ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
ಮೈತ್ರಿ ಹೆಸರಿನಲ್ಲಿ ಕಾಂಗ್ರೆಸ್ ನಮ್ಮ ಬೆನ್ನಿಗೆ ಚೂರಿ ಹಾಕಿತು. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸಹಜವಾದ ಮೈತ್ರಿ. ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ನಿರ್ಧಾರ ಮಾಡಲಾಗಿದೆ. ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಹಾಲು-ಜೇನಿನಂತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ ನಗರದ ಸುರಭಿ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಗುರುವಾರ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಬಿಜೆಪಿ ಜೊತೆ ಸರ್ಕಾರ ಮಾಡಿದ ದಿನದಿಂದ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ನಾನು ಕೊಟ್ಟ 20 ತಿಂಗಳ ಆಡಳಿತವನ್ನು ಜನರು ಇಂದಿಗೂ ನೆನೆಯುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಏನೇ ಕುತಂತ್ರ ಮಾಡಿದರೂ ಜೆಡಿಎಸ್ ಮುಗಿಸಲು ಆಗಲ್ಲ ಎಂದರು.

ಅಧಿಕಾರ ಹಸ್ತಾಂತರಿಸಲಿಲ್ಲವೆಂಬ ಆರೋಪ
ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಆರೋಪವನ್ನು ನನ್ನ ಮೇಲೆ ಮಾಡುತ್ತಾರೆ. ನಾನು ಮಾಡದಿರುವ ತಪ್ಪನ್ನು ನನ್ನ ತಲೆ ಮೇಲೆ ಹೊತ್ತಿದ್ದೇನೆ. ಅದರಿಂದ 17 ವರ್ಷ ವನವಾಸ ಅನುಭವಿಸಿದ್ದೇನೆ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿಕ್ಕೆ ಕಾರಣ ಅವರ ಶಕ್ತಿ ಅಲ್ಲ. ಜೆಡಿಎಸ್-ಬಿಜೆಪಿ ಹೊಂದಾಣಿಕೆಯಾಗದೆ ನಮ್ಮ ನಡುವೆಯೇ ಉಂಟಾದ ಪೈಪೋಟಿ ಅವರಿಗೆ ಲಾಭವಾಗಿದೆ. ಕಾಂಗ್ರೆಸ್ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಎಂದು ವ್ಯಂಗ್ಯವಾಡಿದರು.
ದೇಶ ಬಿಡುವ ಬಗ್ಗೆ ಹೇಳಿದ್ದೇನು?
ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ದೇವೇಗೌಡರು ಹೇಳಿರಲಿಲ್ಲ. ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಚುನಾವಣೆ ಸಮಯದಲ್ಲಿ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದರಲ್ಲದೆ, ಮೋದಿ ಅವರು ದೇವೇಗೌಡರನ್ನು ತಂದೆ ಸಮನಾಗಿ ನಡೆಸಿಕೊಂಡು ಗೌರವ ಕೊಡುತ್ತಾರೆ. ಆದರೆ ಸಿದ್ದರಾಮಯ್ಯ ಹಿರಿತನವನ್ನು ಮರೆತು ದೇವೇಗೌಡರನ್ನು ಹೀಯಾಳಿಸುತ್ತಾರೆ. ಇದೇ ಸಿದ್ದರಾಮಯ್ಯಗೂ ಮೋದಿಗೂ ಇರುವ ವ್ಯತ್ಯಾಸ ಎಂದು ಟೀಕಿಸಿದರು.
ಡಿಸೆಂಬರ್ ವೇಳೆಗೆ ಸರ್ಕಾರ ಪತನ
ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ಈ ಚುನಾವಣೆ ನಂತರ ಮುಂದಿನ ಡಿಸೆಂಬರ್ ತಿಂಗಳ ಒಳಗೆ ಸರ್ಕಾರ ಪತನವಾಗಲಿದೆ. ಸರ್ಕಾರ ಬೀಳಿಸುವುದಕ್ಕೆ ನಾವು ವಿಜಯೇಂದ್ರ ಕಷ್ಟಪಡಬೇಕಿಲ್ಲ. ಅವರೇ ಅವರ ಸರ್ಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದರು.
ಮೇಕೆದಾಟು ಅಣೆಕಟ್ಟೆಗಾಗಿ ಪಾದಯಾತ್ರೆ ಮಾಡಿದರು. ಇವತ್ತು ಏನಾಗಿದೆ. ಮೇಕೆದಾಟು ಕಟ್ಟಲು ಅನುಮತಿ ಕೇಳುತ್ತಿದ್ದಾರೆ. ಹಾಗಾದರೆ ಪಾದಯಾತ್ರೆ ಯಾಕೆ ಮಾಡಿದಿರಿ. ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಕಟ್ಟಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಪೇಪರ್, ಪೆನ್ನು ಕೊಟ್ಟರೆ ನಾಳೆ ಬೆಳಗ್ಗೆಯೇ ಮೇಕೆದಾಟು ಅಣೆಕಟ್ಟು ನಿರ್ಮಿಸುವುದಾಗಿ ಹೇಳಿದರಲ್ಲ ಈಗ ಏನಾಗಿದೆ, ಸವಾಲಾಗಿ ಸ್ವೀಕರಿಸಿ ಮೇಕೆದಾಟು ಯೋಜನೆ ಜಾರಿಗೊಳಿಸಿ. ಮೇಕೆದಾಟು ಹೆಸರೇಳಿಕೊಂಡು ರಾಜಕಾರಣ ಮಾಡುವ ದರಿದ್ರ ದೇವೇಗೌಡರಿಗೆ ಬಂದಿಲ್ಲ ಎಂದರು.
ಪಾದಯಾತ್ರೆಯಿಂದ ಅಣೆಕಟ್ಟು ನಿರ್ಮಾಣ ಮಾಡಲಾಗದು. ಪ್ರಾಧಿಕಾರದಲ್ಲಿ ಸರಿಯಾದ ವಾದ ಮಂಡನೆ ಆಗಬೇಕು. ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಅಣೆಕಟ್ಟು ಕಟ್ಟಲಾಗುವುದಿಲ್ಲ ಎಂದರು.












Click it and Unblock the Notifications