ಸಂಪುಟ ವಿಸ್ತರಣೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಶ್ರೀನಿವಾಸ್!
ಮಂಡ್ಯ, ಜೂನ್ 11 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ರಚನೆ, ಖಾತೆ ಹಂಚಿಕೆ ವಿಚಾರದಲ್ಲಿಯೇ ಇನ್ನೂ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಮಂಡ್ಯ ಶಾಸಕ ಎಂ.ಶ್ರೀನಿವಾಸ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸೋಮವಾರ ಮಾತನಾಡಿದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್, 'ಯಾವ ಸಚಿವರೂ ಸಹ ಐದು ವರ್ಷಗಳನ್ನು ಪೂರ್ಣಗೊಳಿಸುವುದಿಲ್ಲ. ಸಂಪುಟ ಪುನಾರಚನೆ ನಡೆಯಲಿದ್ದು. ಹೊಸ ಸಚಿವರು ಸಂಪುಟ ಸೇರಲಿದ್ದಾರೆ' ಎಂದರು.
'2ರಿಂದ 3 ವರ್ಷಕ್ಕೆ ಸಚಿವ ಸಂಪುಟ ಪುನಾರಚನೆ ನಡೆಯಲಿದೆ. ಆಗ ಹೊಸ ಸಚಿವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುತ್ತಾರೆ. ಈಗಿರುವ ಯಾವ ಸಚಿವರು, ಐದು ವರ್ಷಗಳನ್ನು ಪೂರ್ಣಗೊಳಿಸುವುದಿಲ್ಲ' ಎಂದು ಹೇಳಿದರು.

'ನಾನು, ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದೇವೆ. ಈ ಬಾರಿ ಅವರಿಬ್ಬರು ಸಚಿವರಾಗಿದ್ದಾರೆ. ಮುಂದಿನ ಬಾರಿ ಸಂಪುಟ ಪುನಾರಚನೆ ಆದಾಗ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ' ಎಂದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ 7 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ, ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಿದ್ದಾರೆ.












Click it and Unblock the Notifications