ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ₹75 ಲಕ್ಷ ಮೌಲ್ಯದ ಆಭರಣ ನೀಡಿದ ಭಕ್ತೆ
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಮೈಸೂರು ಕುವೆಂಪುನಗರದ ನಿವಾಸಿ ಡಾ.ಲಕ್ಷಮ್ಮ ಎಂಬ ಭಕ್ತೆ ಸುಮಾರು 75ಲಕ್ಷ ರೂ ಮೌಲ್ಯದ ಚಿನ್ನಾಭರಣ ನೀಡಿದ್ದಾರೆ.
ಚೆಲುವನಾರಾಯಣಸ್ವಾಮಿಯ ಭಕ್ತೆಯಾದ ವಯೋವೃದ್ಧರಾದ ಲಕ್ಮಮ್ಮ ಮನೆಯಲ್ಲಿ ಬಳಸಿದ ಚಿನ್ನ ಮತ್ತು ಬೆಳ್ಳಿಯ ಎರಡು ಟ್ರಂಕ್‌ನಲ್ಲಿ ತುಂಬಿದ ಆಭರಣವನ್ನು ದೇವಾಲಯದ ಇಒ ಮಹೇಶ್‌ಗೆ ಹಸ್ತಾಂತರ ಮಾಡಿದ್ದಾರೆ.

ಸ್ಥಳೀಯ ಅಕ್ಕಸಾಲಿಗರನ್ನು ಕರೆಸಿದ ಕಾರ್ಯನಿರ್ವಾಹಕ ಅಧಿಕಾರಿ ಚಿನ್ನ ಮತ್ತು ಬೆಳ್ಳಿಯ ಮೌಲ್ಯಮಾಪನ ಮಾಡಿಸಿದ್ದಾರೆ ದೀಪದ ಕಂಬ, ಚೊಂಬು, ಆರತಿತಟ್ಟೆ, ಸೇರಿದಂತೆ ಅಂದಾಜು 25 ಕೆಜಿ ಬೆಳ್ಳಿ ಬಂಗಾರದ ಬಳೆ ಸರ ಸೇರಿದಂತೆ 250 ಗ್ರಾಂ ಬಂಗಾರದ ಆಭರಣಗಳನ್ನು ತೂಕದ ಮೂಲಕ ಲೆಕ್ಕಾಚಾರ ಮಾಡಿ ಟ್ರಂಕ್‌ನಲ್ಲಿ ಇರಿಸಿ ದೇವಾಲಯದ ಕಚೇರಿಯಲ್ಲಿ ಡಿಸಿ ಭದ್ರ ಮಾಡಿದ್ದಾರೆ.
ಚೆಲುವನಾರಾಯಣಸ್ವಾಮಿ ಭಕ್ತೆ ವಯೋವೃದ್ಧರಾಗಿದ್ದು ಆಭರಣಗಳು ಅನ್ಯರಪಾಲಾಗುವ ಬದಲು ದೇವಾಲಯಕ್ಕೆ ಸೇರಲಿ ಎಂಬ ಆಶಯದಿಂದ ಸಮರ್ಪಿಸಿದ್ದೇನೆ ಎಂದಿದ್ದಾರೆ.
ಭಕ್ತರು ದೇವಾಲಯಕ್ಕೆ ನೀಡಿದ ಲಕ್ಷಾಂತರೂ ಮೌಲ್ಯದ ಆಭರಣಗಳನ್ನು ಬೊಕ್ಕಸದವಹಿಯಲ್ಲಿ ದಾಖಲಿಸಿ ಬೊಕ್ಕಸದಲ್ಲಿಡಬೇಕಿದ್ದರೂ ಕೀ ಮತ್ತು ಬೊಕ್ಕಸದ ವಹಿ ಇಟ್ಟುಕೊಂಡಿದ್ದ ದೇವಾಲಯ ಪ್ರಥಮದರ್ಜೆ ಸಹಾಯಕ ಪ್ರಕಾಶ್ ಉಡಾಫೆ ಮಾಡಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಆಭರಣಗಳನ್ನು ಎರಡು ದಿನ ನಿಯಮ ಉಲ್ಲಂಘಿಸಿ ಕಚೇರಿಯಲ್ಲೇ ಇಡುವಂತಾಗಿದೆ.
ಕುಡಿತದ ಚಟ ಇರುವ ಅಧಿಕಾರಿ
ಡಾ.ಲಕ್ಷಮ್ಮ ಸೋಮವಾರ ಮಧ್ಯಾಹ್ನ ಆಭರಣ ನೀಡಿದ ನಂತರ ಮೌಲ್ಯಮಾಪನ ಮಾಡಿದ ನಂತರ ಸಮಗ್ರವಾಗಿ ಆಭರಣಗಳ ವಿವರವನ್ನು ಬೊಕ್ಕಸದವಹಿಯಲ್ಲಿ ದಾಖಲಿಸಿ ಸ್ಥಾನೀಕರು ಅರ್ಚಕ, ಪರಿಚಾರಕರ ಸಮಕ್ಷಮ ಪರಿಶೀಲಿಸಿ ದೇವಾಲಯದ ಬೊಕ್ಕಸದಲ್ಲಿಟ್ಟು ಜಿಲ್ಲಾಧಿಕಾರಿಗಳಿಗೆ ವರದಿಸಲ್ಲಿಸಬೇಕಾಗಿತ್ತು ಆದರೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಕುಡಿದ ಅಮಲಿನಲ್ಲಿದ್ದ ಪ್ರಥಮದರ್ಜೆ ಸಹಾಯಕ ಮನೆಗೆ ತೆರಳಿದ ಕಾರಣ ಈ ಕಾರ್ಯ ಆಗಲಿಲ್ಲ. ಮಂಗಳವಾರವೂ ಸಹ ಪ್ರಕಾಶ್ ಕರ್ತವ್ಯಕ್ಕೆ ಹಾಜರಾಗದಕಾರಣ ಲಕ್ಷಾಂತರೂ ಮೌಲ್ಯದ ಆಭರಣಗಳು ಕಚೇರಿಯಲ್ಲೇ ಉಳಿಯುವಂತಾಗಿ ಭದ್ರತಾ ನಿಯಮ ಉಲ್ಲಂಘನೆಯಾಗಿದೆ.
ಪ್ರಥಮದರ್ಜೆ ಸಹಾಯಕ ಕರ್ತವ್ಯಕ್ಕೆ ಗೈರುಹಾಜರಾಗುವುದರ ಜೊತೆಗೆ ಕುಡಿತದ ಚಟ ಹೊಂದಿದ್ದಾರೆ ಕುಡಿದೇ ದೇವಾಲಯದ ಕರ್ತವ್ಯಕ್ಕೂ ಹಾಜರಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಇಂತಹ ನೌಕರನ್ನು ತಕ್ಷಣ ಜಿಲ್ಲಾಧಿಕಾರಿಗಳು ಬೇರೆಡೆವರ್ಗಾಯಿಸಿ ದೇವಾಲಯದ ಪಾವಿತ್ಯ್ರತೆ ಕಾಪಾಡಬೇಕೆಂದು ಹೆಸರೇಳಲು ಇಚ್ಚಿಸದ ಕೈಂಕರ್ಯಪರರು ಮನವಿ ಮಾಡಿದ್ದಾರೆ.












Click it and Unblock the Notifications