KRS ಬಳಿ ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನ ನಿರ್ಮಾಣ ಯೋಜನೆಗೆ ಕ್ರಮ: DCM ಡಿಕೆಶಿ ಭರವಸೆ
ಮಂಡ್ಯ, ಜುಲೈ, 07: ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೃಷ್ಣರಾಜಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಕಾವೇರಿ ಪ್ರತಿಮೆ ಮತ್ತು ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ನಿರ್ಮಾಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಸಾರ್ವಜನಿಕ-ಖಾಸಗೀ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಇದನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ. ಮಾದೇಗೌಡ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ಕೆ.ಆರ್.ಎಸ್. ಜಲಾಶಯ ಮತ್ತು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಈ ಯೋಜನೆಯ ಅಂದಾಜು ಮೊತ್ತ 1,425 ರೂ. ಕೋಟಿಗಳಾಗಿದ್ದು, ಅನುಷ್ಠಾನಕ್ಕೆ 198 ಹೆಕ್ಟೇರ್ ಭೂಮಿ ಅವಶ್ಯಕತೆ ಇದೆ. ಸದರಿ ಭೂಮಿಯು ಸರ್ಕಾರಿ ಸ್ವಾಮ್ಯದ್ದಾಗಿರುತ್ತದೆ. ಖಾಸಗಿಯಾಗಿ ಭೂಮಿಯನ್ನು ಪಡೆಯುವ ಉದ್ದೇಶವಿಲ್ಲ. ಯೋಜನೆಯ ಅನುಷ್ಠಾನದಿಂದ ಪ್ರವಾಸೋದ್ಯಕ್ಕೆ ಉತ್ತೇಜನ ಸಿಗಲಿದ್ದು, ನೇರ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.
ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಲಕ್ಷಾಂತರ ಜನರ ಬದುಕಿಗೆ ಆಧಾರ ಆಗಿರುವ ಕೆ.ಆರ್.ಎಸ್. ಜಲಾಶಯಕ್ಕೆ ಯಾವುದೇ ಧಕ್ಕೆ ಆಗದಂತೆ ಹಾಗೂ ರೈತರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಅಲ್ಲದೆ ಪ್ರಸ್ತುತ ಯೋಜನಾ ವರದಿಯು ಅನುಮೋದನಾ ಪ್ರಕ್ರಿಯೆಯಲ್ಲಿದ್ದು, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ. ಪಿಪಿಪಿ ಯೋಜನೆಯು ಪ್ರಾಜೆಕ್ಟ್ ಅಪ್ರೈಸಲ್ ಸಮಿತಿ ಸಭೆಯಲ್ಲಿ ಇದನ್ನು ಸಲ್ಲಿಸಲು ಹಾಗೂ ಕೆಲವು ಸಲಹೆಗಳನ್ನುನೀಡಿ ಮಾಪಾರ್ಡಿತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿರುತ್ತಾರೆ. ಅದರಂತೆ ಅನುಪಾಲನಾ ಕ್ರಮವಹಿಸಲಾಗಿರುತ್ತದೆ ಎಂದು ವಿವರಿಸಿದರು.
ಬೇರೆಡೆ ಪ್ರಸ್ತಾವನೆ ಇಲ್ಲ
ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆ.ಆರ್.ಎಸ್. ಹೊರತುಪಡಿಸಿದಂತೆ ಬೇರೆಡೆ ಉದ್ಯಾನ ಮಾಡುವ ಯೋಜನೆ ಸರ್ಕಾರದ ಮುಂದಿಲ್ಲ. ಕೇವಲ ಕೆ.ಆರ್.ಎಸ್. ಮಾತ್ರ ಈ ಯೋಜನೆಲ್ಲಿ ಅನುಷ್ಠಾನ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಇನ್ನು ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆಯನ್ನು ಮುಂದೂಡಿತ್ತು ಎಂದರು.
ಇದೀಗ ಮತ್ತೆ ಈ ಪ್ರಸ್ತಾವನೆ ಮುನ್ನೆಲೆಗೆ ಬಂದಿದ್ದು, ಯೋಜನೆ ಅನುಷ್ಠಾನವಾದಲ್ಲಿ ಕೆ.ಆರ್.ಎಸ್.ಗೆ ಅಪಾಯವಾಗುವ ಸಾಧ್ಯತೆಗಳಿವೆ. ಈ ಯೋಜನೆಯನ್ನು ಗಗನಚುಕ್ಕಿ ಜಲಪಾತದ ಬಳಿ ಮಾಡುವಂತೆ ಒತ್ತಾಯಗಳು ಕೇಳಿಬಂದಿದ್ದವು. ಆದರೆ ಸರ್ಕಾರ ಯಾವುದೇ ಪ್ರಸ್ತಾವನೆಗಳಿಗೆ ಮಾನ್ಯತೆ ನೀಡಿರಲಿಲ್ಲ.
ಈ ಯೋಜನೆ ಮತ್ತೆ ಅನುಷ್ಠಾನದ ಕುರಿತಂತೆ ಸರ್ಕಾರ ಮಾಹಿತಿ ನೀಡಿದ್ದು, ರೈತರು ಮತ್ತು ಸಾರ್ವಜನಿಕರು ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆಂಬುದನ್ನು ಕಾದುನೋಡಬೇಕಿದೆ. ಒಂದು ವೇಳೆ ಜನರ ವಿರೋಧ ಕಂಡುಬಂದಲ್ಲಿ ಸರ್ಕಾರದ ನಡೆ ಏನು ಎಂಬುದೂ ಕುತೂಹಲ ಕೆರಳಿಸಿದೆ.












Click it and Unblock the Notifications