ಸುಧಾ ಮೂರ್ತಿ ಪ್ರಯತ್ನದಿಂದ ಮೇಲುಕೋಟೆಯಲ್ಲಿ ಸ್ವಚ್ಛವಾದ ಕಲ್ಯಾಣಿ ಕೊಳ
ಮಂಡ್ಯ, ಜನವರಿ 12 : ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಮೇಲುಕೋಟೆಯ ಕಲ್ಯಾಣಿ ಮತ್ತು ಕೊಳಗಳನ್ನು ಸ್ವಚ್ಛಮಾಡಿ ಅಭಿವೃದ್ಧಿಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಈ ವೇಳೆ ಇಲ್ಲಿನ ಐತಿಹಾಸಿಕ ಪಂಚಕಲ್ಯಾಣಿಯ ಸಮುಚ್ಚಯದಲ್ಲಿ ಹಳೆಯ ಅರಮನೆಯಂತಿರುವ ತೊಟ್ಟಿಯ ಮನೆಯ ಅವಶೇಷ ಹಾಗೂ ನಾಲ್ಕು ಕಡೆ ಶಿಲ್ಪಕಲಾಕೃತಿಯಿರುವ ಮಂಟಪದ ಅಡಿಪಾಯ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಅದ್ಭುತವನ್ನು ನೋಡಲು ಸ್ಥಳೀಯರು ಆಗಮಿಸುತ್ತಿದ್ದು ಅಚ್ಚರಿಯ ನೋಟವನ್ನು ಬೀರುತ್ತಿದ್ದಾರೆ. ಕೊಳಗಳನ್ನು ಸ್ವಚ್ಛಗೊಳಿಸದ ಕಾರಣದಿಂದಾಗಿ ಅವು ಅವನತಿಯ ಹಾದಿ ಹಿಡಿದಿದ್ದವು. ಇದೊಂದು ಪ್ರವಾಸಿ ಮತ್ತು ಪವಿತ್ರ ಕ್ಷೇತ್ರವೂ ಆಗಿದ್ದು ಇಲ್ಲಿಗೆ ವರ್ಷಕ್ಕೆ ಲಕ್ಷಾಂತರ ಮಂದಿ ಆಗಮಿಸುತ್ತಿದ್ದರೂ ಇಲ್ಲಿನ ಕೊಳಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಮಾತ್ರ ನಡೆದಿರಲಿಲ್ಲ.

ಈ ನಡುವೆ ಮೇಲುಕೋಟೆಗೆ ಭೇಟಿ ನೀಡಿದ್ದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು, ಇಲ್ಲಿನ ಪರಿಸ್ಥಿತಿಯನ್ನು ನೋಡಿ ಮರುಗಿದ್ದರಲ್ಲದೆ, ಐತಿಹಾಸಿಕ ಕ್ಷೇತ್ರದಲ್ಲಿರುವ ಆಕರ್ಷಕ ಕಲ್ಯಾಣಿಗಳನ್ನು ಅಭಿವೃದ್ಧಿಗೊಳಿಸಿ ಅದನ್ನು ಇನ್ನಷ್ಟು ಕಾಲ ಜತನದಿಂದ ಕಾಯುವ ತೀರ್ಮಾನಕ್ಕೆ ಬಂದು ಬಿಟ್ಟರು. ತಕ್ಷಣವೇ ಅವರು ಗಬ್ಬೆದ್ದು ಹೋಗಿರುವ ಈ ಪರಿಸರವನ್ನು ಸುಂದರವಾಗಿಸಿ ದೂರದಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಈ ಕಲ್ಯಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುವಂತೆ ಮಾಡುವ ಪ್ರಯತ್ನಕ್ಕೆ ಮುಂದಾದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಕಲ್ಯಾಣಿ ಮತ್ತು ಕೊಳಗಳನ್ನು ಜೀರ್ಣೋದ್ಧಾರ ಮಾಡಿ ಸಂರಕ್ಷಿಸುವ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಪಡೆದುಕೊಂಡರು.

ಅದರಂತೆ ಮೇಲುಕೋಟೆಯ ಕಲ್ಯಾಣಿ ಮತ್ತು ಕೊಳಗಳನ್ನು ಜೀರ್ಣೋದ್ಧಾರ ಮಾಡಿ ಸಂರಕ್ಷಿಸುವ ಕಾರ್ಯವನ್ನು ಕಳೆದ ಹದಿನೈದು ದಿನಗಳಿಂದ ಮಾಡಲಾಗಿದ್ದು, ಪರಿಸರವನ್ನು ಸ್ವಚ್ಛಗೊಳಿಸಿ, ಧಾರಾಮಂಟಪದ ಸುತ್ತ ತುಂಬಿದ್ದ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದೆ. ಈ ವೇಳೆ ಇಲ್ಲಿನ ಧಾರಾ ಮಂಟಪ ಹಿಂಭಾಗ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಮಣ್ಣು ತೆಗೆಯುವ ಸಂದರ್ಭ ಹಳೆಯ ಅರಮನೆಯಂತಿರುವ ತೊಟ್ಟಿಯ ಮನೆಯ ಅವಶೇಷ ಹಾಗೂ ನಾಲ್ಕು ಕಡೆ ಶಿಲ್ಪಕಲಾಕೃತಿಯಿರುವ ಮಂಟಪದ ಅಡಿಪಾಯ ಕಂಡು ಬಂದಿದೆ.

ಇದರೊಂದಿಗೆ ಮಣ್ಣಿನಿಂದ ಮುಚ್ಚಿ ಹೋಗಿದ್ದ ಕಲ್ಯಾಣಿಗೆ ನೀರು ಹೋಗಲು ಹಿಂದಿನ ಕಾಲದಲ್ಲಿ ಮಾಡಲಾಗಿದ್ದ ವೈಜ್ಞಾನಿಕ ಕೊಳವನ್ನು ಕೂಡ ಸ್ವಚ್ಛಗೊಳಿಸಲಾಗಿದೆ. ಇದು ಮಣ್ಣಿನಿಂದ ಮುಚ್ಚಿಹೋಗಿತ್ತು. ಅದರ ಮೇಲಿದ್ದ ಮಣ್ಣನ್ನು ತೆಗೆದ ಕಾರಣ ಅದರ ಮೂಲ ಸ್ವರೂಪ ಇದೀಗ ಕಾಣುತ್ತಿದೆ.
ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರ ಉದಾರತೆಯ ನಿರ್ಧಾರದಿಂದಾಗಿ ಮೇಲುಕೋಟೆ ಪರಿಸರ ಸ್ವಚ್ಛವಾಗುತ್ತಿದ್ದು, ನಮ್ಮ ಕಣ್ಣಿಗೆ ನಿಲುಕದೆ ಮಣ್ಣಿನಡಿಯಲ್ಲಿ ಹುದುಗಿಹೋಗಿದ್ದ ಐತಿಹಾಸಿಕ ಅವಶೇಷಗಳು ಕಣ್ಣಿಗೆ ಗೋಚರಿಸುವಂತಾಗಿದೆ. ಇದು ಎಲ್ಲರಿಗೂ ಸಂತಸ ತಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.











Click it and Unblock the Notifications