ಹೇಮಾವತಿ ನದಿಯಿಂದ ನಾಲೆಗೆ ಹರಿಯದ ನೀರು: ಕಾದು ಸುಸ್ತಾದ ರೈತರು!
ಮಂಡ್ಯ, ಫೆಬ್ರವರಿ 19: ಸದ್ಯ ಕೆಆರ್ ಎಸ್ ಜಲಾಶಯದಲ್ಲಿ ನೀರಿದೆ ಜತೆಗೆ ಕಾವೇರಿ, ಲಕ್ಷ್ಮಣತೀರ್ಥ ಮತ್ತು ಹೇಮಾವತಿ ನದಿಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನೀರಿನ ಪ್ರಮಾಣ ಚೆನ್ನಾಗಿಯೇ ಇದೆ. ಆದರೆ ನಾಲೆಗಳಿಗೆ ನೀರು ಹರಿಸದ ಕಾರಣದಿಂದಾಗಿ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಹಾಗೆನೋಡಿದರೆ ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಚೆನ್ನಾಗಿಯೇ ಸುರಿದಿತ್ತು. ಪರಿಣಾಮ ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳು ಪ್ರವಾಹೋಪಾದಿಯಲ್ಲಿ ಹರಿದಿದ್ದವು. ಅಷ್ಟೇ ಅಲ್ಲದೆ ಕೆಆರ್ ಎಸ್ ಜಲಾಶಯ ಬಹುಬೇಗ ಭರ್ತಿಯಾಗಿತ್ತು. ಅಲ್ಲದೆ ಇಲ್ಲಿವರೆಗೂ ನೀರಿನ ಸಂಗ್ರಹವೂ ಉತ್ತಮವಾಗಿಯೇ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದೆಲ್ಲದರ ಪರಿಣಾಮ ಇವತ್ತು ಕೆ.ಆರ್.ಎಸ್ ಜಲಾಶಯ, ಹೇಮಾವತಿ ಅಣೆಕಟ್ಟೆ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಅಣೆಕಟ್ಟೆಗಳು ತುಂಬಿ ತುಳುಕಾಡಿದ್ದರೂ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ತಾಲೂಕಿನ ರೈತರು ಹೇಮಾವತಿ ನದಿ ನೀರಿಗಾಗಿ ಪರಿತಪಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಅಲ್ಲದೆ ನೀರು ಹರಿಸುವಂತೆ ಮನವಿ ಮಾಡುತ್ತಿದ್ದಾರೆ. ಉತ್ತಮ ಮುಂಗಾರಿನ ಕಾರಣ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಬೇಸಿಗೆ ಆರಂಭವಾದರೂ ನೀರಿನ ಪ್ರಮಾಣ ಚೆನ್ನಾಗಿದೆ.
ಕೃಷಿ ಮಾಡಲು ನೀರಿಗಾಗಿ ಕಾಯುವ ಅನ್ನದಾತರು
ಜಲಾಶಯಗಳಲ್ಲಿ ನೀರಿದ್ದರೂ ರೈತರ ಹೊಲಗದ್ದೆಗಳಿಗೆ ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಕೆ.ಆರ್.ಎಸ್ ಜಲಾಶಯ ವ್ಯಾಪ್ತಿಯ ನೀರಾವರಿ ಸಲಹಾ ಸಮಿತಿಯ ಸಭೆ ನಡೆದು ಕೆ.ಆರ್.ಎಸ್ ಜಲಾಶಯದಿಂದ ಕಟ್ಟು ನೀರು ಪದ್ದತಿಯಡಿ ವಿಶ್ವೇಶರಯ್ಯ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಆದರೆ ಹೇಮೆಯಲ್ಲಿ ನೀರಿದ್ದರೂ ಇದುವರೆಗೂ ಹೇಮೆಯ ನಾಲೆಗಳಿಗೆ ನೀರು ಹರಿಸುವ ಸಂಬಂಧ ಒಂದೇ ಒಂದು ನೀರಾವರಿ ಸಲಹಾ ಸಮಿತಿ ಸಭೆ ನಡೆದಿಲ್ಲ.
ಇನ್ನು ನೀರು ಬಿಡುವ ಬಗ್ಗೆ ಕನಿಷ್ಠ ಮಾಹಿತಿ ನೀಡುವ ಗೋಜಿಗೂ ನೀರಾವರಿ ಇಲಾಖೆ ಮುಂದಾಗಿಲ್ಲ. ಜಲಾಶಯದಲ್ಲಿ ನೀರಿರುವುದರಿಂದ ನೀರು ಯಾವಾಗ ಬಿಡುತ್ತಾರೆ ಎಂದು ರೈತರು ತಮ್ಮ ತಮ್ಮ ಹೊಲಗದ್ದೆಗಳನ್ನು ಬಿತ್ತನೆಗೆ ಸಜ್ಜುಗೊಳಿಸಿಕೊಂಡು ಕಾಯುತ್ತಿರುವುದು ಕಾಣಿಸುತ್ತಿದೆ. ಹೇಮಾವತಿ ಜಲಾಶಯದ ಮುಖ್ಯನಾಲೆ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ 106ನೇ ಕಿ.ಮೀ ಯಿಂದ ಆರಂಭವಾಗಿ 150.97 ನೇ ಕಿ.ಮೀ ವರೆಗೆ ಒಟ್ಟು 45.975 ಕಿ.ಮೀ ಉದ್ದ ಹರಿಯುತ್ತದೆ.

ರೈತರಿಗೆ ಆಶ್ರಯವಾಗಿರುವ ಹೇಮಾವತಿ ನೀರು
ಈ ನಾಲಾ ವ್ಯಾಪ್ತಿಯಲ್ಲಿ ವಿತರಣಾ ನಾಲಾ ಸಂಖ್ಯೆ 47 ರಿಂದ 64 ರವರೆಗೆ ಒಟ್ಟು 17 ವಿತರಣಾ ನಾಲೆಗಳಿದ್ದು ಒಟ್ಟು 54088 ಎಕರೆ ಪ್ರದೇಶ ಅರೆ ನೀರಾವರಿಗೆ ಒಳಪಟ್ಟಿದೆ. ಹೇಮಾವತಿ ಜಲಾಶಯ ಯೋಜನಾ ವ್ಯಾಪ್ತಿಗೆ ಸೇರಿದ 106 ಕೆರೆಗಳು, ಸಣ್ಣ ನೀರಾವರಿ ಇಲಾಖೆಗೆ 08 ಕೆರೆಗಳು ಮತ್ತು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಸೇರಿದ 121 ಕೆರೆಗಳು ಸೇರಿ ತಾಲೂಕಿನ ಒಟ್ಟು 235 ಕೆರೆಗಳು ಹೇಮೆಯ ನೀರನ್ನೆ ಆಶ್ರಯಿಸಿ ತಮ್ಮ ಒಡಲು ತುಂಬಿಸಿಕೊಂಡು ಜನ ಜಾನುವಾರುಗಳ ಉಪಯೋಗಕ್ಕೆ ಬಳಕೆಯಾಗುತ್ತಿವೆ.
ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಬಲ ಮತ್ತು ಎಡದಂಡೆ ನಾಲೆ ಮತ್ತು ಹೇಮಗಿರಿ ನಾಲಾ ವ್ಯಾಪ್ತಿಯ 16556 ಎಕರೆ ಕೃಷಿ ಭೂಮಿ ಹೇಮೆಯ ನೀರನ್ನು ಅಶ್ರಯಿಸಿ ನಿಂತಿವೆ. ರಾಜ್ಯದ ಆಹಾರ ಉತ್ಪಾದಣಾ ಕ್ಷೇತ್ರಕ್ಕೆ ಹೇಮೆಯ ಬಯಲಿನ ಪಾತ್ರವೂ ದೊಡ್ಡದಿದೆ. ನದಿ ಅಣೆಕಟ್ಟೆ ನಾಲಾ ವ್ಯಾಪ್ತಿಯಲ್ಲಿ ರೈತರು ಭತ್ತ ಮತ್ತು ಕಬ್ಬು, ತೆಂಗು, ಅಡಿಕೆ, ಶುಂಠಿ ಪ್ರಮುಖವಾಗಿ ಬೆಳೆದರೆ, ಅರೆ ನೀರಾವರಿಗೆ ಸೇರಿದ ಹೇಮಾವತಿ ಜಲಾಶಯದ ಎಡದಂಡೆ ನಾಲೆ ಮತ್ತು ಕೆರೆ ಬಯಲಿನಲ್ಲಿ ಭತ್ತ ಮತ್ತು ಕಬ್ಬಿನ ಜೊತೆಗೆ ರಾಗಿ. ಜೋಳ, ಹಲಸಂದೆ, ಹುರುಳಿ, ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ.
ಸರ್ಕಾರದಿಂದ ಮಲತಾಯಿ ಧೋರಣೆಯ ಆರೋಪ
ಹೀಗಿರುವಾಗ ರಾಜ್ಯ ಸರ್ಕಾರ ಇದುವೆರಗೂ ಹೇಮಾವತಿ ಎಡದಂಡೆ ನಾಲೆಗಳು ಮತ್ತು ನದಿ ಅಣೆಕಟ್ಟೆ ನಾಲೆಗಳಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಯಾವುದೇ ಜಲನೀತಿ ಪ್ರಕಟಿಸದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಕೆ.ಆರ್.ಎಸ್ ಜಲಾಶಯ ವ್ಯಾಪ್ತಿಯ ರೈತರಿಗೊಂದು ಹೇಮಾವತಿ ಜಲಾಶಯ ವ್ಯಾಪ್ತಿಯ ರೈತರಿಗೊಂದು ನೀರಾವರಿ ನೀತಿ ಅನುಸರಿಸಿ ರಾಜ್ಯ ಸರ್ಕಾರ ಹೇಮೆಯ ರೈತರ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ ಎಂಬ ಆರೋಪವನ್ನು ರೈತರು ಮಾಡುತ್ತಿದ್ದಾರೆ.

ಹೇಮಾವತಿ ಜಲಾಶಯದಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ತುಮಕೂರು ಭಾಗಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಹೇಮಾವತಿ ನೀರು ತುಮಕೂರು ಭಾಗಕ್ಕೆ ಹರಿದು ಹೋಗುತ್ತಿದ್ದರೂ ಮಂಡ್ಯ ಜಿಲ್ಲೆಯ ರಾಜಕಾರಣಿಗಳು ಧ್ವನಿ ಎತ್ತಿ ತಮ್ಮ ಭಾಗದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮುಂದಾಗುತ್ತಿಲ್ಲ. ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಸ್ವಕ್ಷೇತ್ರ ನಾಗಮಂಗಲವೂ ಹೇಮೆಯ ನೀರಿನಿಂದ ವಂಚಿತವಾಗಿದ್ದರೂ ಗಮನಹರಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಎಚ್ಚರಿಕೆ ನೀಡಿದ ಮಾಜಿ ಸಚಿವ ಡಾ.ನಾರಾಯಣಗೌಡ
ಈ ಕುರಿತಂತೆ ಮಾತನಾಡಿರುವ ಮಾಜಿ ಸಚಿವ ಡಾ.ನಾರಾಯಣಗೌಡ ಅವರು ತಕ್ಷಣವೇ ನೀರಾವರಿ ಸಲಹಾ ಸಮಿತಿಯ ಸಭೆ ಕರೆಸಿ ಮಂಡ್ಯ ಜಿಲ್ಲೆಯ ರೈತರ ಹೊಲಗದ್ದೆಗಳಿಗೆ ನಿಯಮಾನುಸಾರ ನೀರು ಹರಿಸುವ ಪ್ರಯತ್ನಕ್ಕೆ ಸಚಿವ ಚಲುವರಾಯಸ್ವಾಮಿ ಮುಂದಾಗಬೇಕು ಎಂದು ಆಗ್ರಹಿಸಿದ್ದು, ತಕ್ಷಣವೇ ಹೇಮಾವತಿ ಜಲಾಶಯದ ಎಡದಂಡೆ ನಾಲೆಗೆ ನೀರು ಹರಿಸಬೇಕು. ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಹೇಮಗಿರಿ ನಾಲೆಗಳಿಗೆ ಭತ್ತದ ಬೆಳೆಗೆ ಖಾಯಂ ನೀರು ಹರಿಸಬೇಕು ತಪ್ಪಿದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications