'ಕಾಂಗ್ರೆಸ್ ಬಿಟ್ಟ ಎಸ್ಸೆಂ ಕೃಷ್ಣ ರಾಜಕೀಯದಿಂದ ನಿವೃತ್ತರಾಗಬೇಕಿತ್ತು'
Recommended Video
ಮಂಡ್ಯ, ಜುಲೈ 16: "ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಕಾಂಗ್ರೆಸ್ ಪಕ್ಷವನ್ನು ಬಿಡಬಾರದಿತ್ತು. ಇನ್ನು ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ ಮೇಲೆ ರಾಜಕೀಯ ನಿವೃತ್ತಿಯನ್ನು ಪಡೆಯಬೇಕಿತ್ತು. ಈಗ ಅವರ ರಾಜಕೀಯ ಜೀವನದ ಅಧ್ಯಾಯ ಮುಗಿದಿದೆ" ಎಂದು ಚಾಮರಾಜನಗರದ ಸಂಸದ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿರುವ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಶ್ರೀನಿವಾಸ ಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಹುದ್ದೆ, ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಕೇಂದ್ರ ವಿದೇಶಾಂಗ ಸಚಿವ ಹುದ್ದೆ ಸೇರಿದಂತೆ ಕಾಂಗ್ರೆಸ್ ನಲ್ಲಿ ಬೆಳವಣಿಗೆ ಕಂಡವರು ಎಸ್ಸೆಂ ಕೃಷ್ಣ. ಆ ಪಕ್ಷದಿಂದ ಎಲ್ಲ ಅಧಿಕಾರವನ್ನೂ ಅನುಭವಿಸಿದ್ದಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷವು ಹಾಸನಕ್ಕಿಂತ ಮಂಡ್ಯದಲ್ಲಿ ತಳ ಮಟ್ಟದಿಂದಲೂ ಗಟ್ಟಿಯಾಗಿದೆ. ಸ್ಥಳೀಯ ಸಂಸ್ಥೆಯಿಂದ ಮೊದಲುಗೊಂಡು ಎಲ್ಲ ಹಂತದಲ್ಲೂ ಜೆಡಿಎಸ್ ನ ಜನಪ್ರತಿನಿಧಿಗಳು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠವನ್ನು ಕಲಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಜೆಡಿಎಸ್ ಶಾಸಕರ ನಾಲಗೆಯೇ ಸೋಲಿಗೆ ದಾರಿ ಮಾಡಿಕೊಟ್ಟಿತು. ಜೆಡಿಎಸ್ ನ ಭದ್ರಕೋಟೆಯಾದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಗೆಲುವಿಗೆ ಅದೇ ಕಾರಣ ಆಯಿತು. ಈ ವಿದ್ಯಮಾನವು ಜೆಡಿಎಸ್ ಗೆ ಮಾತ್ರವಲ್ಲ, ಎಲ್ಲ ರಾಜಕೀಯ ಪಕ್ಷಗಳಿಗೂ ಒಂದು ಪಾಠ ಎಂದು ಅವರು ಹೇಳಿದರು.












Click it and Unblock the Notifications