ಚುನಾವಣಾ ಬಾಂಡ್ ಯೋಜನೆ ವಿಶ್ವದಲ್ಲೇ ಗಂಭೀರವಾದ ಭ್ರಷ್ಟಾಚಾರ: ರಾಹುಲ್ ಗಾಂಧಿ
ಚುನಾವಣಾ ಬಾಂಡ್ ಯೋಜನೆ ವಿಶ್ವದಲ್ಲೇ ಅತ್ಯಂತ ಗಂಭೀರವಾದ ಭ್ರಷ್ಟಾಚಾರ. ಈ ಬಾಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಸಮಜಾಯಿಷಿ ಕೊಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ನಡುಗತ್ತಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಟೀಕಿಸಿದರು
ಬುಧವಾರ ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ-2 ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕೆಲವು ದಿನಗಳ ಹಿಂದೆ ಮೋದಿ ಅವರ ಸಂಭಾಷಣೆ ಕೇಳಿರಬಹುದು. ಒಂದೂವರೆ ಗಂಟೆ ಸಂಭಾಷಣೆಯಲ್ಲಿ ಎಲೆಕ್ಷನ್ ಬಾಂಡ್ ಕುರಿತು ಸಮಜಾಯಿಷಿ ಕೊಡುವ ಕೆಲಸ ಮಾಡುತ್ತಿದ್ದರು. ಗೂಗಲ್‌ನಲ್ಲಿ ಆ ಸಂಭಾಷಣೆ ಲಭ್ಯವಿದೆ. ಎಲೆಕ್ಷನ್ ಬಾಂಡ್ ವಿಚಾರ ಮಾತನಾಡುವ ಸಂದರ್ಭದಲ್ಲಿ ಅವರ ಕೈ ನಡುಗುತ್ತಿತ್ತು ಎಂದು ಹೇಳಿದರು.
ಬಾಂಡ್ ವಿವರ ಬಹಿರಂಗಪಡಿಸಿಲ್ಲ
ಮೋದಿ ಅವರು ಚುನಾವಣೆ ವ್ಯವಸ್ಥೆಯಲ್ಲಿ ಬಾಂಡ್ ಮೂಲಕ ರಾಜಕೀಯದಲ್ಲಿ ಸ್ವಚ್ಛತೆ ಬರುತ್ತೆ ಎನ್ನುತ್ತಾರೆ. ಆದರೆ, ಈ ಬಾಂಡ್‌ಗಳನ್ನು ಯಾರಿಂದ ಪಡೆದರು, ಎಲ್ಲಿ ಖರ್ಚು ಮಾಡಿದರು ಎನ್ನುವುದನ್ನು ನಿಗೂಢವಾಗಿ ಇಟ್ಟಿದ್ದಾರೆ. ಸುಪ್ರೀಂಕೋರ್ಟ್ ಕೂಡ ಅದನ್ನು ಬಹಿರಂಗಪಡಿಸುವಂತೆ ಖಾರವಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇಂದಿಗೂ ಅದನ್ನು ಬಹಿರಂಗಪಡಿಸುವ ಕೆಲಸವಾಗಿಲ್ಲ. ಎನ್‌ಡಿಎ ಸರ್ಕಾರ ಕೆಲ ಕಂಪನಿಗಳಿಗೆ ಕೆಲಸದ ಕಾರ್ಯಾದೇಶ ಕೊಟ್ಟ ಮಾರನೇ ದಿನ ಎಲೆಕ್ಷನ್ ಬಾಂಡ್ ಪಡೆದುಕೊಂಡಿದೆ ಎಂದು ಆಪಾದಿಸಿದರು.
ಅಭಿವೃದ್ಧಿ ಕೆಲಸಕ್ಕೂ ಹಫ್ತಾ
ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನೆಪದಲ್ಲಿ ಕೆಲವರ ಮೇಲೆ ಸಿಬಿಐ, ಐಟಿ-ಇಡಿ ದಾಳಿ ನಡೆಸಿದ್ದಾರೆ. ಈ ದಾಳಿಗಳಲಿ ಕೆಲವನ್ನು ರದ್ದು ಮಾಡುವ ಕೆಲಸವನ್ನೂ ಮಾಡಿದ್ದಾರೆ. ಕೆಲವರನ್ನು ಹೆದರಿಸಿ, ಬೆದರಿಸಿ ಪಡೆಯಲಾಗಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಅಭಿವೃದ್ಧಿ ಕೆಲಸದಲ್ಲೂ ಸಹ ಅವರಿಂದ ಹಫ್ತಾ ವಸೂಲಿ ಮಾಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜೊತೆಗೆ ಬಿ ಟೀಂ ಇದೆ ಎಂದು ಹೇಳಿದ್ದೆವು. ಇದು ಕೇವಲ ರಾಜಕೀಯ ವಾಕ್ಯವಾಗಿರಲಿಲ್ಲ. ಎ-ಟೀಂ ಜತೆಗೆ ಬಿ-ಟೀಂ ಒಂದಾಗಿರುವುದನ್ನು ನೋಡುತ್ತಿದ್ದೇವೆ. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಲು ನಮ್ಮ ಮುಂದೆ ಬಂದಿದ್ದಾರೆ ಎಂದು ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಅಣಕಿಸಿದರು.
ರಾಷ್ಟ್ರ ವ್ಯಾಪ್ತಿಯಲ್ಲಿ ರೈತರ ಸಂಕಷ್ಟ ಕೇವಲ ಕರ್ನಾಟಕ, ತೆಲಂಗಾಣ ಅಷ್ಟೇ ಅಲ್ಲ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೂ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ತಮ್ಮ ಬದುಕಿನಲ್ಲಿ ಯಾರ ಮುಂದೆಯೂ ಕೈ ಜೋಡಿಸುವುದಿಲ್ಲ. ಅವರಿಗೆ ನ್ಯಾಯ ಬೇಕಿದೆ. ನಾವು ಅವರಿಗೆ ನ್ಯಾಯ ಕೊಡುವ ಪ್ರಯತ್ನ ಮಾಡುತ್ತೇವೆ ಭಾರತ್ ಜೋಡೋ ಯಾತ್ರೆಯಲ್ಲಿ 4 ಸಾವಿರ ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ದಾರಿಯುದ್ದಕ್ಕೂ ರೈತರ ಸಂಕಷ್ಟ ನೋಡಿದ್ದೇನೆ. ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಇಡೀ ಪಾದಯಾತ್ರೆಯುದ್ದಕ್ಕೂ ರೈತರು ಮನವಿ ಮಾಡಿದ್ದು ಎರಡು ಮೂರು ವಿಚಾರಗಳು ಮಾತ್ರ. ಅದನ್ನು ನಾನು ಆಲಿಸಿದ್ದೇನೆ ಎಂದು ತಿಳಿಸಿದರು.












Click it and Unblock the Notifications