ಇನ್ನೂ ಟೈಮ್ ಇದೆ ನೋಡೋನ ಎಂದ ನಟಿ ರಮ್ಯಾ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯ ಸುಳಿವು ನೀಡಿದ ಮೋಹಕ ತಾರೆ
ಮಂಡ್ಯ, ಮೇ 02: ಕಳೆದ ಕೆಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದ ಕಾಂಗ್ರೆಸ್ ನಾಯಕಿ, ಮೋಹಕ ತಾರೆ ನಟಿ ರಮ್ಯಾ ಮತ್ತೆ ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣೆಗೆ ಮುನ್ನ ರಮ್ಯಾ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪಕ್ಷಕ್ಕೆ ಮತ ಯಾಚಿಸಿದರು.
ಮಂಡ್ಯದಲ್ಲಿ ನಡೆದ ರ್ಯಾಲಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದರು.

'ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಇನ್ನೂ ನಿರ್ಧರಿಸಿಲ್ಲ. ಇದು ನಮ್ಮ ನಿರ್ಧಾರವೂ ಅಲ್ಲ. ಅಭ್ಯರ್ಥಿಗಳು ಯಾರು ಎಂಬುದನ್ನು ಪಕ್ಷ ನಿರ್ಧರಿಸಬೇಕಿದೆ. ಹಲವು ಆಕಾಂಕ್ಷಿಗಳಿದ್ದು, ಪಕ್ಷವು ಸಮೀಕ್ಷೆ ನಡೆಸಿ ಗೆಲುವಿನ ಆಧಾರದ ಮೇಲೆ ಟಿಕೆಟ್ ನೀಡಲಿದೆ. ಇನ್ನೂ ಸಮಯವಿದೆ ನೋಡೋಣ' ಎಂದು ರಮ್ಯಾ ಹೇಳಿದರು. 2024ರಲ್ಲಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವರೇ ಎಂಬ ಪ್ರಶ್ನೆಗೆ ರಮ್ಯಾ ಉತ್ತರಿಸಿದರು.
ಪ್ರಸ್ತುತ ಮಂಡ್ಯ ಕ್ಷೇತ್ರವನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರವನ್ನೂ ಮಾಡುತ್ತಿದ್ದಾರೆ.

2019 ರಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥರ ಸ್ಥಾನಕ್ಕೆ ರಮ್ಯಾ ರಾಜೀನಾಮೆ ನೀಡಿದರು. ಅಂದಿನಿಂದ ಅವರು ರಾಜಕೀಯದಿಂದ ದೂರವಿದ್ದರು. 'ಭಾರತ್ ಜೋಡೋ ಯಾತ್ರೆ' ಕರ್ನಾಟಕದಲ್ಲಿ ಹಾದು ಹೋಗುತ್ತಿದ್ದಾಗ ರಮ್ಯಾ ಅವರು ರಾಹುಲ್ ಗಾಂಧಿಯೊಂದಿಗೆ ಕಾಣಿಸಿಕೊಂಡರು. ಅದರ ನಂತರ, ರಮ್ಯಾ ಚುನಾವಣಾ ರ್ಯಾಲಿಯಲ್ಲಿ ಇದೇ ಮೊದಲ ಬಾರಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ವರುಣಾ, ಮೈಸೂರು, ಹುಬ್ಬಳ್ಳಿ ಮತ್ತು ವಿಜಯಪುರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಾಗಿ ನಟಿ ರಮ್ಯಾ ಹೇಳಿದರು. ಅವರ ಮದುವೆಯ ಬಗ್ಗೆ ಕೇಳಿದಾಗ, ರಮ್ಯಾ ಅವರು 'ಗೌಡ್ರು' ವರನನ್ನು ಹುಡುಕುತ್ತಿರುವುದಾಗಿ ತಿಳಿಸಿದರು. ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ರಮ್ಯಾ ಸಹಿತಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಒಕ್ಕಲಿಗರನ್ನು ಹಳೇ ಮೈಸೂರು ಭಾಗದಲ್ಲಿ ಗೌಡರು ಎನ್ನುತ್ತಾರೆ.
'ಮೊದಲು ನನಗಾಗಿ ಒಬ್ಬ ಹುಡುಗನನ್ನು ಹುಡುಕಿಕೊಡಿ. ಗೌಡ್ರು ವರ ಸಿಕ್ಕರೆ ನೋಡಿ. ನಾನು ಯಾರನ್ನೂ ಹುಡುಕಲು ಸಾಧ್ಯವಾಗುತ್ತಿಲ್ಲ. ಆದ್ರೂ ಹುಡುಗನ ಹುಡುಕಾಟಕ್ಕೆ ಬೇಜಾರಾಗಿದೆ. ನೀವು ನನ್ನ ಸ್ವಯಂವರ ಮಾಡಿ' ಎಂದು ರಮ್ಯಾ ಹೇಳಿದರು.
2013ರಲ್ಲಿ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ರಮ್ಯಾ ಗೆದ್ದಿದ್ದರು. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಸಿಎಸ್ ಪುಟ್ಟರಾಜು ವಿರುದ್ಧ ಸೋಲು ಕಂಡಿದ್ದರು.












Click it and Unblock the Notifications