Mandya Rain: ಮಂಡ್ಯ ರೈತರಿಗೆ ಖುಷಿ ತಂದ 'ಕೃತ್ತಿಕಾ' ಮಳೆ
ಪೂರ್ವ ಮುಂಗಾರು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 31.7 ಮಿ.ಮೀ. ಮಳೆಯಾಗಿದೆ. ಕಳೆದೊಂದು ವಾರದಿಂದ 66.1 ಮಿ.ಮೀ. ಮಳೆಯಾಗಿರುವುದು ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. 24 ಗಂಟೆಗಳಲ್ಲಿ ಶ್ರೀರಂಗಪಟ್ಟಣ ತಾಲೂಕಿನಾದ್ಯಂತ 72.9 ಮಿ.ಮೀ. ಮಳೆಯಾಗಿದ್ದರೆ, ಕಳೆದೊಂದು ವಾರದಿಂದ 128.8 ಮಿ.ಮೀ. ಮಳೆಯಾಗಿದೆ. ನಾಗಮಂಗಲ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದ್ದು, 24 ಗಂಟೆಗಳಲ್ಲಿ 5.1 ಮಿ.ಮೀ. ಮಳೆಯಾಗಿದೆ, ಕಳೆದೊಂದು ವಾರದಿಂದ 34 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ವರದಿಯಾಗಿದೆ.

ಸೋಮವಾರ ಜಿಲ್ಲೆಯಲ್ಲಿ ಭಾರಿ ಮಳೆ
ಸೋಮವಾರ ರಾತ್ರಿ ಜಿಲ್ಲೆಯ ಎಲ್ಲೆಡೆ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ನಾಗಮಂಗಲ ತಾಲೂಕಿನಲ್ಲಿ ಮಾತ್ರ 6.6 ಮಿ.ಮೀ ಮಳೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 46.6 ಮಿ.ಮೀ. ಮಳೆಯಾಗಬೇಕಿದ್ದರೂ ಕೇವಲ 7.5 ಮಿ.ಮೀ. ಮಳೆಯಾಗಿದ್ದು 83.9 ಮಿ.ಮೀ. ಕೊರತೆ ಎದುರಾಗಿತ್ತು.
ಮೇ ತಿಂಗಳ ಮೊದಲ ವಾರದಲ್ಲಿ ಮಳೆಯಾಗಲಿಲ್ಲ. ಮೇ 7 ರಿಂದ 14ರವರೆಗೆ ಜಿಲ್ಲೆಯೊಳಗೆ ವಾಡಿಕೆ ಮಳೆ 20.2 ಮಿ.ಮೀ.ಗೆ ಬದಲಾಗಿ 66.1 ಮಿ.ಮೀ.ನಷ್ಟು ಮಳೆಯಾಗಿದೆ. ರಣಬಿಸಿಲು, ಶಾಖದ ಅಲೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ತಂಪಾದ ಅನುಭವ ನೀಡಿದೆ. ರೈತರು ಮುಂಗಾರು ಕೃಷಿ ಚಟುವಟಿಕೆಗೆ ಸಿದ್ಧತೆಯನ್ನು ಆರಂಭಿಸುವುದಕ್ಕೆ ಅನುವು ಮಾಡಿಕೊಟ್ಟಿದೆ.
ರೈತರಿಗೆ ನೆಮ್ಮದಿ ತಂದ ಮಳೆ
ಕಳೆದ ವರ್ಷ ಮತ್ತು ಈ ಬಾರಿ ಪೂರ್ವ ಮುಂಗಾರು ನಿರೀಕ್ಷೆಯಂತೆ ಇರಲಿಲ್ಲ. ಇದರಿಂದ ರೈತರು ಬೇಸಿಗೆ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗಲೇ ಇಲ್ಲ. ಈ ಬಾರಿಯ ಬೇಸಿಗೆಯಲ್ಲಿ ತೀವ್ರ ಬಿಸಿಲು ಇತ್ತು. ರಣಬಿಸಿಲಿಗೆ ತೆಂಗು, ಅಡಿಕೆ ಬೆಳೆಗಳು ನಲುಗಿಹೋದವು. ರೈತರು ಬೆಳೆದು ನಿಂತ ಬೆಳೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಕೆರೆ-ಕಟ್ಟೆಗಳೆಲ್ಲವೂ ಒಣಗಿ ನೀರಿಗೆ ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿತ್ತು.
ಮೇ ತಿಂಗಳ ಎರಡನೇ ವಾರದಿಂದ ಆರಂಭಗೊಂಡಿರುವ ಪೂರ್ವ ಮುಂಗಾರು ರೈತರಿಗೆ ಕೊಂಚ ಸಮಾಧಾನವನ್ನು ತಂದಿದೆ. ಮಳೆಯಿಂದ ಬರಡಾಗಿದ್ದ ಭೂಮಿ ಈಗ ಸ್ವಲ್ಪ ಮಟ್ಟಿಗೆ ತಂಪಾಗಿದೆ. ವರುಣನ ಕೃಪೆಗಾಗಿ ಜಿಲ್ಲೆಯ ಹಲವಾರು ಹಳ್ಳಿಗಳ ಜನರು ವಿಭಿನ್ನ ರೀತಿಯ ಆಚರಣೆ, ಪೂಜೆ ಪುನಸ್ಕಾರ ಮಾಡಿ ವರುಣದೇವನಿಗೆ ಪ್ರಾರ್ಥಿಸಿದ್ದರು. ಮಳೆಯ ವಾತಾವರಣ ಹೀಗೆಯೇ ಮುಂದುವರೆಯಲಿ ಎನ್ನುವುದು ರೈತರ ಆಶಯವೂ ಆಗಿದೆ.












Click it and Unblock the Notifications