ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ: ಜಿ.ಟಿ. ದೇವೇಗೌಡ
ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಆಗಬಾರದು ಎನ್ನುವ ಉದ್ದೇಶದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅವಾಂತರಗಳನ್ನು ಸೃಷ್ಟಿಸುತ್ತಿದೆ, ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮ ಆಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಭವಿಷ್ಯ ನುಡಿದರು.
ಮಂಡ್ಯದ ವಿದ್ಯಾನಗರದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ಶಿಕ್ಷಣ ಕ್ಷೇತ್ರವು ಗಣನೀಯವಾಗಿ ಕುಸಿದಿದೆ, ಭಾರತದ ದೇಶದ ಭವಿಷ್ಯ ಚಿತ್ರಣವನ್ನು ನೋಡಿದ್ದೇವೆ, ಆದರೆ ಕರ್ನಾಟಕದ ಚಿತ್ರಣವನ್ನು ನೋಡುತ್ತಿದ್ದೇವೆ, ಏಕೆಂದರೆ ಐದು ಗ್ಯಾರಂಟಿಯನ್ನು ಕೊಟ್ಟ ಕಾಂಗ್ರೆಸ್ ಸರ್ಕಾರವು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಏನಾಗಿದೆ ಎಂಬುದನ್ನು ನೋಡುತ್ತಿದ್ದೀರ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಒತ್ತು ನೀಡಿದ್ದರು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದರು, ಅದರಂತೆ ಯಡಿಯೂರಪ್ಪ ಅವರು ಕೂಡ ಶಿಕ್ಷಣ ಕ್ಷೇತ್ರಕ್ಕೆ ಶ್ರಮಿಸಿದ್ದಾರೆ, ನಾನು ಸಹ ಮಂತ್ರಿಯಾಗಿದ್ದಾಗ ಶಾಲೆಗಳಲ್ಲಿ ಲೈಬ್ರರಿ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಿದ್ದೇನೆ, ನನ್ನ ಅವಧಿಯಲ್ಲಿ ಯಾರನ್ನೂ ವರ್ಗಾವಣೆ ಮಾಡಲು ಮತ್ತು ಅಮಾನತು ಮಾಡಲು ಬಿಡಲಿಲ್ಲ ಎಂದು ಹೇಳಿದರು.
ವಿವೇಕಾನಂದರನ್ನು ಬೆಂಬಲಿಸಲು ಮನವಿ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿರುವ ಕೆ.ವಿವೇಕಾನಂದ ಅವರಿಗೆ ಶಿಕ್ಷಕರು ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕು. ಅವರು ಒಂದು ಗುರಿಯನ್ನಿಟ್ಟುಕೊಂಡಿದ್ದಾರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಏಕೆಂದರೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರು ಇದ್ದಾರೆ ಯಾರೂ ಸಹ ಯೋಚನೆ ಮಾಡಬೇಡಿ, ನಿಮ್ಮ ಕ್ಷೇತ್ರವು ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರು ಮತ್ತು ಎಚ್.ಡಿ.ದೇವೇಗೌಡ ಅವರು ಒಟ್ಟಿಗೆ ಕುಳಿತು ವೇದಿಕೆ ಹಂಚಿಕೊಂಡಾಗಲೇ ಕಾಂಗ್ರೆಸ್‌ನವರಿಗೆ ಹೊಟ್ಟೆಕಿಚ್ಚು ಹುಟ್ಟಿಕೊಂಡಿತು, ಯಾವುದೇ ಕಾರಣಕ್ಕು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಆಗುವುದಕ್ಕೆ ಬಿಡಬಾರದು ಎಂಬುವ ಉದ್ದೇಶದಿಂದಲೇ ಇಷ್ಟೆಲ್ಲಾ ಅವಾಂತರಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ, ಆದರೆ ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ, ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಕೆಲಸ ಇನ್ನಾದರೂ ನಿಲ್ಲಬೇಕು ಎಂದು ಆಗ್ರಹಿಸಿದರು.
ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಮಾತನಾಡಿ, ಕಳೆದ 20 ವರ್ಷಗಳಿಂದ ಸತತವಾಗಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೇನೆ, ಅದರಂತೆ ಮೈತ್ರಿ ಮಾಡಿಕೊಂಡ ನಂತರ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿರುವ ನಾನು, ಶಿಕ್ಷಕರ ಕ್ಷೇತ್ರಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ, ಶಿಕ್ಷಕರು ಮೊದಲ ಪ್ರಾಶಸ್ತ್ಯೆ ಮತ ನೀಡುವ ಮೂಲಕ ಒಂದೇ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.












Click it and Unblock the Notifications