ಮಂಡ್ಯ: ಚಲುವರಾಯಸ್ವಾಮಿ ದೂರು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ, ಮಹಿಳೆಯರಿಂದ ಪೊರಕೆ ಚಳವಳಿ

ಮಂಡ್ಯ, ಆಗಸ್ಟ್‌, 08: ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದರ ಹಿಂದೆ ಜೆಡಿಎಸ್-ಬಿಜೆಪಿ ಪಕ್ಷಗಳ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದರು. ಇದೇ ವೇಳೆ ದ್ವೇಷ ರಾಜಕಾರಣ ಮಾಡುತ್ತಿರುವ ಜೆಡಿಎಸ್-ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Complaint against N.Chaluvaraya Swamy: Congress protest in Mandya

ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ಕಳೆದ ಬಾರಿ ಏಳಕ್ಕೆ ಏಳು ಸ್ಥಾನಗಳಲ್ಲಿ ಜೆಡಿಎಸ್ ಗೆದ್ದರೂ ನಾವು ದ್ವೇಷ, ಕುತಂತ್ರದ ರಾಜಕಾರಣ ಮಾಡಲಿಲ್ಲ. ಈಗ ನಾವಿನ್ನೂ ಶಾಸಕರಾಗಿ ಎರಡು ತಿಂಗಳಾಗಿಲ್ಲ. ಆಗಲೇ ಜೆಡಿಎಸ್ ಮತ್ತು ಬಿಜೆಪಿಯವರು ನಮ್ಮ ತೇಜೋವಧೆಗೆ ಷಡ್ಯಂತ್ರ ನಡೆಸುತ್ತಿದ್ದಾರೆ. ಇದು ದ್ವೇಷದ ರಾಜಕಾರಣವಾಗಿದೆ ಎಂದು ಟೀಕಿಸಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿಗೆ ಕಳಂಕ ತರುವುದಕ್ಕೆ ಯತ್ನಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಸಚಿವರ ರಾಜಕೀಯ ಏಳಿಗೆಯನ್ನು ಸಹಿಸದೆ ತೇಜೋವಧೆಗೆ ಯತ್ನಿಸುತ್ತಿರುವುದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.

ಅಧಿಕಾರವಿದ್ದ ಸಮಯದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನೇ ನೀಡದವರು ಇದೀಗ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಶ್ರಮಿಸುತ್ತಿರುವವರಿಗೆ ಬೆಂಬಲವಾಗಿ ನಿಲ್ಲದೆ, ಸಹಕಾರವನ್ನೂ ನೀಡದೆ ಕುತಂತ್ರದಿಂದ ಭ್ರಷ್ಟರೆಂಬ ಹಣೆಪಟ್ಟಿ ಕಟ್ಟಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿರುವ ಪತ್ರ ನಕಲಿ ಎನ್ನುವುದು ವಿಚಾರಣೆಯಿಂದ ಸಾಬೀತಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಸಚಿವರ ಹೆಸರಿಗೆ ಕಳಂಕ ತರಲು ಯತ್ನಿಸಿದವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ, ಕಾಂಗ್ರೆಸ್ ಪಕ್ಷದೊಳಗೆ ಚಲುವರಾಯಸ್ವಾಮಿ ಬೆಳವಣಿಗೆಯನ್ನು ಜೆಡಿಎಸ್‌ನವರಿಂದ ಸಹಿಸಲಾಗುತ್ತಿಲ್ಲ. ಅವರನ್ನು ನೇರ ಟಾರ್ಗೆಟ್ ಮಾಡಿಕೊಂಡು ರಾಜಕೀಯವಾಗಿ ತೇಜೋವಧೆ ಮಾಡುವುದಷ್ಟೇ ಅವರ ಗುರಿಯಾಗಿದೆ. ಅದಕ್ಕೆ ಏನಾದರೊಂದು ಕುತಂತ್ರಗಳನ್ನು ಹುಡುಕುವುದೇ ಅವರ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನಾಗಮಂಗಲ ಸಾರಿಗೆ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣವನ್ನು ಮೊದಲಿಗೆ ರಾಜಕೀಯ ಲಾಭಕ್ಕೆ ಬಳಸಲು ಯತ್ನಿಸಿದರು. ಅದು ಸಾಧ್ಯವಾಗದಿದ್ದಾಗ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಪಾಲರಿಗೆ ದೂರು ಕೊಡಿಸಿ ಕಿರುಕುಳ ನೀಡಲು ಮುಂದಾಗಿದ್ದಾರೆ ಎಂದು ದೂರಿದರು.

ದೂರು ಪತ್ರದಲ್ಲಿ ಬರೆದಿರುವಂತೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಸರಿನಲ್ಲಿರುವ ಕೆಲವು ಅಧಿಕಾರಿಗಳು ಆ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಇದರ ಹಿಂದೆ ರಾಜಕೀಯ ಹುನ್ನಾರ ಅಡಗಿದ್ದು, ಚುನಾಯಿತ ಜನಪ್ರತಿನಿಧಿಗಳ ಮೇಲೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರು ಸಲ್ಲಿಸಿ ಬ್ಲಾಕ್‌ಮೇಲ್ ತಂತ್ರ ಬಳಸುವ ಮೂಲಕ ಜನಪ್ರತಿನಿಧಿಗಳನ್ನು ಬೆದರಿಸುವ ಬಹುದೊಡ್ಡ ಹುನ್ನಾರವಾಗಿದೆ ಎಂದು ಗುಡುಗಿದರು.

ಇದರ ಹಿಂದೆ ದೊಡ್ಡ ಜಾಲವೇ ಅಡಗಿದೆ. ಇಂತಹವರನ್ನು ಪತ್ತೆಹಚ್ಚಿ ಬಗ್ಗು ಬಡಿಯದಿದ್ದರೆ ಜನಪ್ರತಿನಿಧಿ ಮತ್ತು ದಕ್ಷ ಅಧಿಕಾರಿಗಳಿಗೆ ನಿರ್ಭೀತಿಯಿಂದ ಸಾರ್ವಜನಿಕರ ಸೇವೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಜೆಡಿಎಸ್‌ನವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಚಲುವರಾಯಸ್ವಾಮಿ ಅವರು ಸಮರ್ಥ ರಾಜಕೀಯ ನಾಯಕರಾಗಿ ಬೆಳವಣಿಗೆ ಸಾಧಿಸುತ್ತಿರುವುದೇ ತಪ್ಪೇ? ಜೆಡಿಎಸ್‌ನವರು ಷಡ್ಯಂತ್ರಗಳನ್ನು ನಡೆಸದೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಪೊರಕೆ ಹಿಡಿದ ಮಹಿಳೆಯರು

ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವವರ ವಿರುದ್ಧ ಪೊರಕೆ ಹಿಡಿದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಪೊರಕೆಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿವರೆಗೆ ಸಾಗಿಬಂದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಹೆಚ್.ಬಿ.ರಾಮು, ಮುಖಂಡರಾದ ಬಿ.ಎಲ್.ದೇವರಾಜು, ಕೀಲಾರ ರಾಧಾಕೃಷ್ಣ, ಡಾ.ಹೆಚ್.ಕೃಷ್ಣ, ಮಹಮ್ಮದ್ ಜಬೀವುಲ್ಲಾ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಅಶೋಕ್, ರೇವಣ್ಣ, ಬಿ.ಸಿ.ಶಿವಾನಂದ, ರುದ್ರಪ್ಪ, ನಗರಸಭಾ ಸದಸ್ಯರಾದ ನಹೀಂ, ಪೂರ್ಣಿಮಾ, ಶ್ರೀಧರ್, ಪವಿತ್ರಾ, ಎಂ.ಸಿ.ಶಿವಪ್ರಕಾಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಕೆ.ಎನ್.ನಾಗರಾಜು, ಅಪ್ಪಾಜಿ, ಮಂಚೇಗೌಡ, ಸುಂಡಹಳ್ಳಿ ಮಂಜುನಾಥ್, ನವೀನ್‌ಕುಮಾರ್, ವಿಜಯಕುಮಾರ್, ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ, ನಾಗರತ್ನ, ಶುಭದಾಯಿನಿ, ಯಶೋದಾ, ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+