Coromandel Sugar Factory: ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾದ ಮಾಕವಳ್ಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆ
ಮಂಡ್ಯ, ನವೆಂಬರ್, 06: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಹತ್ತು ಹಲವು ಕಾರ್ಯಗಳನ್ನು ಮಾಡುವ ಮೂಲಕ ರೈತರ ಜೀವನಾಡಿಯಾಗಿ ಗಮನಸೆಳೆಯುತ್ತಿದ್ದು, ಇದೀಗ ಕೇವಲ ಕಬ್ಬು ಅರೆಯುವುದು ಮಾತ್ರವಲ್ಲದೆ, ವಿದ್ಯುತ್ ಮತ್ತು ಎಥೆನಾಲ್ ಉತ್ಪಾದನೆಯತ್ತ ಗಮನಹರಿಸಿದೆ. ಅಲ್ಲದೆ ಕಬ್ಬು ಅರೆದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಅದರಿಂದ ಕಾರ್ಖಾನೆ ಆವರಣದಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿರುವುದು ವಿಶೇಷವಾಗಿದೆ.
ಮತ್ತೊಂದೆಡೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಕಬ್ಬಿನಿಂದ ದೊರೆಯುವ ಉಪ ಉತ್ಪನ್ನಗಳ ತಯಾರಿಕೆಗೆ ಮುಂದಾಗಿದ್ದು, ಕಬ್ಬಿನ ಸಿಪ್ಪೆಯನ್ನು ಬಳಸಿಕೊಂಡು 30 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಪೆಟ್ರೋಲ್‌ಗೆ ಸರಿಸಮನಾಗಿರುವ ಎಥೆನಾಲ್ ಉತ್ಪಾದನೆಗೂ ಒತ್ತು ನೀಡಿದೆ.

ಈಗಾಗಲೇ ಭಾರತ ಸರ್ಕಾರವು ಎಲ್ಲಾ ರೀತಿಯ ನೆರವು ಹಾಗೂ ಆರ್ಥಿಕ ಸಬ್ಸಿಡಿಯನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಎಥೆನಾಲ್ ಘಟಕದ ಸ್ಥಾಪನೆಗೆ ಅನುಮತಿಯನ್ನು ಪಡೆದಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಜನಾಭಿಪ್ರಾಯ ಸಂಗ್ರಹಣೆಯೊಂದಿಗೆ ಮುಂದಿನ ಪ್ರಕ್ರಿಯೆಯತ್ತ ದಾಪುಗಾಲಿಟ್ಟಿದೆ.
ಎಥೆನಾಲ್ ಉತ್ಪಾದನೆಗೆ ಒತ್ತು
ಮಂಡ್ಯ ಜಿಲ್ಲೆಯ ಅತ್ಯಾಧುನಿಕ ರೈತಸ್ನೇಹಿ ಸಕ್ಕರೆ ಕಾರ್ಖಾನೆ ಆಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪ್ರಸ್ತುತ ಕಬ್ಬು 8 ಹಂಗಾಮಿನಲ್ಲಿ 7 ಲಕ್ಷ ಟನ್ ಕಬ್ಬು ಅರೆಯಲು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಈವರೆಗೆ ಪ್ರತಿದಿನ 4800 ಟನ್ ಸರಾಸರಿಯಂತೆ 2ಲಕ್ಷ ಟನ್‌ಗೂ ಹೆಚ್ಚು ಕಬ್ಬನ್ನು ಅರೆದಿದ್ದು, ರೈತರ ಕಬ್ಬಿನ ಸಂಪೂರ್ಣ ಹಣವನ್ನು ಪಾವತಿ ಮಾಡಿರುವ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಬ್ಬಿನ ಮೊಲಾಸಿಸ್ ಅನ್ನು ಸಂಸ್ಕರಣೆ ಮಾಡಿದ ನಂತರ ಉತ್ಪಾದನೆಯಾಗುವ ಎಥೆನಾಲ್‌ಗೆ ಪರ್ಯಾಯ ಇಂಧನವಾಗಿ ಮಾರಕಟ್ಟೆಯಲ್ಲಿ ಭಾರೀ ಬೇಡಿಕೆಯಿರುವುದರಿಂದ ಭಾರತ ಸರ್ಕಾರವೇ ಸ್ವದೇಶಿ ಸ್ವಾವಲಂಭನೆಗೆ ಒತ್ತು ನೀಡಿ ಖುದ್ಧು ಎಥೆನಾಲ್ ತಯಾರಿಕೆಗೆ ಬೇಕಾದ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ಉಪಕರಣಗಳ ಬಗ್ಗೆ ಮಾಹಿತಿ ನೀಡಿ ಉತ್ತೇಜಿಸಿ ಪ್ರೋತ್ಸಾಹ ನೀಡುತ್ತಿದೆ.
ತ್ಯಾಜ್ಯ ನೀರು ಸಂಸ್ಕರಿಸಿ ಮರು ಬಳಕೆ
ಹೀಗಾಗಿ ಜಿಲ್ಲೆಯ ಮದ್ದೂರಿನ ಕೊಪ್ಪದ ಸಿಎಸ್‌ಎಲ್ ಷುಗರ್ಸ್, ಕೆ.ಎಂ.ದೊಡ್ಡಿಯ ಚಾಮುಂಡೇಶ್ವರಿ ಷುಗರ್ಸ್, ಮಂಡ್ಯದ ಮೈಷುಗರ್ ಹಾಗೂ ಪಾಂಡವಪುರದ ನಿರಾಣಿ ಷುಗರ್ಸ್ ಈಗಾಗಲೇ ಎಥೆನಾಲ್ ಉತ್ಪಾದನೆಗೆ ಮುಂದಾಗಿವೆ. ಈ ನಡುವೆ ಎಥೆನಾಲ್ ಘಟಕ ಸ್ಥಾಪಿಸಿದ ಜಿಲ್ಲೆಯ ಏಕೈಕ ಕಾರ್ಖಾನೆಯಾಗಿ ಕೆ.ಆರ್.ಪೇಟೆಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಗಮನಸೆಳೆದಿದೆ.
ಹೇಮಾವತಿ ನದಿಯ ನೀರನ್ನು ಬಳಕೆ ಮಾಡಿಕೊಂಡು ಕಾರ್ಖಾನೆಯು ಸಕ್ಕರೆ ಉತ್ಪಾದನೆ ಮಾಡಿ ತನಗೆ ನಿಗದಿಪಡಿಸಿರುವ ನೀರಿನ ಪ್ರಮಾಣದಲ್ಲಿ ಕೇವಲ ಅರ್ಧದಷ್ಟು ನೀರನ್ನು ಸಹ ಬಳಕೆ ಮಾಡದೆ ಸಕ್ಕರೆಯ ಉತ್ಪಾದನೆಯ ನಂತರ ಸಂಗ್ರಹವಾಗುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡಿಕೊಂಡು ಕಾರ್ಖಾನೆಯ ಆವರಣದಲ್ಲಿ ಕಬ್ಬು ಬೆಳೆಯುತ್ತಿದೆ.
ಹಸಿರೀಕರಣದತ್ತ ಹೆಚ್ಚಿನ ಕಾಳಜಿ
ಅಷ್ಟೇ ಅಲ್ಲದೆ ಇಲ್ಲಿರುವ ಗಿಡ-ಮರಗಳಿಗೆ ಬೇಕಾದ ಜೀವಜಲ ನೀರನ್ನು ಉಣಿಸಲು ಮುಂದಾಗಿರುವ ಕಾರ್ಖಾನೆಯ ಆಡಳಿತ ಮಂಡಳಿಯು ಮಾವು, ಬೇವು, ಹಿಪ್ಪೆ, ಮಹಾಘನಿ, ತೇಗ, ಹೆಬ್ಬೇವು, ತೆಂಗು ಸೇರಿದಂತೆ 25 ಸಾವಿರಕ್ಕೂ ಹೆಚ್ಚಿನ ವಿವಿಧ ಜಾತಿಯ ಕಾಡು ಮರಗಳನ್ನು ಬೆಳೆಸಿ ಹಸಿರೀಕರಣದತ್ತ ಹೆಚ್ಚಿನ ಕಾಳಜಿ ವಹಿಸುತ್ತಿದೆ.
ಸಂಸ್ಕರಣೆ ಮಾಡಿದ ನೀರನ್ನು ಬಳಕೆ ಮಾಡಿಕೊಂಡು 25 ಹೆಕ್ಟೇರ್ ಭೂಪ್ರದೇಶದಲ್ಲಿ ಕಬ್ಬನ್ನು ಬೆಳೆಯುತ್ತಿದೆ. ಕಾರ್ಖಾನೆಯಿಂದ ಹೊರಬರುವ ಒಂದೇ ಒಂದು ಹನಿ ನೀರನ್ನೂ ಸಹ ಕಾರ್ಖಾನೆಯಿಂದ ಹೊರಹೋಗಲು ಬಿಡದೆ ಸಂಸ್ಕರಣೆ ಮಾಡಿ ಮರು ಬಳಕೆ ಮಾಡಿ ಬೇಸಾಯಕ್ಕೆ ಹಾಗೂ ಗಿಡಮರಗಳಿಗೆ ಹಾಯಿಸಲಾಗುತ್ತಿದೆ.
10 ಸಾವಿರ ಕುಟುಂಬಕ್ಕೆ ಆಸರೆ
ಇಷ್ಟೇ ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಹೊಂದಿರುವುದರಿಂದಾಗಿ ಹಾರುಬೂದಿ, ಕೆಟ್ಟ ವಾಸನೆ ಬಾರದ ಕಾರಣ ಸುತ್ತಮುತ್ತಲಿನವರು ನೆಮ್ಮದಿಯಿಂದ ಇದ್ದಾರೆ. ಈ ಕಾರ್ಖಾನೆಯಿಂದ ರೈತರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗಿದೆ.












Click it and Unblock the Notifications