ಹನುಮಧ್ವಜ ವಿವಾದ: ಶುಕ್ರವಾರ ಮಂಡ್ಯ-ಕೆರಗೋಡು ಬಂದ್‌ಗೆ ಕರೆ
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 9ರಂದು ಕೆರಗೋಡು ಹಾಗೂ ಮಂಡ್ಯ ಬಂದ್‌ಗೆ ಶ್ರೀರಾಮಭಜನಾ ಮಂಡಳಿ, ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಂಘಟನೆಗಳು ಕರೆ ನೀಡಿವೆ.
ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಸಲುವಾಗಿ ಫೆ.7 (ಬುಧವಾರ) ಪ್ರಗತಿಪರ ಸಂಘನೆಗಳು ಮಂಡ್ಯ ಬಂದ್ ಕರೆ ನೀಡಿದ್ದವು. ಜಿಲ್ಲಾಡಳಿತ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಮಂಡ್ಯ ಬಂದ್ ಕರೆಯನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಫೆ.9ರಂದು ನೀಡಿರುವ ಬಂದ್‌ನ್ನು ಹಿಂಪಡೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದವು.

ಜಿಲ್ಲಾಡಳಿತ ವಿಶ್ವಹಿಂದೂಪರಿಷತ್, ಭಜರಂಗದಳ ಕಾರ್ಯಕರ್ತರೊಂದಿಗೂ ಮಾತುಕತೆ ನಡೆಸಿ ಬಂದ್‌ನಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಜನಸಾಮಾನ್ಯರು, ವ್ಯಾಪಾರಸ್ಥರಿಗೆ ಉಂಟಾಗುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿ ಡಾ.ಕುಮಾರ ಮನವರಿಕೆ ಮಾಡಿಕೊಟ್ಟಿದ್ದರು. ಸಭೆಯಲ್ಲಿ ಸ್ಪಷ್ಟವಾಗಿ ಏನನ್ನೂ ತಿಳಿಸದೆ ಪರಸ್ಪರರು ಕುಳಿತು ಮಾತುಕತೆ ನಡೆಸಿ ವಿಷಯ ತಿಳಿಸುವುದಾಗಿ ಹೇಳಿಬಂದಿದ್ದರು.
ಬಳಿಕ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಕೆರಗೋಡು ಶ್ರೀರಾಮ ಭಜನಾ ಮಂಡಳಿಯವರು ಫೆ.9 ರಂದು ಸ್ವಯಂಘೋಷಿತ ಬಂದ್‌ಗೆ ಕರೆ ನೀಡಿದ್ದು, ವರ್ತಕರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸುವಂತೆ ಮನವಿ ಮಾಡಿವೆ.
ಬೈಕ್ ರ್‍ಯಾಲಿ
ಫೆ.9ರಂದು ಕೆರಗೋಡು ಬಂದ್‌ಗೆ ಕರೆ ನೀಡಿರುವ ಶ್ರೀರಾಮ ಭಜನಾ ಮಂಡಳಿಯವರು ಅಂದು ಬೆಳಗ್ಗೆ 9 ಗಂಟೆಗೆ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ಸ್ಥಳದಿಂದ ನೂರಾರು ಬೈಕ್‌ಗಳೊಂದಿಗೆ ಮಂಡ್ಯ ನಗರ ರೈಲ್ವೆ ನಿಲ್ದಾಣದ ಬಳಿಯ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ ಆಗಮಿಸಲಿದ್ದಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ವೌನ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೆರಗೋಡು ಬಂದ್‌ಗೆ ಸ್ಥಳೀಯ ವರ್ತಕರು, ಭಜರಂಗಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಹೋಟೆಲ್ ಮಾಲೀಕರು, ಕಾರು, ಲಾರಿ ಮಾಲೀಕರ ಸಂಘ, ಚಿತ್ರಮಂದಿರ ಸೇರಿದಂತೆ ಎಲ್ಲರೂ ಬೆಂಬಲ ಘೋಷಿಸಿರುವುದಾಗಿ ವೀಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕುಟಿಲ ನೀತಿಯಿಂದಾಗಿ ಅರ್ಜುನ ಧ್ವಜಸ್ತಂಭದಲ್ಲಿದ್ದ ಶ್ರೀ ಹನುಮಧ್ವಜವನ್ನು ಇಳಿಸಿ ಹಿಂದೂ ಧರ್ಮಕ್ಕೆ, ಹಿಂದೂ ಧರ್ಮದವರ ಭಾವನೆಗಳಿಗೆ ಅವಮಾನ ಮಾಡಿದ್ದಾರೆ. ಮತ್ತೆ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿ ಬಂದ್ ಆಚರಿಸಲಾಗುತ್ತಿದ್ದು, ಇದಕ್ಕೆ ಎಲ್ಲರೂ ಬೆಂಬಲ ಸೂಚಿಸುವಂತೆ ವಿಶ್ವ ಹಿಂದೂಪರಿಷತ್ ಕಾರ್ಯದರ್ಶಿ ಬಸವರಾಜು ಮನವಿ ಮಾಡಿದ್ದಾರೆ
ಬಲವಂತದ ಬಂದ್ ಮಾಡುವಂತಿಲ್ಲ
ಶಾಂತಿಯುತವಾಗಿ ಬಂದ್ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಒಮ್ಮೆ ಬಲವಂತವಾಗಿ ಅಂಗಡಿ ಮುಚ್ಚಿಸುವುದು, ಶಾಂತಿ ಕದಡುವಂತೆ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಡುವುದು, ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವುದಕ್ಕೆ ಮುಂದಾದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿರುವ ಧ್ವಜಕಂಬದಲ್ಲಿ ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜ ಮತ್ತು ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಿಸುವುದಕ್ಕಷ್ಟೇ ಅನುಮತಿ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು, ಜನರನ್ನು ತಪ್ಪುದಾರಿಗೆ ಎಳೆಯುವುದು ಸರಿಯಲ್ಲ ಎಂದು ಅವರು ಹೇಳಿದರು.












Click it and Unblock the Notifications