ಅಂಬಿ ಹುಟ್ಟೂರು ದೊಡ್ಡರಸಿನಕೆರೆ ಕಾಳಿಕಾಂಭ ಯುವಕರ ಬಳಗದ ಕನಸು ನನಸಾಗಲೇ ಇಲ್ಲ
ಮಂಡ್ಯ, ನವೆಂಬರ್.26: ಅಂಬರೀಶ್ ಹುಟ್ಟಿದ ಊರು ದೊಡ್ಡರಸಿನಕೆರೆ ಗ್ರಾಮದಲ್ಲೀಗ ನೀರವ ಮೌನ ಮನೆ ಮಾಡಿದೆ. ಅವರು ಅಲ್ಲಿ ಹುಟ್ಟಿದರೂ ಬೆಳೆದಿದ್ದೆಲ್ಲ ಮೈಸೂರು. ಮುಂದೆ ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಆದರೂ ಹುಟ್ಟೂರಿನ ನಂಟು ಮಾತ್ರ ಬಿಟ್ಟಿರಲಿಲ್ಲ.
ಇತ್ತೀಚೆಗಷ್ಟೆ ಹುಟ್ಟಿದ ಊರಿನಲ್ಲಿದ್ದ ತಾತನ ಕಾಲದ ಆಸ್ತಿಯನ್ನು ಪುತ್ರನ ಹೆಸರಿಗೆ ಬರೆದಿದ್ದರು. ಅಲ್ಲದೆ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಇದೆಲ್ಲವನ್ನು ನೆನಪಿಸಿಕೊಳ್ಳುವ ಗ್ರಾಮಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಈ ನಡುವೆ ದೊಡ್ಡರಸಿನಕೆರೆ ಗ್ರಾಮದ ಕಾಳಿಕಾಂಭ ಹೆಬ್ಬಾಗಿಲು ಹಾಗೂ ಅಂಬಿ ವೃತ್ತದಲ್ಲಿ ಅಂಬರೀಶ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು ಅಂಬರೀಶ್ ಅವರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ಅಂಬರೀಶ್ 13 ವರ್ಷಗಳ ಹಿಂದೆ ತಮ್ಮ ಪೂರ್ವಿಕರರು ನಿರ್ಮಿಸಿದ್ದ ಮನೆಯನ್ನು ಕೆಡವಿ ತಮ್ಮ ತಂದೆ ತಾಯಿ ಎಂ. ಹುಚ್ಚೇಗೌಡ ಹಾಗೂ ಟಿ.ಸಿ. ಪದ್ಮಮ್ಮ ಅವರ ಸ್ಮರಣಾರ್ಥ ಹೊಸದಾಗಿ ಮನೆ ನಿರ್ಮಿಸಿದ್ದರು. ಆ ನಂತರ ಚುನಾವಣೆ ಸಂದರ್ಭ ತಮ್ಮ ಊರಿಗೆ ಬಂದು ಮತ ಚಲಾಯಿಸಿ ಹೋಗುತ್ತಿದ್ದರು.
ಅಂಬರೀಶ್ ಹೆಸರಿನಲ್ಲಿದ್ದ 6.36 ಜಮೀನಿನಲ್ಲಿ ಅವರ ಸಂಬಂಧಿಕರು ಬೆಳೆ ಬೆಳೆಯುತ್ತಿದ್ದಾರೆ. ಅನಾರೋಗ್ಯ ಕಾರಣ ಈಗ್ಗೆ ಮೂರು ತಿಂಗಳ ಹಿಂದೆ ತಮ್ಮ ಮಗನಿಗೆ ಆ ಜಮೀನುಗಳನ್ನು ವರ್ಗಾಯಿಸಿದ್ದರು

ತಮ್ಮದೇ ಊರಿನ ಹುಡುಗ ನಟ, ರಾಜಕೀಯ ನಾಯಕನಾಗಿ ಬೆಳೆದ ಪರಿಯನ್ನು ಹತ್ತಿರದಿಂದ ನೋಡಿದ ಗ್ರಾಮದ ಕಾಳಿಕಾಂಭ ಯುವಕರ ಬಳಗವು ಅಂಬರೀಶ್ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸುವ ಕನಸು ಹೊಂದಿತ್ತು. ಆದರೆ ಅದು ಮಾತ್ರ ನನಸಾಗಲೇ ಇಲ್ಲ.












Click it and Unblock the Notifications