Bengaluru-Mysuru expressway; ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಮಂಡ್ಯ, ಜೂನ್ 13; "ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿರುವ ಅಪೂರ್ಣ ಕಾಮಗಾರಿ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು" ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲಕೃಷ್ಣ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯನ್ನು ಅವರು ನಡೆಸಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್. ಹೆಚ್. ಮೃತ್ಯಂಜಯ, ರಾಜೇಂದ್ರಕುಮಾರ್, ಪ್ರಸಾದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹರ್ಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಡಾ. ಹೆಚ್. ಎನ್. ಗೋಪಾಲಕೃಷ್ಣ ಮಾತನಾಡಿ, "ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಸಂಚಾರಕ್ಕೆ ಅನಾನುಕೂಲ ಉಂಟಾಗಿದೆ. ಮಂಡ್ಯ ಜಿಲ್ಲೆಗೆ ಒಳಪಡುವ 55 ಕಿ. ಮೀ. ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಹಲವಾರು ಅಪಘಾತಗಳು ನಡೆದು ಸಾವು, ನೋವು ಸಂಭವಿಸಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ" ಎಂದು ನಿರ್ದೇಶನ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಈ ಯೋಜನೆ ಕರ್ನಾಟಕದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಲಿದೆ ಎಂದು ಬಣ್ಣಿಸಿದ್ದರು. ಉಭಯ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ರಸ್ತೆ ಕಡಿಮೆ ಮಾಡಿದೆ.
ಡಿಸಿ ನೀಡಿದ ಸೂಚನೆಗಳು; ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲಕೃಷ್ಣ, "ರಸ್ತೆ ಗುಣಮಟ್ಟ ಕಾಪಾಡಿಕೊಳ್ಳಿ, ರಸ್ತೆಯ ಆಗಮನ ಮತ್ತು ನಿರ್ಗಮನದಲ್ಲಿ ಸೂಚನಾ ಫಲಕ ಅಳವಡಿಸಿ, ಸರ್ವಿಸ್ ರಸ್ತೆಯ ಜಂಕ್ಷನ್‌ನಲ್ಲಿ ದೀಪ ಅಳವಡಿಸಿ, ಹೈವೇನಲ್ಲಿ ವೇಗ ಮಿತಿ ಪರೀಕ್ಷಾ ವಾಹನ ಒದಗಿಸಬೇಕು, ರಸ್ತೆಯ 2 ಬದಿಗಳಲ್ಲಿ ವಿದ್ಯುತ್ ಟವರ್ ಕಳ್ಳತನದ ಬಗ್ಗೆ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಎನ್‌ಎಚ್‌ಎಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
"ರಸ್ತೆ ಬದಿಯ ಬೇಲಿ ಕೀಳುವುದುರಿಂದ ಅಪಘಾತವಾಗುವ ಸಂಭವ ಇರುತ್ತದೆ. ಬೇಲಿ ಕೀಳುವವರ ಮೇಲೆ ಪ್ರಕರಣ ದಾಖಲಿಸಿ. ದಶಪಥ ರಸ್ತೆಗೆ ಒಳಪಡುವ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಗ್ರಾಮಗಳಲ್ಲಿ ರಸ್ತೆ ಸುರಕ್ಷತಾ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್, ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳು ಎಲ್ಲೆಲ್ಲಿ ಗುಂಡಿಗಳು ಇರುತ್ತದೆಯೋ ಅಲ್ಲಿ ಗುಂಡಿ ಮುಚ್ಚಿ ಹಾಗೂ ರಸ್ತೆಯ ಅವ್ಯವಸ್ಥೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು" ಎಂದರು.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಮಾತನಾಡಿ, "ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಮಂಡ್ಯ ಸರ್ವಿಸ್ ರೋಡ್‌ನಿಂದ ಮದ್ದೂರಿನ ಮುಖ್ಯ ರಸ್ತೆಗೆ ಸೇರುವ ರಸ್ತೆಯಲ್ಲಿ ರಸ್ತೆಡುಬ್ಬು ಇಲ್ಲದ ಕಾರಣ ಮುಖ್ಯ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ರಸ್ತೆ ಡುಬ್ಬ ನಿರ್ಮಾಣ ಮಾಡಿ ಅಲ್ಲಿನ ಅವ್ಯವಸ್ಥೆ ಸರಿಪಡಿಸಿ" ಎಂದು ಸೂಚಿಸಿದರು.
ತನಿಖೆಗೆ ಒತ್ತಾಯ; ಕೃಷಿ ಹಾಗೂ ಮಂಡ್ಯ ಜಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, "ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ನೋಡಿದರೆ ದೇಶದಲ್ಲಿ ಕಳಪೆ ಕಾಮಗಾರಿ ಎನಿಸುತ್ತದೆ. ಯೋಜನೆ ಭೂ ಸ್ವಾಧೀನದಲ್ಲಿಯೂ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪವಿದೆ. ಆದ್ದರಿಂದ ಸಮಗ್ರ ತನಿಖೆಯಾಗಬೇಕು" ಎಂದು ಹೇಳಿದ್ದರು.
ಮಂಡ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಚಿವರು, "ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಅಗತ್ಯ ಇರುವ ಯಾವುದೇ ಸೌಲಭ್ಯ ಇಲ್ಲ" ಎಂದು ಆರೋಪಿಸಿದ್ದಾರೆ.












Click it and Unblock the Notifications