ಜನತಾ ದರ್ಶನಕ್ಕೆ ಅವಕಾಶ ಕೊಡದ ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ
ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಜನತಾದರ್ಶನಕ್ಕೆ ಮಾತ್ರ ಅಧಿಕಾರಿಗಳು ಹೋಗಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ದ್ವೇಷದ ರಾಜಕಾರಣ ಪ್ರದರ್ಶಿಸುತ್ತಿದೆ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮಂಡ್ಯದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ಶುಕ್ರವಾರ ಏರ್ಪಡಿಸಿದ್ದ ಜನತಾ ದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಜನತಾದರ್ಶನ ಮಾಡಬೇಕು ಎಂದು ತೀರ್ಮಾನಿಸಿ, ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೆ. ಆದರೆ, ಗುರುವಾರ ಸರ್ಕಾರ ಕ್ಯಾಬಿನೆಟ್‌ನಲ್ಲಿ ಒಂದು ಸುತ್ತೋಲೆ ಹೊರಡಿಸಿ ಜನತಾದರ್ಶನ ಮಾಡಲು ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶವಿದೆ. ಬೇರೆಯವರ ಜನತಾದರ್ಶನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿ, ಅಧಿಕಾರಿಗಳು ಇಲ್ಲಿಗೆ ಬರದಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರ ಚುನಾವಣೆಗೆ ಮುಂಚೆ ರಾಮನಗರದಲ್ಲಿ ಹೇಗೆ ನಡೆದುಕೊಂಡರು ಎನ್ನೋದು ಗೊತ್ತಿದೆ. ಡಿ.ಕೆ.ಸುರೇಶ್ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಜನಸ್ಪಂದನ ಕಾರ್ಯಕ್ರಮದ ಹೆಸರಲ್ಲಿ ಅಧಿಕಾರಿಗಳನ್ನ ಹಳ್ಳಿ ಹಳ್ಳಿಗೆ ತಿರುಗಿಸಿದರು. ಉಸ್ತುವಾರಿ ಸಚಿವರು ಮಾಡಬೇಕಾದ ಸಭೆಗಳನ್ನು ಮಾಡಿದರು. ಇದಕ್ಕೆ ಅನುಮತಿ ಕೊಟ್ಟವರು ಯಾರು, ಯಾವ ನಿಯಮ ಇತ್ತು? ಎಂದು ಪ್ರಶ್ನಿಸಿದರು.
ಕೇಂದ್ರದ ಒಬ್ಬ ಮಂತ್ರಿ, ಜನರ ಅಹವಾಲು ಸ್ವೀಕರಿಸಲು ಬಂದಿದ್ದೇನೆ. ಹೊಸ ನಿಯಾಮವಳಿ ಮೂಲಕ ತಡೆಯಲು ಮುಂದಾಗಿದ್ದಾರೆ. ಇದರಿಂದ ಅವರಿಗೆ ಏನೂ ದೊರಕಲ್ಲ ಎಂದು ಹೇಳಿದರು.
ಇದು ನನ್ನ ಮನೆ ಅಥವಾ ಸರ್ಕಾರಿ ಕಾರ್ಯಕ್ರಮವಲ್ಲ. ಕಾರ್ಯಕರ್ತರು, ಮತದಾರರ ಸಮಸ್ಯೆ ಆಲಿಸುವ ಕಾರ್ಯಕ್ರಮ. ಮಾಜಿ ಸಚಿವರು, ಶಾಸಕರು ಇಲ್ಲೇ ಇದ್ದು ಸಮಸ್ಯೆ ಅರ್ಥಮಾಡಿಕೊಳ್ಳಿ ಎಂದರು.
ದೆಹಲಿ ಮಟ್ಟದಲ್ಲಿ ಬಿಡುವಿಲ್ಲದ ಕಾರ್ಯಕ್ರಮ ಇವೆ. ಎರಡು ಪ್ರಮುಖ ಖಾತೆಗಳನ್ನ ನನಗೆ ಕೊಡಲಾಗಿದೆ. ಮತ ಕೊಟ್ಟು ಆಶೀರ್ವಾದ ಮಾಡಿದ ಜನ ನೀವು, ನಿಮ್ಮ ಕಷ್ಟ ಆಲಿಸಲು ಬಂದಿದ್ದೇನೆ. ಇದು ಸರ್ಕಾರದ ಅಧಿಕೃತ ಕಾರ್ಯಕ್ರಮ ಅಲ್ಲ ಎಂದು ಹೇಳಿದರು.












Click it and Unblock the Notifications