ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ ದಿಢೀರ್ ಕ್ಯಾನ್ಸಲ್, ಕಾರಣವೇನು?
ಒಂದೆಡೆ ಕಾಂಗ್ರೆಸ್ ಸಾಲು ಸಾಲಾಗಿ ಸಮಾವೇಶಗಳನ್ನು ಆಯೋಜಿಸಿ ಶಕ್ತಿ ಪ್ರದರ್ಶನ ಮಾಡುತ್ತಿದೆ. ಇದಕ್ಕೆ ಟಕ್ಕರ್ ಕೊಡಲು ಜೆಡಿಎಸ್ ಕೂಡ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಹಾಗೂ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಮಂಡ್ಯದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಿತ್ತು. ಇದೀಗ ಆ ಕಾರ್ಯಕ್ರಮವನ್ನು ದಿಢೀರನೆ ಮುಂದೂಡಲಾಗಿದೆ.
ಹೌದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನದ ಅಂಗವಾಗಿ ಮಂಡ್ಯದಲ್ಲಿ ಇದೇ ಡಿಸೆಂಬರ್ 15ರಂದು ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾಹಿತಿ ನೀಡಿದ್ದಾರೆ.

ಮಂಡ್ಯ ನಗರದಲ್ಲಿ ಡಿಸೆಂಬರ್ 20ರಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಕಾರಣ ಈ ಸಮಾವೇಶವನ್ನು ಮುಂಡೂಡಿರುವುದಾಗಿ ಅವರು ಹೇಳಿದ್ದಾರೆ. ಸಾಹಿತ್ಯ ಸಮ್ಮೇಳನದ ಅವಧಿಯಲ್ಲಿ ಅಭಿನಂದನಾ ಸಮಾರಂಭ ನಡೆಸುವುದರಿಂದ ಗೊಂದಲ ಉಂಟಾಗುತ್ತದೆ. ಹಾಗಾಗಿ ಈ ಅಭಿನಂದನಾ ಕಾರ್ಯಕ್ರಮವನ್ನು ಮುಂದೂಡುವಂತೆ ಎಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ. ಅದರಂತೆ ಸದ್ಯಕ್ಕೆ ಈ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಪುಟ್ಟರಾಜು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಸಮಾರಂಭ ಮುಂದೂಡಿಕೆ ಮಾಡಲು ಬೇರೆ ಯಾವ ಕಾರಣ ಕೂಡ ಇಲ್ಲ. ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ ಆದ ಬಳಿಕ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಸಚಿವ ಚೆಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ: ಪುಟ್ಟರಾಜು ಅವರು ಕಾಂಗ್ರೆಸ್ ಸಚಿವ ಚೆಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ಇದೆಲ್ಲ ಬಹಳ ದಿನ ನಡೆಯಲ್ಲ, ರಾಜಕಾರಣದಲ್ಲಿ ನಾನೂ ಅಧಿಕಾರ ನೋಡಿದ್ದೀನಿ. ಮೊದಲು ಗೌರವದಿಂದ ಮಾತನಾಡುವುದನ್ನು ಅವರು ಕಲಿಯಬೇಕು, ಇದನ್ನು ನಿಲ್ಲಿಸದಿದ್ರೆ ನಾವು ಕೂಡ ನಮ್ಮ ಶೈಲಿಯಲ್ಲೇ ಮಾತನಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್‌ನವರು ಚೆಲುವರಾಯಸ್ವಾಮಿ ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆ ಇರಬೇಕೋ, ಡಿಸಿಎಂ ಡಿ.ಕೆ.ಶಿವಕುಮಾರ್ ಕಡೆಗೆ ಇರಬೇಕೋ ಎನ್ನುವ ಗೊಂದಲದಲ್ಲಿಲ್ಲ. ನಾವೆಲ್ಲ ಎಲ್ಲಿದ್ರೂ ದೇವೇಗೌಡರ ಕಡೇನೇ ಇರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ನಿಖಿಲ್ ಸೋತಿದ್ದು ನಮ್ಮಿಂದ ಎಂಬರ್ಥದಲ್ಲಿ ಅವರು ಮಾತನಾಡುತ್ತಾರೆ. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಾಗಲೂ ನಿಖಿಲ್ ಚುನಾವಣೆಯಲ್ಲಿ ಸೋತರು. ಆಗ ಇವರೆಲ್ಲ ಏನು ಮಾಡಿದರು? ಮಂಡ್ಯ ಜನ ಅಂಬರೀಷ್ ಮೇಲಿದ್ದ ಪ್ರೀತಿಯಿಂದ ಸುಮಲತಾ ಅವರನ್ನು ಗೆಲ್ಲಿಸಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಜೆಡಿಎಸ್ ತವರು ಜಿಲ್ಲೆಯಾದ ಹಾಸನದಲ್ಲಿ ಕಾಂಗ್ರೆಸ್ ಬೃಹತ್ ಮಟ್ಟದ ಸಮಾವೇಶ ಆಯೋಜಿಸಿತ್ತು. ಈ ಮೂಲಕ ಜೆಡಿಎಸ್ ನೆಲದಲ್ಲಿ ಕಾಂಗ್ರೆಸ್ ಕಹಳೆ ಮೊಳಗಿಸಿ, ಟಕ್ಕರ್ ಕೊಟ್ಟಿದೆ ಎನ್ನಲಾಗಿದೆ. ಇದು ದಳ ನಾಯಕರ ಕೋಪಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೋಟೆಯಾಗಿದ್ದ ಮಂಡ್ಯದಲ್ಲೇ ಗೆದ್ದಿರುವ ಕುಮಾರಸ್ವಾಮಿ ಅವರ ಜನ್ಮದಿನದ ಹೆಸರಲ್ಲಿ ಸಕ್ಕರೆನಾಡಲ್ಲೇ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶಿಸಲು ಜೆಡಿಎಸ್ ಮುಂದಾಗಿದೆ ಎಂದು ಹೇಳಲಾಗಿದೆ.












Click it and Unblock the Notifications