ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ; ಆರೋಗ್ಯ ಇಲಾಖೆ ನೌಕರರೇ ಶಾಮೀಲು
ಮಂಡ್ಯ ಸಮೀಪದ ಆಲೆಮನೆಯೊಂದರಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣ ಮಾಸುವ ಮುನ್ನವೇ ಪಾಂಡವಪುರದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಟ್ಟಣದ ಆರೋಗ್ಯ ಇಲಾಖೆ ವಸತಿ ಗೃಹದಲ್ಲೇ ಆರೋಗ್ಯ ಇಲಾಖೆ ನೌಕರರೇ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದು ಆತಂಕಕಾರಿಯಾಗಿದೆ.
ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಬ್ಯುನ್ಸ್ ಚಾಲಕ ಆನಂದ್ (37), ಹೊರಗುತ್ತಿಗೆ ಡಿ-ಗ್ರೂಪ್ ನೌಕರೆ ಅಶ್ವಿನಿ (32), ಆಕೆಯ ತಾಯಿ ಸತ್ಯಮ್ಮ (54), ಹಿಂದೆ ಪಾಂಡವಪುರ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ನೌಕರೆಯಾಗಿದ್ದ ಗಿರಿಜಮ್ಮ (48) ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ವಿವರ
ಆಂಬ್ಯುಲೆನ್ಸ್ ಚಾಲಕನಾಗಿದ್ದ ಆನಂದ್‌ಗೆ ಪಾಂಡವಪುರ ತಾಲೂಕು ಆರೋಗ್ಯ ಇಲಾಖೆಗೆ ಸೇರಿದ ವಸತಿಗೃಹವನ್ನು ವಾಸಕ್ಕೆ ನೀಡಲಾಗಿತ್ತು. ಆನಂದ್, ಪತ್ನಿ ಅಶ್ವಿನಿ, ಆಕೆಯ ತಾಯಿ ಸತ್ಯಮ್ಮ ಅಲ್ಲಿ ವಾಸವಿದ್ದರು. ಅಶ್ವಿನಿ ಆರೋಗ್ಯ ಇಲಾಖೆಯಲ್ಲೇ ಹೊರಗುತ್ತಿಗೆ ಆಧಾರದ ಮೇಲೆ ಡಿ-ಗ್ರೂಪ್ ನೌಕರೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಸತಿ ಗೃಹದಲ್ಲಿ ವಾಸವಿದ್ದ ಆನಂದ್ ಮತ್ತು ಅಶ್ವಿನಿ ರಹಸ್ಯವಾಗಿ ಹೊರಗಿನಿಂದ ಗರ್ಭಿಣಿ ಮಹಿಳೆಯರನ್ನು ಕರೆತಂದು ಹೆಣ್ಣು ಭ್ರೂಣಹತ್ಯೆ ನಡೆಸುತ್ತಿದ್ದರು. ಕಳೆದ ಆರು ತಿಂಗಳಿಂದ ದಂಪತಿ ಈ ಕೃತ್ಯದಲ್ಲಿ ತೊಡಗಿದ್ದರು. ಇದಕ್ಕೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ನೌಕರೆಯಾಗಿ ಕೆಲಸ ನಿರ್ವಹಿಸಿ ಅನುಭವ ಹೊಂದಿದ್ದ ಗಿರಿಜಮ್ಮ ಸಹಾಯ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಭಾನುವಾರ ತಡರಾತ್ರಿ ಮೈಸೂರು ಮೂಲದ ಗರ್ಭಿಣಿಯೊಬ್ಬರು ವಸತಿಗೃಹಕ್ಕೆ ಆಗಮಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಗರ್ಭಿಣಿ ಮಹಿಳೆ ಮೇಲೆ ಅನುಮಾನ ವ್ಯಕ್ತಪಡಿಸಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್ ಅವರಿಗೆ ರಾತ್ರಿ 11 ಗಂಟೆಗೆ ವಿಷಯ ತಿಳಿಸಿದ್ದರು.
ಕೂಡಲೇ ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್ ಅವರನ್ನು ಸಂಪರ್ಕಿಸಿ ದಾಳಿ ನಡೆಸುವಂತೆ ಸೂಚಿಸಿದರು. ಡಾ.ಅರವಿಂದ್ ಅವರು ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಗರ್ಭಿಣಿ ಮಹಿಳೆಗೆ ಅಬಾರ್ಷನ್ ಮಾಡುವ ಪ್ರಕ್ರಿಯೆ ನಡೆದಿತ್ತು ಎನ್ನಲಾಗಿದೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅವರು ಸ್ಥಳಕ್ಕೆ ಬಂದರು. ವಸತಿಗೃಹದಲ್ಲಿ ಪರಿಶೀಲನೆ ನಡೆಸಿದಾಗ ಗರ್ಭಪಾತ ಮಾತ್ರೆಗಳು, ಸಿರೆಂಜ್, ಡ್ರಿಪ್ ಸೇರಿದಂತೆ ಭ್ರೂಣ ಹತ್ಯೆಗೆ ನೀಡುವ ಔಷಧಗಳು ಕಂಡುಬಂದಿವೆ.
ಪೊಲೀಸರು ದಂಪತಿಯನ್ನು ಸ್ಥಳದಲ್ಲೇ ಬಂಧಿಸಿದರಲ್ಲದೆ, ಈ ಪಾಪಕೃತ್ಯಕ್ಕೆ ನೆರವಾಗಿದ್ದ ಶಶಿಕಲಾ ಮತ್ತು ಗಿರಿಜಾಂಬ ಅವರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications