮಾಡಿಯೇ ಇಲ್ಲ. ಆದರೂ ಕಾಗದದ ಮೇಲೆ ಎಲ್ಲವೂ ನಡೆದಿದೆ ಎಂದು ತೋರಿಸಿದ್ದಾರೆ ಎಂದು ಕೆ.ಆರ್.ಪೇಟೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆರೋಪಿಸಿದ್ದು ಕಾಮಗಾರಿ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಅಲ್ಲದೇ, ನಾಲೆಗಳ ಹೂಳು ತೆಗೆಸಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications