ಮಂಡ್ಯ ಜಿಲ್ಲೆಯ ಕೆನ್ನಾಳು ಗ್ರಾಮದಲ್ಲಿ ಗಿನ್ನಿಸ್ ದಾಖಲೆ ಬರೆಯಲು ಸಜ್ಜಾದ ಉಲ್ಟಾ ಬರಹಗಾರ
ಮಂಡ್ಯ, ಸೆಪ್ಟೆಂಬರ್, 22: ಬರವಣಿಗೆ ಎನ್ನುವುದು ಮನುಷ್ಯನ ಅಂತರಂಗದ ಕನ್ನಡಿ ಎಂಬ ಮಾತಿದೆ. ಅದರಲ್ಲೂ ಕನ್ನಡ ಬರವಣಿಗೆ ಬಗ್ಗೆ ಇಂದಿನ ಯುವಕ-ಯುವತಿಯರಲ್ಲಿ ತಾತ್ಸಾರವೇ ಹೆಚ್ಚು. ಇಂತಹ ಕಾಲಘಟ್ಟದಲ್ಲಿ ಮಂಡ್ಯ ಜಿಲ್ಲೆಯ ಕೆನ್ನಾಳು ಗ್ರಾಮದ ರವಿ ಎನ್ನುವ ಯುವಕ ಕನ್ನಡ ಲಿಪಿಯನ್ನು ಸುಲಲಿತವಾಗಿ ಹಿಂಬದಿಯಿಂದ ಬರೆಯುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.
ಪಾಂಡವಪುರ ತಾಲೂಕು ಕೆನ್ನಾಳು ಗ್ರಾಮದ ರವಿ ಎಂಬಾತ ಉಲ್ಟಾ ಬರವಣಿಗೆಯನ್ನು ರೂಢಿಸಿಕೊಂಡಿರುವ ಸೃಜನಶೀಲ ಕಲೆಗಾರ ಆಗಿದ್ದಾನೆ. ಈತ ವೃತ್ತಿಯಲ್ಲಿ ಹಾಲಿನ ಡೈರಿಯಲ್ಲಿ ಗುಮಾಸ್ತನಾಗಿದ್ದಾನೆ. ಇವರು ಪಿಯುಸಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಕೆಲಸ ಮಾಡುತ್ತಾ ಬಿಡುವಿನ ಸಮಯದಲ್ಲಿ ಕಾವ್ಯ, ಕವನ, ಸೂಕ್ತಿ ಮತ್ತು ತತ್ವಪದಗಳನ್ನು ಹಿಂಬದಿಯಿಂದ ಬರೆಯುವ ಕಲೆಯನ್ನು ರೂಢಿಸಿಕೊಂಡಿದ್ದಾನೆ. ತನ್ನೊಳಗಿರುವ ಕಲೆಯನ್ನು ಗುರುತಿಸಿಕೊಳ್ಳಲು ಯೂ-ಟ್ಯೂಬ್ ಚಾನೆಲ್ ತೆರೆದು ತಾನು ಬರೆದ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾನೆ.
ಇದರ ಮೂಲಕ ಬಡ ಕುಟುಂಬದಲ್ಲಿ ಹುಟ್ಟಿದ ರವಿಯೊಳಗೊಬ್ಬ ಕವಿಯೂ ಇದ್ದಾನೆ ಸಾಬೀತಾಗಿದೆ. ಕವಿತೆಗಳನ್ನು, ಗಿಡಗಳ ಎಲೆ ಹಾಗೂ ಹೂವಿನ ದಳಗಳ ಮೇಲೆ ಉಲ್ಟಾ ಮೂಡಿಸುತ್ತಾ ಎಲ್ಲರನ್ನು ದಿಗ್ಭ್ರಮೆಗೊಳಿಸಿದ್ದಾನೆ. ಈತ ಸರಾಗವಾಗಿ ಕನ್ನಡ ಅಕ್ಷರಗಳನ್ನು ತಪ್ಪಿಲ್ಲದೆ ಉಲ್ಟಾ ಬರೆಯುವುದನ್ನು ಕಂಡು ಅಲ್ಲಿನ ಸ್ಥಳೀಯರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.

1-7ನೇ ತರಗತಿ ಅಜ್ಜಿ ಮನೆಯಲ್ಲಿ ವ್ಯಾಸಂಗ
ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದ ಅಜ್ಜಿ ಮನೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ರವಿ ವ್ಯಾಸಂಗ ಮಾಡಿಕೊಂಡಿದ್ದ. ಒಂದು ದಿನ ಕನ್ನಡ ಪುಸ್ತಕವನ್ನು ಕನ್ನಡಿ ಮುಂದೆ ಹಿಡಿದು ನೋಡಿದ್ದಾನೆ. ಅದರಲ್ಲಿ ಅಕ್ಷರಗಳು ಉಲ್ಟಾ ಕಾಣಿಸಿದ್ದನ್ನು ಕಂಡು ಆಕರ್ಷಿತನಾಗಿದ್ದಾನೆ. ಎಲ್ಲರೂ ಸಾಮಾನ್ಯವಾಗಿ ಬರೆಯುವಂತೆ ಬರೆಯುವುದರ ಬದಲು ಉಲ್ಟಾ ಬರೆದರೆ ಹೇಗಿರುತ್ತದೆ ಎಂದುಕೊಂಡು ಆ ಕ್ಷಣದಿಂದಲೇ ಕನ್ನಡದ ಅಕ್ಷರಗಳನ್ನು ಉಲ್ಟಾ ಬರೆಯುವುದಕ್ಕೆ ಆರಂಭಿಸಿದ್ದಾನೆ.

ಸ್ವಲ್ಪ ದಿನಗಳ ಬಳಿಕ ಸ್ತಬ್ಧನಾಗಿದ್ದ ರವಿ
ಕೆಲವೇ ವರ್ಷಗಳಲ್ಲಿ ಕಲೆಯನ್ನು ಸಿದ್ಧಿಸಿಕೊಂಡ ರವಿ ಸಲೀಸಾಗಿ ಬರೆಯಲಾರಂಭಿಸಿದನು. ಏಳನೇ ತರಗತಿಯ ನಂತರ ಹುಟ್ಟೂರು ಕೆನ್ನಾಳು ಗ್ರಾಮಕ್ಕೆ ಬಂದ ರವಿ ಹಲವು ವರ್ಷಗಳ ಕಾಲ ಉಲ್ಟಾ ಬರವಣಿಗೆಯನ್ನು ನಿಲ್ಲಿಸಿದ್ದನು. ಆನಂತರ ಡೇರಿ ಕೆಲಸಕ್ಕೆ ಸೇರಿದ ರವಿಗರ ಬಿಡುವಿನ ಸಮಯದಲ್ಲಿ ಮತ್ತೆ ತನ್ನೊಳಗಿರುವ ಕಲೆಗೆ ಜೀವ ತುಂಬುವ ಆಸೆ ಚಿಗುರೊಡೆಯಿತು. ಎರಡು ವರ್ಷಗಳಿಂದ ಮತ್ತೆ ಕನ್ನಡ ಅಕ್ಷರಗಳನ್ನು ಉಲ್ಟಾ ಬರೆಯಲು ಆರಂಭಿಸಿದನು.
ದಾಸವಾಳ ಹೂವಿನ ದಳ, ಹೊಂಗೆ ಗಿಡದ ಚಿಗುರೆಲೆ, ತೆಂಗಿನ ಗರಿ, ಬಾಳೆ ಎಲೆ, ಹಸಿರು ತರಕಾರಿಗಳಲ್ಲೂ ಸಹ ರವಿಯ ಕಾವ್ಯ ರಾರಾಜಿಸುತ್ತಿದೆ. ಕನ್ನಡ ಅಕ್ಷರಗಳನ್ನು ಉಲ್ಟಾ ಬರೆಯುವ ಕಲೆಯನ್ನು ರೂಡಿ ಮಾಡಿಕೊಂಡಿದ್ದರೂ, ಅದು ಎಲ್ಲಿಯೂ ಬೆಳಕಿಗೆ ಬರದೇ, ಇಂದಿಗೂ ರವಿ ಎಲೆಮರೆ ಕಾಯಿಯಂತೆಯೇ ಉಳಿದುಕೊಂಡಿದ್ದಾನೆ.

ಛಲ ಬಿಡದ ಉಲ್ಟಾ ಬಹರಗಾರ ರವಿ
ತನ್ನೊಳಗಿರುವ ಕಲೆಯನ್ನು ಹೊರಜಗತ್ತು ಗುರುತಿಸುತ್ತಿಲ್ಲವೆಂಬ ಕೊರಗು ಅವನನ್ನು ಕಾಡುತ್ತಿದೆ. ಕನ್ನಡದಲ್ಲಿ ಉಲ್ಟಾ ಬರೆಯುವ ಕಲೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ಸಲುವಾಗಿಯೇ ಹೂವಿನ ದಳ, ಗಿಡಗಳ ಎಲೆಯ ಮೇಲೆ ಕನ್ನಡ ಅಕ್ಷರಗಳನ್ನು ಉಲ್ಟಾ ಬರೆಯುವುದನ್ನು ವೀಡಿಯೋ ಮಾಡಿ ಅಪ್‌ಲೋಡ್ ಮಾಡುತ್ತಿದ್ದಾನೆ. ಆದರೆ ಈತನ ಕಲೆಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ಆದರೂ ತನ್ನೊಳಗಿರುವ ಪ್ರತಿಭೆಗೆ ಎಂದಾದರೂ ಒಂದು ದಿನ ಮನ್ನಣೆ ಸಿಗುಬಹುದೆಂಬ ಅಚಲ ಆತ್ಮವಿಶ್ವಾಸದೊಂದಿಗೆ ಬರವಣಿಗೆಯನ್ನು ಮುಂದುವರೆಸಿದ್ದಾನೆ.

ಯೂಟ್ಯೂಬ್ ಚಾನಲ್‌ನಲ್ಲಿ ಕಲೆಗೆ ಬಣ್ಣ
ಕನ್ನಡ ಲಿಪಿಗಳನ್ನು ಉಲ್ಟಾ ಬರೆಯುವ ರವಿ, ಈ ಬರವಣಿಗೆಯಲ್ಲಿ ಗಿನ್ನಿಸ್ ದಾಖಲೆ ಮಾಡುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾನೆ. ಬಿಡುವು ಸಿಕ್ಕಾಗಲೆಲ್ಲಾ ಯಾವುದಾದರೂ ಒಂದು ಎಲೆ, ಹೂವಿನ ದಳ, ತರಕಾರಿಯನ್ನಿಟ್ಟುಕೊಂಡು ಉಲ್ಟಾ ಬರವಣಿಗೆ ಶುರು ಮಾಡುತ್ತಾನೆ. ಈತನೊಳಗಿರುವ ಕಲೆಯನ್ನು ಗುರುತಿಸಿ ಇದುವರೆಗೂ ಯಾರೂ ಸಹ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿಲ್ಲದಿರುವುದು ವಿಪರ್ಯಾಸದ ಸಂಗತಿ ಆಗಿದೆ. ನಾನು ಏಕಾಂಗಿ ಆದರೂ ಪರವಾಗಿಲ್ಲ, ನನಗೆ ನಕಲಿ ಸಂಬಂಧಗಳ ಅಗತ್ಯವಿಲ್ಲ ಎಂದು ರವಿಯವರು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಇವರು ಭಗ್ನಪ್ರೇಮಿಯಂತೆ ಕಂಡುಬರುತ್ತಾರೆ. ಸೌಮ್ಯ ಸ್ವಭಾವದ ಹಾಗೂ ಸದಾ ಮೌನಿ ಆಗಿರುವ ರವಿಯೊಳಗೊಬ್ಬ ಕವಿ ಅಡಗಿರುವುದು ಬಹುತೇಕರಿಗೆ ಗೊತ್ತಿಲ್ಲ.
ಕನ್ನಡ ಅಕ್ಷರಗಳನ್ನು ಎಲ್ಲರಿಗಿಂತ ವಿಭಿನ್ನವಾಗಿ ಬರೆಯುವ ಆಲೋಚನೆ ಮೂಡಿದ ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ತಂದಿದ್ದೇನೆ. ಕೆಲ ವರ್ಷಗಳಲ್ಲೇ ಉಲ್ಟಾ ಅಕ್ಷರಗಳನ್ನು ಬರೆಯುವುದನ್ನು ರೂಡಿ ಮಾಡಿಕೊಂಡಿದ್ದೇನೆ. ಅದೇ ಸಮಯಕ್ಕೆ ಕವಿತೆಗಳು, ಕವನಗಳು ನನ್ನೊಳಗೆ ಸೃಷ್ಟಿ ಆದವು. ಅಂತರಾಳದಲ್ಲಿ ಮೂಡಿದ ಕವಿತೆಗಳನ್ನು ಗಿಡ-ಮರಗಳ ಎಲೆಗಳು, ಹೂವಿನ ದಳಗಳ ಮೇಲೆ ಮೂಡಿಸುತ್ತಾ ಅದನ್ನು ವಿಡಿಯೋ ಮಾಡಿ ನನ್ನದೇ ಯೂ-ಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿದ್ದೇನೆ. ಇದರಲ್ಲಿ ಗಿನ್ನಿಸ್ ದಾಖಲೆ ಮಾಡುವ ಕನಸು ನನ್ನದಾಗಿದೆ ಎಂದುಪಾಂಡವಪುರ ತಾಲೂಕು ಕೆನ್ನಾಳು ಗ್ರಾಮದ ರವಿ ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications