ಬೆಳ್ಳೂರು ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ
ಮಂಡ್ಯ, ಸೆಪ್ಟೆಂಬರ್ 27: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಎದುರು ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಬೆಳ್ಳೂರ್ ಕ್ರಾಸ್ ಸಮೀಪದ ರಸ್ತೆ ಬದಿ ನಿಂತಿದ್ದ ಕೆಎಸ್ ಆರ್ ಟಿಸಿ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಮೃತರನ್ನು ಬೆಂಗಳೂರು ನಿವಾಸಿಗಳಾದ ಬೆಂಡಿಗನಹಳ್ಳಿ ನಮಿತಾ, ಇನ್ಫೋಸಿಸ್ ನೌಕರ ರಾಜಸ್ಥಾನದ ಪಂಕಜ್ ಶರ್ಮಾ, ಹೊಸಕೋಟೆಯ ವಂಶಿ ಕೃಷ್ಣ ಹಾಗೂ ಧಾರವಾಡದ ರಘುನಾಥ್ ಭಜಂತ್ರಿ ಎಂದು ಗುರುತಿಸಲಾಗಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಎದುರು ಬುಧವಾರ ಬೆಳ್ಳಿಗ್ಗೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್‌ಗೆ ಹಾಸನ ಕಡೆಯಿಂದ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರಿನ ಮುಂದಿನ ಅರ್ಧ ಭಾಗ ಬಸ್ಸಿನೊಳಗೆ ನುಗ್ಗಿದೆ. ಕಾರಿನಲ್ಲಿದ್ದ ಓರ್ವ ಮಹಿಳೆ, ಮೂವರು ಪುರುಷರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ಸಾವು
ತುಮಕೂರು: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಧುಗಿರಿ ತಾಲೂಕನ ಮಿಡಿಗೇಶಿ ಗ್ರಾಮದ ಬಳಿ ನಡೆದಿದೆ.
ಪಾವಗಡ ತಾಲೂಕಿನ ಗುಜ್ಜನುಡು ಗ್ರಾಮದ ಆಕಾಶ್ ( 26), ಕಾರ್ತಿಕ್ (28) ಹೇಮಂತ್ (30) ಮೃತ ದುರ್ದೈವಿಗಳು. ಘಟನೆಯಲ್ಲಿ ಗಂಭೀರ ಗಾಯಗೊಂಡ ಉಜ್ವಲ್ ಎನ್ನುವಾತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದ ಕಾರು, ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಮುಖಾಮುಖಿಯಾಗಿವೆ. ಮೃತರು ಗುಜ್ಜನಡು ಗ್ರಾಮದಲ್ಲಿ ನಡೆಯುತ್ತಿದ್ದ ಮಾರಮ್ಮ ದೇವಿ ರಥೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications