ಮಂಡ್ಯ:ಸಂಸದೆ ಸುಮಲತಾ ಬೆಂಬಲಿಗರ ಸಭೆಗೆ ಹೋಗದಂತೆ ಕಾಂಗ್ರೆಸ್ ಕಾರ್ಯರ್ತರಿಗೆ ಎಚ್ಚರಿಕೆ
ಸುಮಲತಾ ಬೆಂಬಲಿಗರ ಸಭೆಗೆ ಹೋಗದಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಭೆಗಳಿಗೆ ಹೋಗುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಮಂಡ್ಯ, ಫೆಬ್ರವರಿ 6: ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರು ಕರೆಯುವ ರಾಜಕೀಯ ಸಭೆಗಳಿಗೆ ಹೋಗುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳ ಹಿಂದೆ ನಗರದಲ್ಲಿ ಸುಮಲತಾ ಬೆಂಬಲಿಗರು ನಡೆಸಿದ ಸಭೆಗೆ ಕಾಂಗ್ರಸ್‌ನ ಕೆಲವು ಮುಖಂಡರು, ಕಾರ್ಯಕರ್ತರು ಹೋಗಿದ್ದಾರೆ. ಇದು ಸರಿಯಲ್ಲ. ಇದು ಪುನರಾವರ್ತನೆಯಾದಲ್ಲಿ ಪಕ್ಷದ ಜಿಲ್ಲಾ ಮತ್ತು ರಾಜ್ಯ ನಾಯಕರ ಗಮನಕ್ಕೆ ತಂದು ಪಕ್ಷದ ವೇದಿಕೆಯಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ನಿಂತಿದ್ದರೂ, ಸ್ಥಳೀಯ ರಾಜಕೀಯ ಕಾರಣಗಳಿಗಾಗಿ ನಿಖಿಲ್ ಸೋಲಿಸಲು ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಸಂಸದರು ಆಡಳಿತ ಪಕ್ಷ ಬಿಜೆಪಿ ಪರವಾಗಿ ಹಲವು ಕಾಯ್ದೆಗಳನ್ನು ಬೆಂಬಲಿಸಿರುವುದು ಗೊತ್ತಿರುವ ವಿಚಾರ. ಹಾಗಾಗಿ ನಮ್ಮ ಪಕ್ಷದ ಮುಖಂಡರನ್ನು ಸಭೆಗೆ ಆಹ್ವಾನಿಸಿರುವುದು ಅನಗತ್ಯ. ಅವರ ಬೆಂಬಲಿಗರ ಪ್ರಕಾರ ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಸಂಸದರು ಸಂಪೂರ್ಣ ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದರು.

ನಗರಸಭೆ ಚುನಾವಣೆ, ಕೆ.ಆರ್.ಪೇಟೆ ಉಪ ಚುನಾವಣೆ, ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ, ಗ್ರಾಮ ಪಂಚಾಯಿತಿ, ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ತಟಸ್ಥ ನೀತಿಯನ್ನು ಘೋಷಿಸುವ ಮೂಲಕ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಂಡಿರುವುದಿಲ್ಲ ಎಂದರು.
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಯಿಂದ ವಿಮುಖರಾದಾಗಲೂ ಕೂಡ ಸಂಸದರು ತಟಸ್ಥ ನೀತಿ ಅನುಸರಿಸಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಸಂಸದರ ಬೆಂಬಲಿಗರು, ಬೆಂಬಲಿಗರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಆಹ್ವಾನಿಸಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ರುದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ ಕುಮಾರ್, ನಗರಸಭಾ ಸದಸ್ಯ ನಯೀಂ, ಮುಖಂಡರಾದ ವಿಜಯಲಕ್ಷ್ಮಿ ರಘುನಂದನ್, ಅಪ್ಪಾಜಿಗೌಡ ಹಾಜರಿದ್ದರು.












Click it and Unblock the Notifications