ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ನಿಂದ ದಲಿತ ಸಿಎಂ ಮಾಡುವೆ: ಎಚ್‌ಡಿಕೆ
ಮಳವಳ್ಳಿ, ಏ.14: ಜೆಡಿಎಸ್ ಪಕ್ಷದಿಂದ ನನ್ನ ಜೀವಿತಾವಧಿಯೊಳಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.
ಮಳವಳ್ಳಿಯಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು; "ಹಿಂದೆ ನಮ್ಮ ಪಕ್ಷ ಹಾಸನ ಜಿಲ್ಲಾ ಪಂಚಾಯಿತಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ಆಮೇಲೆ ಅನೇಕ ದಲಿತ ನಾಯಕರು ಪಕ್ಷದಲ್ಲಿ, ಸರಕಾರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು" ಎಂದರು.
ಆ ಸಂದರ್ಭದಲ್ಲಿ ನನ್ನ ಸಹೋದರ ರೇವಣ್ಣ ಅವರೂ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿಗೆ ಗೆದ್ದು ಬಂದಿದ್ದರು. ಆದರೆ, ದೇವೇಗೌಡರು ಎಂಎ ಪದವೀಧರನಾಗಿದ್ದ ದಲಿತ ಅಭ್ಯರ್ಥಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಜಾತ್ಯತೀತ ಜನತಾದಳದಿಂದ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಬಂದೇ ಬರುತ್ತದೆ. ನಾನು ಭೂಮಿಗೆ ಹೋಗುವ ಮುನ್ನ ದಲಿತ ಮುಖ್ಯಮಂತ್ರಿಯನ್ನು ಮಾಡುತ್ತೇನೆ. ಈ ನಿರೀಕ್ಷೆಯನ್ನು ಜೆಡಿಎಸ್ ಸಾಕಾರಗೊಳಿಸುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ಮೊದಲಿನಿಂದಲೂ ಜಾತ್ಯತೀತ, ಧರ್ಮಾತೀತವಾಗಿ ಕೆಲಸ ಮಾಡಿಕೊಂಡು ಬರುತ್ತೇನೆ. ನನ್ನನ್ನು ದಿನನಿತ್ಯವೂ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದು ಭೇಟಿ ಮಾಡುತ್ತಾರೆ. ಅವರನ್ನೆಲ್ಲ ನಾನು, ನೀವು ಯಾವ ಜಾತಿ? ಯಾವ ಧರ್ಮ? ಎಂದು ಎಂದೂ ಕೇಳಿಲ್ಲ. ನಿಮ್ಮ ಕಷ್ಟವೇನು? ಎಂದಷ್ಟೇ ಕೇಳುತ್ತೇನೆ. ಇದು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಧರ್ಮ ಎಂದು ಅವರು ಹೇಳಿದರು.
ನನಗೆ ಐದು ವರ್ಷ ಅಧಿಕಾರ ಕೊಡಿ. ನೀವು ನೆನಪಲಿಟ್ಟುಕೊಳ್ಳುವ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಹಂಗಿನ ಸರಕಾರ ಖಂಡಿತಾ ಬೇಡ. ರಾಜ್ಯವು ಕಳೆದ ಎಪ್ಪತ್ತೈದು ವರ್ಷಗಳಲ್ಲಿ ನೀರಾವರಿ ವಿಷಯಕ್ಕೆ ಸಂಬಂಧಿಸಿ ಅನ್ಯಾಯಕ್ಕೆ ತುತ್ತಾಗಿದೆ. ನನಗೆ ಐದು ವರ್ಷ ಅಧಿಕಾರ ಕೊಟ್ಟು ನೋಡಿ. ಆ ಅನ್ಯಾಯವನ್ನು ಐದೇ ವರ್ಷಗಳಲ್ಲಿ ಸರಿ ಮಾಡುತ್ತೇನೆ. ಇಲ್ಲವಾದರೆ ನಮ್ಮ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಅವರು ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಸಕ ಡಾ.ಅನ್ನದಾನಿ, ಮಂಡ್ಯ ಜಿಲ್ಲೆಯ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಹಾಜರಿದ್ದರು.
ಈಶ್ವರಪ್ಪ ಒಂದೆರಡು ದಿನದಲ್ಲಿ ರಾಜೀನಾಮೆ ಕೊಡಬಹುದು:
ಇದಕ್ಕೂ ಮುನ್ನ ಚನ್ನಪಟ್ಟಣದಲ್ಲಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ, ಗುತ್ತಿಗೆದಾರ ಸಂತೋಷ್ ಸಾವಿನ ಹಿಂದೆ ಅನೇಕ ಅನುಮಾನಗಳು ಮನೆ ಮಾಡಿದ್ದು, ಸೂಕ್ತ ತನಿಖೆ ನಡೆಸುವ ಮೂಲಕ ಜನರ ಮುಂದೆ ಸತ್ಯಾಂಶವನ್ನು ಬಿಚ್ಚಿಡಬೇಕು ಎಂದು ಒತ್ತಾಯ ಮಾಡಿದರು.
"ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವುದು ಉತ್ತಮ. ಅವರು ಇವತ್ತು ಅಥವಾ ನಾಳೆ ರಾಜೀನಾಮೆ ಕೊಡಬಹುದು. ಅವರ ಹೈಕಮಾಂಡ್ ಈ ಬಗ್ಗೆ ಹೇಳುತ್ತಾರೆ ಅನ್ನಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮೊದಲು ಅವರು ರಾಜೀನಾಮೆ ನೀಡುವುದು ಸೂಕ್ತ" ಎಂದರು.
ಸಂತೋಷ್ ಸಾವಿನ ಹಿಂದೆ ಹಲವಾರು ಸಂಶಯಗಳಿವೆ. ಜನರಲ್ಲಿ ಅನೇಕ ಪ್ರಶ್ನೆಗಳೂ ಇವೆ. ಸತ್ಯಾಂಶವನ್ನು ಹೊರ ತರಲು ತನಿಖೆಯಾಗಬೇಕು. ಇದು ಸರಕಾರದ ಜವಾಬ್ದಾರಿ ಎಂದು ಅವರು ಹೇಳಿದರು. ಮೃತ ವ್ಯಕ್ತಿ ನಾಲ್ಕು ಕೋಟಿ ರೂಪಾಯಿ ಕಾಮಗಾರಿ ಸರಕಾರದ ಕಾರ್ಯಾದೇಶ ಇಲ್ಲದೆ, ವರ್ಕ್ ಎಸ್ಟಿಮೇಟ್ ಇಲ್ಲದೇ ಕೆಲಸ ಮಾಡಿದ್ದು ಹೇಗೆ? ಅವರಿಗೆ ಕಾಮಗಾರಿ ಮಾಡಲು ಅನುಮತಿ ಕೊಟ್ಟವರು ಯಾರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಯಾವ ಎಂಜಿನಿಯರ್ ಅಥವಾ ಸರಕಾರಿ ಸಂಸ್ಥೆ ಗಮನಕ್ಕೆ ಬಾರದೇ ಪೇಮೆಂಟ್ ನೀಡಬೇಕು ಎಂದರೆ ತಾಂತ್ರಿಕ ಸಮಸ್ಯೆ ಇದೆ. ಇದರ ನಡುವೆ ಪರ್ಸೆಂಟೆಜ್ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಈ ಕಾರಣಕ್ಕೆ ಸಂತೋಷ್ ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ಇವೆ. ಅಲ್ಲದೆ, ಮೃತ ವ್ಯಕ್ತಿಯ ಜತೆ ಇಬ್ಬರು ಸ್ನೇಹಿತರು ಹೋಗಿದ್ದರು ಎಂದ ಅವರು; ಸಂತೋಷ್ ಮಾತ್ರ ಒಂದು ಕೊಠಡಿಗೆ ಹೋಗಿದ್ದಾರೆ, ಉಳಿದ ಇಬ್ಬರು ಒಂದು ಕೊಠಡಿಗೆ ಏಕೆ ಹೋಗಿದ್ದರು? ಇವರೆಲ್ಲ ಉಡುಪಿಗೆ ಏಕೆ ಹೋಗಿದ್ದರು? ಸರಕಾರವು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನು ನೇಮಿಸಿ ಹಾಕಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.












Click it and Unblock the Notifications