ಮಳವಳ್ಳಿಯಲ್ಲಿ ಬಸ್ ಅಪಘಾತದಲ್ಲಿ ಒರ್ವ ಸಾವು, ನಾಲ್ವರಿಗೆ ಗಾಯ
ಮಂಡ್ಯ , ಸೆಪ್ಟೆಂಬರ್.24: ಸಾರಿಗೆ ಬಸ್ಸೊಂದು ಕರ್ತವ್ಯಕ್ಕೆ ತೆರಳುತ್ತಿದ್ದ ವಾಟರ್‌ಮ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಕೊಳ್ಳೇಗಾಲ ರಸ್ತೆಯ ಸಿದ್ದಾರ್ಥನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ನಿವಾಸಿ ವಾಟರ್‌ಮ್ಯಾನ್ ಮಾದೇಶ(48) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಎಂದಿನಂತೆ ಕೊಳ್ಳೇಗಾಲ ರಸ್ತೆಯಲ್ಲಿ ಬಂದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಸಿದ್ದಾರ್ಥನಗರ ಬಳಿ ದಾರಿಯಲ್ಲಿ ಹೋಗುತ್ತಿದ್ದ ವಾಟರ್‌ಮ್ಯಾನ್ ಮಾದೇಶ ಎಂಬಾತನಿಗೆ ಡಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೂ ಡಿಕ್ಕಿಹೊಡೆದಿದೆ.

ಅಲ್ಲಿಗೆ ನಿಲ್ಲದ ಬಸ್ ಪಕ್ಕದ ಮನೆಗೆ ನುಗ್ಗಿದ್ದು, ಇದರಿಂದ ಮನೆಯ ಗೋಡೆ ಕುಸಿದು ಬಿದ್ದಿದೆ. ಆಗ ಮನೆಯಲ್ಲಿದ್ದ ಸರ್ವಮಂಗಳ, ನಾಗರತ್ನ ಹಾಗೂ ಬಸ್‌ನಲ್ಲಿದ್ದ ಶೃತಿ, ಮಹದೇವಮ್ಮ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications