254 ರಾಷ್ಟ್ರಗಳ ಪೈಕಿ ಭಾರತ ವಿಶ್ವಗುರುವಾಗಿ ಹೊರಹೊಮ್ಮಿದೆ: ಎಸ್.ಎಂ. ಮಹೇಶ್
ಮಂಡ್ಯ , ಅಕ್ಟೋಬರ್ 15: ಶಕ್ತಿ, ಯುಕ್ತಿಗಳ ನಡುವೆ ಭಾರತ ತನ್ನ ಸಾಂಸ್ಕೃತಿಕ ಜ್ಞಾನದಿಂದ ಜಗತ್ತನ್ನು ಒಂದುಗೂಡಿಸುವ ಸಂಕಲ್ಪ ಮಾಡುತ್ತಿದೆ ಎಂದು ಆರ್‌ಎಸ್‌ಎಸ್ ಮೈಸೂರು ವಿಭಾಗ ಕಾರ್ಯವಾಹ ಎಸ್.ಎಂ. ಮಹೇಶ್ ಅಭಿಪ್ರಾಯಿಸಿದರು.
ಮೈಸೂರು ವಿಭಾಗದ ಉದ್ಯೋಗಿ ಮತ್ತು ಮಂಡ್ಯ ಜಿಲ್ಲಾ ವಿದ್ಯಾರ್ಥಿ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಮೆರಿಕಾ ಶಕ್ತಿಯಿಂದ ವಿಶ್ವದ ದೊಡ್ಡಣ್ಣನಾಗಿ ಮೆರೆಯಲು ಯತ್ನಿಸಿದರೆ, ಬ್ರಿಟನ್ ಬುದ್ಧಿವಂತಿಕೆಯಿಂದ ಹಾಗೂ ಚೀನಾ ವ್ಯಾಪಾರವನ್ನು ವಿಸ್ತರಿಸುವ ಮೂಲಕ ಪ್ರಬಲ ರಾಷ್ಟ್ರವಾಗಲು ಯತ್ನಿಸಿದ್ದವು. ಆದರೆ ಭಾರತ ತನ್ನ ಸಂಸ್ಕೃತಿ, ಪರಂಪರೆಯ ಜ್ಞಾನದಿಂದಲೇ ವಿಶ್ವವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಉದಾಹರಣೆ ಸಮೇತ ವಿವರಿಸಿದರು.
ರಾಮನ ಆದರ್ಶ ಆಡಳಿತ, ಕೃಷ್ಣನ ಧರ್ಮದ ಆಡಳಿತವನ್ನು ಕಂಡಿರುವ ಭರತ ಖಂಡದ ಇತ್ತೀಚಿನ ದಿನಗಳಲ್ಲಿ ವಿಕೃತ ಮನಸ್ಸಿನ ಶಕ್ತಿಗಳು ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಿವೆ. ಹಿಂದೂ ಧರ್ಮವನ್ನು ಒಡೆದು ಮತಾಂತರದಂತಹ ಪಿಡುಗನ್ನು ನಮ್ಮ ನೆಲದಲ್ಲಿ ಪ್ರತಿಷ್ಠಾಪಿಸಲು ಮುಂದಾಗಿವೆ. ಇದರಿಂದ ನಮ್ಮ ಆಚರಣೆಗಳು, ಪರಂಪರೆಗಳ ಮೇಲೂ ಹೊಡೆತ ಬೀಳುತ್ತಿದೆ. ಅವಿಭಕ್ತ ಕುಟುಂಬಗಳೆಲ್ಲವೂ ವಿಭಕ್ತ ಕುಟುಂಬಗಳಾಗಿವೆ. ವಿದೇಶಿ ಮನಸ್ಥಿತಿಗೆ ದಾಸರಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮುದಾಯದ ಒಳಿತಿಗಾಗಿ ಜನಪದರು ಕಟ್ಟಿ ಬೆಳೆಸಿದ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸುವ ಮೂಲಕ ಸದೃಢ ಸಮಾಜ ನಿರ್ಮಿಸುವ ಅಗತ್ಯತೆ ಇದೆ. ಎಂತಹ ವಿಚ್ಛಿದ್ರಕಾರಕ ಶಕ್ತಿಗಳು ಬಂದರೂ ಮಟ್ಟ ಹಾಕುವ ಪರಿಪಾಠವನ್ನು ಹಿಂದೂ ಸಮಾಜ ಬೆಳೆಸಿಕೊಳ್ಳಬೇಕಿದೆ. ಭಾರತದ ಮೇಲೆ ನಡೆದ ನಿರಂತರ ಧಾಳಿಯಿಂದ ಕುಗ್ಗದೆ ಮುನ್ನಡೆದಿತ್ತೋ ಅದೇ ಮಾದರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕರು ಮುನ್ನಡೆದು ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದು ಪ್ರತಿಪಾದಿಸಿದರು.
ಶತಮಾನದ ಹೊಸ್ತಿಲಲ್ಲಿರುವ ರಾಷ್ಟ್ರೀಯ ಸ್ವಂಯಂಸೇವಕ ಸಂಘದೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಒಂದುಷ್ಟು ವಿಚಾರವಾದಿಗಳು ಬೆಳೆಸಿಕೊಂಡು ಕೋಮುವಾದಿ, ಅಲ್ಪಸಂಖ್ಯಾತರ ವಿರೋಧಿ ಎಂಬುದಾಗಿ ಬಿಂಬಿಸಲು ಮುಂದಾಗಿವೆ. ಸಂಘದಿಂದ ದೂರವಿದ್ದು, ಸಂಘದ ಆಳ ಅಗಲವನ್ನು ತಿಳಿಯದೇ ಮಾತನಾಡುವವರು ಇಂತಹ ಮನಸ್ಥಿತಿ ಉಳ್ಳವರಾಗಿದ್ದಾರೆ. ಸಂಘದ ಕಾರ್ಯಕ್ಷೇತ್ರ, ಸೇವಾ ಕಾರ್ಯವನ್ನು ತಿಳಿದ ವಿಶ್ವದ ಹಲವಾರು ರಾಷ್ಟ್ರಗಳು ಆರ್.ಎಸ್.ಎಸ್‌ನ್ನು ಒಪ್ಪಿಕೊಂಡಿವೆ, ಅಪ್ಪಿಕೊಂಡಿವೆ. ಇಂತಹ ಎರಡೂ ಮನಸ್ಥಿತಿಯುಳ್ಳ ಜನರ ನಡುವೆಯೂ ಸಂಘ ಅತ್ಯುತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಗಾಗ್ಗೆ ವಿರೋಧಿಗಳ ಮನಸ್ಥಿತಿಯನ್ನೂ ಬದಲಿಸಿ ತನ್ನ ಸಮಷ್ಠಿಯೊಳಗೆ ತೆಗೆದುಕೊಂಡು ಮುನ್ನಡೆಯುತ್ತಿದೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ ಎಂದರು.
ಸಂಘದ ಸ್ವಯಂ ಸೇವಕರು ಜೀವ ಮತ್ತು ಜೀವನವನ್ನು ಬಿಟ್ಟು ಕೆಲಸ ಮಾಡುತ್ತಾರೆ. ಇದಕ್ಕೊಂದು ಉದಾಹರಣೆ ಎಂದರೆ ಕೋವಿಡ್ ಸಂದರ್ಭದಲ್ಲಿ ತಮ್ಮ ಮನೆಯ ಕಷ್ಟವನ್ನೂ ಮರೆದು ಸಮಾಜದ ಕಷ್ಟಕ್ಕೆ ಸ್ಪಂಧಿಸಿದರು. ಯಾವುದೇ ತರಬೇತಿ ಇಲ್ಲದೆಯೂ ಶವ ಸಂಸ್ಕಾರ ಮಾಡಿದ್ದನ್ನು ಯಾರೂ ಅಲ್ಲಗೆಳೆಯರು. ಸಂಘ ಎಂದಿಗೂ ತನ್ನ ಕಾರ್ಯವನ್ನು ಬಿಡದೆ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಎಚ್.ಎಸ್. ಮುದ್ದೇಗೌಡ ಮಾತನಾಡಿ, ಹುಸಿ ವಿಚಾರವಾದಿಗಳ ಗುಂಪು ಅಗ್ಗದ ಪ್ರಚಾರಕ್ಕಾಗಿ ಆರ್.ಎಸ್.ಎಸ್. ಬಗ್ಗೆ ಟೀಕಿಸುತ್ತಾರೆ. ಸಂಘದ ಸಹಜಸ್ಥಿತಿಯನ್ನು ಮನಗಂಡು ಮಾತನಾಡುವುದು ಒಳಿತು. ಇಂತಹ ಟೀಕೆಗಳು ಸತ್ಯವಾಗಿದ್ದರೆ ಶತಮಾನದ ಹೊಸ್ತಿಲಲ್ಲಿರುವ ಸಂಘ ವಿಚಿದ್ರವಾಗುತ್ತಿತ್ತು ಎಂಬುದನ್ನು ಮನಗಾಣಬೇಕು. ಇಂತಹ ಹಾದಿಬದಿಯ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಯುವಜನತೆ ರಾಜಕಾರಣಿಗಳ ಕೈಗೊಂಬೆಗಳಾಗುತ್ತಿದ್ದಾರೆ
ರೈತರು, ವ್ಯಾಪಾರಿಗಳು, ಅಧಿಕಾರಿಗಳು, ರಾಜಕಾರಣಿಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ಈ ದೇಶದ ಯುವಜನತೆ ದೇಶ ಕಟ್ಟುವ ಕೆಲಸ ಮಾಡುವ ಸಂಕಲ್ಪ ತೊಡಬೇಕಿದೆ. ಆದರೆ ಯುವಜನತೆ ರಾಜಕಾರಣಿಗಳ ಕೈಗೊಂಬೆಗಳಾಗುತ್ತಿದ್ದಾರೆ. ಶ್ರಮವಿಲ್ಲದ ದುಡಿಮೆ ಬೇಕಾಗಿದೆ. 254 ರಾಷ್ಟ್ರಗಳ ಪೈಕಿ ಯಾವುದೂ ವಿಶ್ವಗುರುವಾಗಲಿಲ್ಲ. 130 ಕೋಟಿ ಜನರಿರುವ ಹಿಂದೂ ರಾಷ್ಟ್ರ ವಿಶ್ವಗುರುವಾಗಿ ಹೊರಹೊಮ್ಮಿದೆ ಎಂದರೆ ಯುವಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ದೇಶಕಟ್ಟುವ ಕೆಲಸವನ್ನು ಮಾಡಬೇಕಿದೆ
ಕುಂಭಮೇಳ ಹಿಂದೂ ಸಂಸ್ಕೃತಿಯ ಪ್ರತೀಕ. ಇಂತಹ ಆಚರಣೆಯನ್ನೂ ವಿರೋಧಿಸುವುದು ಸರಿಯಲ್ಲ. ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸುವುದು ನಮ್ಮ ಕರ್ತವ್ಯ. ಅನೇಕ ಭಾಗ್ಯಗಳನ್ನು ನೀಡಿ ಜನರನ್ನು ನಿರುದ್ಯೋಗಿಗಳನ್ನಾಗಿಸುವುದನ್ನು ಬಿಟ್ಟು ದೇಶಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದು ವಿರೋಧಿಗಳಿಗೆ ತಮ್ಮ ಎಂದಿನ ಮಾತಿನಲ್ಲೇ ಚಾಟಿ ಬೀಸಿದರು.

ವ್ಯಕ್ತಿ ಮಾನವೀಯ ವೌಲ್ಯಗಳನ್ನು ಮರೆಯುತ್ತಿದ್ದಾನೆ
ವಿಜ್ಞಾನದಿಂದಾಗಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ನಾಗರೀಕತೆ ಬೆಳೆದಂತೆಲ್ಲಾ ಮನುಷ್ಯ ಮಾನವೀಯ ವೌಲ್ಯಗಳನ್ನು ಮರೆಯುತ್ತಿದ್ದಾನೆ. ಇಂತಹ ಸಮಾಜ ಬೇಕಿಲ್ಲ. ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ, ಸೇವಾ ಮನಸ್ಥಿತಿ ಇರುವ ಸ್ವಯಂಸೇವಕರ ಅಗತ್ಯತೆ ಇದೆ. ಈ ನಿಟ್ಟನಲ್ಲಿ ಆರ್.ಎಸ್‌ಎಸ್. ಕಾರ್ಯ ಶ್ಲಾಘನೀಯ ಎಂದರು.

ಆಟೋಟಗಳು, ಯೋಗ ಪ್ರದರ್ಶನ
ಕಾರ್ಯಕ್ರಮಕ್ಕೂ ಮುನ್ನ ನಗರದ ಹೊಸಹಳ್ಳಿ ವೃತ್ತದಿಂದ ಗಣವೇಷಧಾರಿಗಳು ನಗರ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಗಣವೇಷಧಾರಿಗಳಿಗೆ ನಾಗರೀಕರು ಹೂಮಳೆ ಸುರಿಸಿ ಸ್ವಾಗತಿಸಿ ಬೀಳ್ಕೊಟ್ಟ ದೃಶ್ಯ ಕಂಡುಬಂತು. ಶಿಬಿರಾರ್ಥಿಗಳ ಆಟೋಟಗಳು, ಯೋಗ ಪ್ರದರ್ಶನ ಸೇರಿದಂತೆ ವಿವಿಧ ವ್ಯಾಯಾಮ ಕಸರತ್ತುಗಳು ಪುರಜನರ ಮನಸೆಳೆಯಿತು. ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಸಂಜೀವ್‌ಕುಮಾರ್, ಜಿಲ್ಲಾ ವ್ಯವಸ್ಥಾ ಪ್ರಮುಖ್ ಹನಿಯಂಬಾಡಿ ಕೃಷ್ಣೇಗೌಡ, ಸಂಘಚಾಲಕ ರವಿಕುಮಾರ್ ಸಮಾರಂಭದಲ್ಲಿ ಭಾಗವಹಿಸಿದ್ದರು.












Click it and Unblock the Notifications