Muda Scam: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್‌ಡಿಕೆ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೇಳಿ ಬಂದ ನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಸದ್ಯ ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಶುಕ್ರವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದು, ಹಣ ವರ್ಗಾವಣೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮೇಲೆ ಎಚ್‌ಡಿ ಕುಮಾರಸ್ವಾಮಿ ಮತ್ತೊಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಮೈಸೂರಿನ ಇನಕಲ್‌ನಲ್ಲಿ ಅಕ್ರಮ ನಿವೇಶನ ಹೊಂದಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಜಯನಗರ 2ನೇ ಹಂತದ 14 ನಿವೇಶನ ಬೇರೆ, ಇದು ಬೇರೆ ವಿಚಾರ, ಮೈಸೂರಿನ ಇನಕಲ್‌ನಲ್ಲಿ 1946ರಲ್ಲಿ 434 ಎಕರೆ ಜಮೀನು ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತೆ. ಸರ್ವೆ ನಂ. 17/4ರಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತ್ಯಮೇವ ಜಯತೇ ಎಂದು ಹೇಳುತ್ತಾರೆ. ಆದರೆ ಸಾಕಮ್ಮ ಎನ್ನುವವರ ಹೆಸರಿನಲ್ಲಿ ಡೀನೋಟಿಫಿಕೇಷನ್‌ಗೆ ಅರ್ಜಿ ಹಾಕಿಸುತ್ತಾರೆ. ಕೇವಲ 20 ದಿನಗಳಲ್ಲಿ ಡೀನೋಫಿಕೇಷನ್ ಆಗುತ್ತೆ. ಅದನ್ನು ಸಿದ್ದರಾಮಯ್ಯ ಅವರೇ ಕೊಂಡುಕೊಂಡಿದ್ದಾರೆ. ಎಲ್ಲ ತೆಗೆದರೆ ಗೊತ್ತಾಗುತ್ತೆ ಎಂದು ಸ್ಫೋಟಕ ಆರೋಪ ಮಾಡಿದರು.
ನಾನು ಏನೆಂದು ಆಣೆ ಮಾಡಬೇಕು, ನನ್ನ ಮನೆಗೆ ಬಂದು ಚೆಕ್ ಮಾಡುತ್ತಾರೆ. ಏನು ಡಾಕ್ಯುಮೆಂಟ್ ಚೆಕ್ ಮಾಡುತ್ತಾರೆ, ಮೈಸೂರಿನ ಸಿಎಟಿಬಿ ಬಗ್ಗೆ ನನ್ನಿಂದ ಆದೇಶ ಆಗಿದೆಯಾ? ನಾನೇನಾದರೂ 14 ನಿವೇಶನ ಪಡೆದಿದ್ದೇನಾ, ಸೈಟ್ ಪಡೆದಿರುವವರು ಅವರು, ಆದರೂ ನನ್ನನ್ನೇ ಲಘುವಾಗಿ ಮಾತನಾಡುತ್ತಾರೆ. ನಾನು ಏನು ಮಾಡಿದ್ದೇನೆ ಎಂದು ಪ್ರಶ್ನೆ ಮಾಡಿದರು.
ಅವರಿಗೆ ಕುಂತರೂ, ನಿಂತರೂ ನನ್ನದೇ ಜಪ ಮಾಡುತ್ತಿದ್ದಾರೆ. ಅವರ ಸರ್ಕಾರದಿಂದಲೇ ತನಿಖೆ ಮಾಡಲು ಮುಂದಾಗಿದ್ದಾರೆ ದಾಖಲೆ ಇಲ್ಲದೆ ಏನು ತನಿಖೆ ಮಾಡುತ್ತಾರೆ, ಅಸಲಿಗೆ ಕಳ್ಳತನ ಮಾಡ್ತಾ ಇರೋರೇ ಅವರು. ಅವರ ಅಕ್ರಮಗಳನ್ನು ಮುಚ್ಚಿಕೊಳ್ಳಲು ನನ್ನ ಹೆಸರು ಬಳಸಿಕೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಿಸಿದರು.
ಭೈರತಿ ಮನೆಯಲ್ಲಿ ಮುಡಾ ಕಡತಗಳಿವೆ
ಮೈಸೂರು ಮುಡಾಗೆ ಸೇರಿದ ಕಡತಗಳು ಭೈರತಿ ಸುರೇಶ್ ಮನೆಯಲ್ಲಿವೆ. ಸರ್ಕಾರ ನನ್ನ ಕೈಯ್ಯಲ್ಲಿ ಇದೆಯಾ, ಮೈಸೂರು ನಗರವನ್ನು 30-40 ವರ್ಷಗಳಿಂದ ಗುತ್ತಿಗೆ ತೆಗೆದುಕೊಂಡಿರುವವರು ಸಿದ್ದರಾಮಯ್ಯ ಹಾಗೂ ಪಟಾಲಂ. ಭೈರತಿ ಸುರೇಶ್ ಹೆಲಿಕ್ಯಾಪ್ಟರ್‌ನಲ್ಲಿ ತರಾತುರಿಯಲ್ಲಿ ಸಿಎಟಿಬಿಗೆ ಯಾಕೆ ಹೋಗಿದ್ದರು? ಸಿಎಟಿಬಿನಲ್ಲಿ ಅವತ್ತು ಅವರಿಗೆ ದಾಖಲೆಗಳು ಸಿಗಲಿಲ್ಲವೇ? ಹೆಲಿಕ್ಯಾಪ್ಟರ್‌ನಲ್ಲಿ ದಾಖಲೆ ತುಂಬೋಕೆ ಹೋಗಿದ್ದರು. ಹಣದ ಗಂಟು ತೆಗೆದುಕೊಂಡು ಹೋಗುವುದಕ್ಕೆ ಹೋಗಿದ್ದರು ಎಂದು ಆರೋಪಿಸಿದರು.
ಮುಡಾದಲ್ಲಿ ತಿಂಗಳಿಗೆ ಇಷ್ಟು ಎಂದು ಫಿಕ್ಸ್ ಮಾಡಿಕೊಂಡು ಲೂಟಿ ಹೊಡೆದ ಹಣವನ್ನು ತೆಗೆದುಕೊಂಡು ಬರುವುದಕ್ಕೆ ಹೆಲಿಕ್ಯಾಪ್ಟರ್‌ನಲ್ಲಿ ಹೋಗಿದ್ದರಾ? ಮುಡಾದಲ್ಲಿರುವ ಫೈಲ್‌ಗಳನ್ನು ನನ್ನ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ನಾನೇನು ಸರ್ಕಾರಕ್ಕಿಂತ ದೊಡ್ಡವನಾ, 30-40 ವರ್ಷದ ರಾಜಕೀಯದಲ್ಲಿ ವಿರೋಧ ಪಕ್ಷದ ನಾಯಕರು, ಡಿಸಿಎಂ, ಎರಡು ಬಾರಿ ಸಿಎಂ ಆಗಿದ್ದಾರೆ. ಇಷ್ಟೆಲ್ಲಾ ಇದ್ದು ನಾನು ಫೈಲ್‌ಗಳನ್ನು ತೆಗೆದುಕೊಂಡು ಹೋಗೋಕೆ ಆಗುತ್ತಾ ಎಂದು ಪ್ರಶ್ನಿಸಿದರು.












Click it and Unblock the Notifications