ಕೊಳ್ಳುವವರ ಸಂಖ್ಯೆ ಕಡಿಮೆಯಾದರೂ ಬೆಲೆ ಮಾತ್ರ ದುಬಾರಿ: ಮಂಡ್ಯದಲ್ಲಿ ಕಳೆಗುಂದಿದ ಪಟಾಕಿ ವ್ಯಾಪಾರ
ಮಂಡ್ಯ, ನವೆಂಬರ್ 13: ನಾಡಿನಾದ್ಯಂತ ದೀಪಾವಳಿ ಸಂಭ್ರಮ ಮುಂದುವರಿದಿದೆ. ಬಹುತೇಕ ಕಡೆ ನಿನ್ನೆ ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡಲಾಗಿದ್ದು, ಮಂಡ್ಯ ನಗರದಲ್ಲಿ ಪಟಾಕಿ ವ್ಯಾಪಾರ ಹೇಗಾಯ್ತು ಎನ್ನುವ ವಿವರ ಇಲ್ಲಿದೆ.
ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಪಟಾಕಿ ಬೆಲೆ ಮಾತ್ರ ದುಬಾರಿಯಾಗುತ್ತಲೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಟಾಕಿ ಬೆಲೆಯಲ್ಲಿ ಶೇ.15 ರಿಂದ 20ರಷ್ಟು ಬೆಲೆ ಹೆಚ್ಚಳವಾಗಿದೆ.

ಪಟಾಕಿ ಮೇಲೆ ಕೇವಲ ಮಕ್ಕಳಿಗಷ್ಟೇ ಆಸಕ್ತಿ ಇರುವುದು ಬಿಟ್ಟರೆ, ಯುವಕರು ಪಟಾಕಿ ಮೇಲಿನ ವ್ಯಾಮೋಹದಿಂದ ದೂರವೇ ಉಳಿದಿದ್ದಾರೆ. ಪಟಾಕಿ ಸಿಡಿಸುವ ಉತ್ಸಾಹವೂ ಇಲ್ಲ. ಇದರ ಪರಿಣಾಮ ಪಟಾಕಿ ನಿರೀಕ್ಷೆಯಂತೆ ಮಾರಾಟವಾಗದಿರುವುದು ಮಾರಾಟಗಾರರಲ್ಲಿ ಬೇಸರ ಮೂಡಿಸಿದೆ.
ಪ್ರತಿ ವರ್ಷ ಮಂಡ್ಯದ ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಬಾರಿ ಜಾಗ ಬದಲಾವಣೆ ಮಾಡಲಾಗಿದ್ದು, ಡಾ.ರಾಜ್‌ಕುಮಾರ್ ಬಡಾವಣೆಯ ವಸ್ತು ಪ್ರದರ್ಶನ ನಡೆಯುವ ಜಾಗದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದು ನಗರದ ಬಹುತೇಕ ಜನರಿಗೆ ಗೊತ್ತೇ ಇಲ್ಲ. ಹಲವಾರು ಮಂದಿ ಪಟಾಕಿ ನಿಷೇಧ ಮಾಡಿರಬಹುದೆಂಬ ಗೊಂದಲದಲ್ಲಿದ್ದಾರೆ. ಜಾಗದ ಬದಲಾವಣೆಯೂ ಪಟಾಕಿ ಮಾರಾಟದ ಮೇಲೆ ಕೊಂಚ ಪರಿಣಾಮ ಬೀರಿದೆ ಎನ್ನುವುದು ವ್ಯಾಪಾರಸ್ಥರು ಹೇಳುವ ಮಾತಾಗಿದೆ.
ಹೊಸ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಜನರು ಪಟಾಕಿ ಕೊಂಡೊಯ್ಯಲು ಚೆನ್ನಾಗಿದೆ. ನೀರು, ಮರಳು, ಅಗ್ನಿ ನಿರೋಧಕ ಸಿಲಂಡರ್‌ಗಳಿವೆ. ನಿರೀಕ್ಷಿತ ಮಟ್ಟದಲ್ಲಿ ಜನರು ಪಟಾಕಿ ಕೊಳ್ಳಲು ಬರುತ್ತಿಲ್ಲವೆಂಬುದು ವ್ಯಾಪಾರಸ್ಥರ ಅಳಲಾಗಿದೆ.

ಪಟಾಕಿ ಖರೀದಿಸಲು ಬರುವವರು ಮಕ್ಕಳಿಗೆ ಬೇಕಾದ ಸಣ್ಣ ಪುಟ್ಟ ಪಟಾಕಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ. ದೊಡ್ಡ ದೊಡ್ಡ ಪಟಾಕಿಗಳನ್ನು ಕೊಳ್ಳುವುದಕ್ಕೆ ಯಾರೂ ಆಸಕ್ತಿಯನ್ನು ತೋರುತ್ತಿಲ್ಲ. ಮಕ್ಕಳ ಪಟಾಕಿಗಳಿಗೆ ಬೇಡಿಕೆ ಇದೆಯಾದರೂ ಅತಿ ಶಬ್ಧ ಬರುವ ಪಟಾಕಿಗಳಿಗೆ ಬೇಡಿಕೆ ಇಲ್ಲವಾಗಿದೆ.
ಕೆಲವರಷ್ಟೇ ಫ್ಯಾನ್ಸಿ ಪಟಾಕಿಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಅವುಗಳ ಬೆಲೆ ದುಬಾರಿಯಾಗಿರುವುದರಿಂದ ಹೆಚ್ಚಿನವರು ಅವುಗಳನ್ನು ಖರೀದಿಸುತ್ತಿಲ್ಲ. ಬಾಕ್ಸ್‌ಗಳು ಕನಿಷ್ಠ 250 ರೂಪಾಯಿನಿಂದ 3 ಸಾವಿರ ರೂಪಾಯಿಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ.
ಪ್ರತಿ 12 ಕಿ.ಮೀಗೊಂದರಂತೆ ಪಟಾಕಿ ಅಂಗಡಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ ಹೊರಗಿನ ತಾಲೂಕಿನವರು ಯಾರೂ ಪಟಾಕಿ ಕೊಳ್ಳುವುದಕ್ಕೆ ಜಿಲ್ಲಾ ಕೇಂದ್ರಕ್ಕೆ ಬರುವುದಿಲ್ಲ. ಆಯಾ ತಾಲೂಕುಗಳಲ್ಲಿಯೇ ಪಟಾಕಿ ಅಂಗಡಿಗಳು ಇರುವುದರಿಂದ ಅಲ್ಲೇ ಅವರು ಕೊಳ್ಳುತ್ತಾರೆ. ಮಂಡ್ಯ ನಗರ ಹಾಗೂ ಸುತ್ತಮುತ್ತಲ ಹಳ್ಳಿಯ ಜನರು ಬಂದು ಖರೀದಿಸಿದರಷ್ಟೇ ವ್ಯಾಪಾರ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.
ನಾವೂ ಸಹ ನಾಲ್ಕೈದು ಲಕ್ಷ ರೂ.ಗಳ ಬಂಡವಾಳ ಹೂಡಿ ಪಟಾಕಿ ಅಂಗಡಿ ತೆರೆದಿದ್ದೇವೆ. ಜೊತೆಗೆ ಜಿಲ್ಲಾಡಳಿತ, ನಗರಸಭೆ, ಪೊಲೀಸ್, ಅಗ್ನಿಶಾಮಕ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಪಡೆಯಬೇಕಿದೆ. ಇದಕ್ಕೆಲ್ಲಾ ಸುಮಾರು 30 ರಿಂದ 40 ಸಾವಿರ ರೂ.ಗಳ ವೆಚ್ಚ ತಗುಲುತ್ತದೆ. ಹಾಗಾಗಿ ಇದೂ ಸಹ ನಮ್ಮ ವ್ಯಾಪಾರಕ್ಕೆ ಕೊಂಚ ಅಡತಡೆ ಎನ್ನಬಹುದಾಗಿದೆ ಎಂಬುದು ವ್ಯಾಪಾರಸ್ಥರ ಅಳಲಾಗಿದೆ.
ಜಿಲ್ಲಾಡಳಿತ ನೀಡಿರುವ ಹೊಸ ಜಾಗದಲ್ಲಿ 17 ಸ್ಟಾಲ್‌ಗಳಿವೆ. ಪಾರ್ಕಿಂಗ್ ವ್ಯವಸ್ಥೆ, ಜನರಿಗೆ ಕೊಂಡೊಯ್ಯಲು ಚೆನ್ನಾಗಿದೆ. ನೀರು, ಮರಳು, ಅಗ್ನಿ ನಿರೋಧಕ ಸಿಲಿಂಡರ್‌ಗಳಿವೆ. ಪಟಾಕಿ ಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಲಕ್ಷಾಂತರ ರು. ಬಂಡವಾಳ ಹೂಡಿದ್ದೇವೆ. ವ್ಯಾಪಾರ ಇನ್ನೂ ಚೇತರಿಕೆ ಕಂಡಿಲ್ಲ. ಒಂದೆರಡು ದಿನಗಳ ಕಾಲ ನೋಡಬೇಕಿದೆ ಎಂದು ಕಾರ್ಯದರ್ಶಿ ಶೀತಲ್ ಹೇಳಿದ್ದಾರೆ.
ಕೋವಿಡ್ ಬರುವ ಮುನ್ನ ಇದ್ದ ವ್ಯಾಪಾರಕ್ಕೂ ಈಗಿನ ವ್ಯಾಪಾರಕ್ಕೂ ಬಹಳ ವ್ಯತ್ಯಾಸವಿದೆ. ಹಿಂದೆ ಚೆನ್ನಾಗಿ ನಡೆಯುತ್ತಿತ್ತು. ಈಗ ಕುಂಠಿತವಾಗಿದೆ. ಜೊತೆಗೆ ಪ್ರತೀ 12 ಕಿ.ಮೀ.ಗೊಮ್ಮೆ ಪಟಾಕಿ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮೊದಲೆಲ್ಲಾ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಪಟಾಕಿ ಅಂಗಡಿ ತೆರೆಯಲು ಅನುಮತಿ ನೀಡಲಾಗುತ್ತಿತ್ತು. ಈಗ ಹೋಬಳಿ ವ್ಯಾಪ್ತಿಯಲ್ಲೂ ವ್ಯಾಪಾರ ನಡೆಸಬಹುದಾಗಿದೆ. ಇದೂ ಸಹ ಪಟಾಕಿ ವ್ಯಾಪಾರಕ್ಕೆ ತೊಡಕಾಗಿದೆ. ಹಾಗೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಪಟಾಕಿ ಮಾರಾಟಗಾರ ನಾಗರಾಜು ಹೇಳಿದ್ದಾರೆ.












Click it and Unblock the Notifications