ಕೆಆರ್‌ಎಸ್ ಸುತ್ತಾ ಪರೀಕ್ಷಾರ್ಥ ಸ್ಫೋಟ, ಗಣಿಧಣಿಗಳ ಒತ್ತಡಕ್ಕೆ ಮಣಿಯಿತಾ ಜಿಲ್ಲಾಡಳಿತ?
ಮಂಡ್ಯ ,ಜುಲೈ 25: ಕೆಆರ್‌ಎಸ್ ಸುತ್ತ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳ ವ್ಯಾಪ್ತಿಯ ಜನರು ಹಾಗೂ ಹಲವು ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಮತ್ತೆ ಗಣಿಗಾರಿಕೆಗೆ ಅವಕಾಶ ಕಲ್ಪಿಸುವ ಸಲುವಾಗಿ 7 ದಿನಗಳ ಪರೀಕ್ಷಾರ್ಥ ಸ್ಫೋಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ರೈತರಿಂದ ಪ್ರತಿಭಟನೆ ಕೂಡ ನಡೆದಿದೆ.
ಜು.25 ರಿಂದ ಜು.31ರವರೆಗೆ ಕೆಆರ್‌ಎಸ್‌ನ ಸುತ್ತ ಪರೀಕ್ಷಾರ್ಥ ಸ್ಫೋಟ ನಡೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದು, ಜಾರ್ಖಂಡ್ ರಾಜ್ಯದ ಧನಬಾದ್‌ನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಹೆಚ್ಚುವರಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಿದೆ. ಆದರೂ, ಅಣೆಕಟ್ಟು ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಗೆ ಮತ್ತೆ ಚಾಲನೆ ಕೊಡುವ ಉದ್ದೇಶದಿಂದ ಗಣಿಧಣಿಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಈ ತೀರ್ಮಾನ ಕೈಗೊಂಡಿದೆ ಎಂಬುದು ಜನರ ಆರೋಪ.
ಕೃಷ್ಣರಾಜಸಾಗರ ಅಣೆಕಟ್ಟು ಸುತ್ತ ಎಷ್ಟು ಕಿ.ಮೀ.ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಯಾವ ಮಾನದಂಡಗಳನ್ನು ಆಧರಿಸಿ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಲಿದೆ ಎನ್ನುವುದನ್ನೂ ರಹಸ್ಯವಾಗಿಯೇ ಇಡಲಾಗಿದೆ. ವೈಜ್ಞಾನಿಕವಾಗಿ ಮೆಗ್ಗರ್ ಕೇಪ್‌ನಿಂದ ಕಲ್ಲುಬಂಡೆ ಸ್ಫೋಟಿಸಿದರೆ, ಸುಮಾರು ಎರಡರಿಂದ ಎರಡೂವರೆ ಕಿ.ಮೀ.ವರೆಗೆ ಭೂಮಿ ಕಂಪಿಸಿದ ಅನುಭವ ಆಗುತ್ತದೆ. ಭಾರಿ ಪ್ರಮಾಣದ ಸ್ಫೋಟಕವಾದ ಬೋರ್‌ಬ್ಲಾಸ್ಟಿಂಗ್‌ನಿಂದ ಅಂದಾಜು 6 ರಿಂದ 7 ಕಿ.ಮೀ.ವರೆಗೆ ಭೂಮಿ (ಬಂಡೆಯ ಸೆಲೆ) ಕಂಪಿಸುವ ಸಾಧ್ಯತೆ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಕಂಟ್ರೋಲ್ ಬ್ಲಾಸ್ಟಿಂಗ್‌ನಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಲ್ಲ. ಅನ್ ಕಂಟ್ರೋಲ್ ಬ್ಲಾಸ್ಟಿಂಗ್‌ನಲ್ಲಿ ಜಿಲೆಟಿನ್ ಸ್ಟಿಕ್‌ಗಳ ಬಳಕೆ ಮೇಲೆ ತೀವ್ರತೆ ಅವಲಂಬಿಸಿರುತ್ತದೆ. ಬಂಡೆಗಳು ಒಡಕು - ಬಿರುಕು ಇಲ್ಲದೆ, ಸುಮಾರು 25 ರಿಂದ 30 ಸ್ಕ್ವೇರ್ ಕಿ.ಮೀ.ವರೆಗೆ ಹರಡಿದ್ದರೆ ಕಂಪನದ ಸಾಧ್ಯತೆಗಳಿರುತ್ತವೆ ಎನ್ನುವುದು ತಜ್ಞರ ವಾದವಾಗಿದೆ.

ಇಂದಿಗೂ ಬಗೆಹರಿಯದ ನಿಗೂಢ ಶಬ್ಧಗಳ ಸತ್ಯ
2018ರ ಸೆಪ್ಟೆಂಬರ್ 25ರಂದು ಸಂಭವಿಸಿದ ಭಾರೀ ಸ್ಫೋಟದ ಮಾದರಿಯಲ್ಲೇ ನಂತರದ ವರ್ಷಗಳಲ್ಲೂ ಕೆಆರ್‌ಎಸ್ ಬಳಿ ಹಲವು ಬಾರಿ ನಿಗೂಢವಾಗಿ ಭಾರೀ ಶಬ್ಧಗಳು ಕೇಳಿಬಂದಿದ್ದವು. ಆ ಶಬ್ಧಗಳ ನಿಗೂಢತೆಯ ಸತ್ಯ ಇಂದಿಗೂ ಹೊರಬಿದ್ದಿಲ್ಲ. ಅವೆಲ್ಲವೂ ಗಣಿ ಸ್ಫೋಟದ ಶಬ್ಧಗಳೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ಗಣಿ ಸ್ಫೋಟದ ಕುರಿತು ಈ ಹಿಂದೆ ವರದಿ ನೀಡಿದ್ದ ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೇಲೂ ರಾಜಕೀಯ ಮತ್ತು ಗಣಿ ಪ್ರಭಾವ ಬೀರಿರುವಂತೆ ಕಂಡುಬಂದಿದೆ. ಏಕೆಂದರೆ, 2018ರ ಬಳಿಕ ಹಲವು ನಿಗೂಢ ಸ್ಫೋಟಗಳು ಸಂಭವಿಸಿದರೂ ಅದರ ಮೂಲವನ್ನು ಕೇಂದ್ರ ಪತ್ತೆಹಚ್ಚಲಿಲ್ಲ. ಯಾವುದೇ ವರದಿಯನ್ನು ಇದುವರೆಗೆ ಬಹಿರಂಗಪಡಿಸಲೂ ಇಲ್ಲ.

ಗಣಿ ನಿಷೇಧದ ಹಗ್ಗ, ಜಗ್ಗಾಟ
ಕಳೆದ ನಾಲ್ಕು ವರ್ಷಗಳಿಂದಲೂ ಕೆಆರ್‌ಎಸ್ ಸುತ್ತ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸುವ ಕುರಿತಂತೆ ಜಿಲ್ಲಾಡಳಿತ, ರಾಜಕಾರಣಿಗಳು ಹಾಗೂ ಗಣಿಧಣಿಗಳ ನಡುವೆ ಹಗ್ಗ-ಜಗ್ಗಾಟ ಮುಂದುವರೆದಿದೆ. ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ 2018ರ ಸೆ.25ರಂದು ಬೇಬಿಬೆಟ್ಟ ಕಾವಲ್ ಪ್ರದೇಶದಲ್ಲಿ ಸಂಭವಿಸಿದ ಗಣಿ ಸ್ಫೋಟಕ್ಕೆ ಸಂಬಂಸಿದಂತೆ ನೀಡಿರುವ ವರದಿ ಸರಕಾರ ಮತ್ತು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ನಡುವೆಯೂ ಗಣಿ ಮಾಲೀಕರು ಕದ್ದು ಮುಚ್ಚಿ ಗಣಿಗಾರಿಕೆಯನ್ನು ನಿರಂತರವಾಗಿ ನಡೆಸಿಕೊಂಡೇ ಬರುತ್ತಿದ್ದಾರೆ. ಸಾರ್ವಜನಿಕರಿಂದ ವಿರೋಧ ವ್ಯಕ್ತವಾದಾಗ ಮಾತ್ರ ಗಣಿ ಪ್ರದೇಶಗಳ ಮೇಲೆ ನಾಮಕಾವಸ್ಥೆ ದಾಳಿ ನಡೆಸಿ ಗಣಿ ಅಕಾರಿಗಳು ಸುಮ್ಮನಾಗುತ್ತಿದ್ದಾರೆ.
ಕೆಆರ್‌ಎಸ್ ಬಳಿ ಪರೀಕ್ಷಾರ್ಥ ಸ್ಪೋಟ ನಡೆಸುವುದರೊಂದಿಗೆ ಅಂತಿಮವಾಗಿ ವರದಿ ಪಡೆದು ಗೊಂದಲಗಳಿಗೆ ತೆರೆ ಎಳೆಯುವುದಕ್ಕೆ ಸರಕಾರ ನಿರ್ಧರಿಸಿದೆ. ಸರಕಾರದ ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಮತ್ತೆ ಗಣಿಗಾರಿಕೆಗೆ ಅನುಮತಿ ನೀಡುವ ಉದ್ದೇಶದಿಂದಲೇ ಪರೀಕ್ಷಾರ್ಥ ಸ್ಫೋಟ ನಡೆಸಲಾಗುತ್ತಿದೆ ಎಂದೇ ಅವರು ಬಲವಾಗಿ ನಂಬಿದ್ದಾರೆ. ವರದಿ ನೈಜವಾಗಿರಲಿದೆ ಎಂಬ ಬಗ್ಗೆ ಅವರಿಗೆ ನಂಬಿಕೆ ಇಲ್ಲದಿರುವುದರಿಂದ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗೊಮ್ಮಟಮೂರ್ತಿಗಿಂತ ಕೆಆರ್‌ಎಸ್ ಮಹತ್ವದ್ದಲ್ಲವೇ?
ಬೇಬಿಬೆಟ್ಟದ ಕಾವಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಅರಣ್ಯಾಕಾರಿಗಳಿಂದ ಅನುಮತಿ ಪಡೆಯಬೇಕು. ಈ ಅನುಮತಿಯನ್ನು ಜಿಲ್ಲಾಡಳಿತ ಪಡೆದುಕೊಂಡಿಲ್ಲ. ಅಲ್ಲದೆ, ಕೆಆರ್‌ಎಸ್ ಸುತ್ತಾ 5 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ ಗಣಿಗಾರಿಕೆಗೆ ನಿಷೇಧವಿದೆ. ಅಲ್ಲೇ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ ನಡೆಸಿರುವುದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ.
ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ 8 ಕಿ. ಮೀ. ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸದೆ ಗಣಿಗಾರಿಕೆ ನಿಷೇಧಿಸಲಾಗಿದೆ. ಹಾಗಾದರೆ ಗೊಮ್ಮಟಮೂರ್ತಿಗಿಂತ ಕೆಆರ್‌ಎಸ್ ಮಹತ್ವದ್ದಲ್ಲವೇ ಎಂದು ಆರ್‌ಟಿಐ ಕಾರ್ಯಕರ್ತ ಕೆ. ಆರ್. ರವೀಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಲಾಸ್ಟ್‌ಗೆ ರೈತರು, ಬಿಜೆಪಿ ಮುಖಂಡರಿಂದ ವಿರೋಧ
ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆಗೆ ರೈತಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸೋಮವಾರ ಬೆಳಗ್ಗೆ 10 ಗಂಟೆಗೆ ರೈತರು ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲ್ಯಾಸ್ಟ್ ಮಾಡಬಾರದು. ಹೀಗಾಗಲೇ ಸ್ಥಳೀಯ ತಜ್ಞರು ಈ ಬಗ್ಗೆ ವರದಿಗಳನ್ನು ನೀಡಿದ್ದಾರೆ. ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್ಎಸ್ಗೆ ಅಪಾಯವಿದೆ ಎಂದು ಪ್ರತಿಭಟನೆ ಮಾಡಿದರು. ರೈತರಲ್ಲದೆ ಕೆಲವು ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳಿಗೆ ಟ್ವೀಟ್ ಮೂಲಕ ಗಣಿಗಾರಿಕೆ ನಡೆಸದಂತೆ ಮನವಿ ಮಾಡಿದ್ದಾರೆ.












Click it and Unblock the Notifications