ಅಂಬಿ ಮೇಲೆ ಕ್ರಮ ಕೈಗೊಳ್ಳದ ಸ್ಪೀಕರ್ ಕೋಳಿವಾಡ ವಿರುದ್ಧ ದೂರು!
ಮಂಡ್ಯ, ಜುಲೈ 6: ಕಲಾಪಗಳಲ್ಲಿ ಭಾಗವಹಿಸುತ್ತಿಲ್ಲ, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕ ಅಂಬರೀಶ್ ಅವರ ವಿರುದ್ಧ ಕೆಲ ತಿಂಗಳ ಹಿಂದೆ ಸ್ಪೀಕರ್ ಕೋಳಿವಾಡ ಅವರಿಗೆ ದೂರು ನೀಡಿದ್ದ ಜೆಡಿಯು ಪಕ್ಷದ ಜಿಲ್ಲಾಧ್ಯಕ್ಷ ಬಿ.ಎಸ್.ಗೌಡ ಅವರು ಇದೀಗ ಸ್ಪೀಕರ್ ಕೆ.ಬಿ.ಕೋಳಿವಾಡ ವಿರುದ್ಧವೇ ಲೋಕಸಭಾ ಸ್ಪೀಕರ್ ಗೆ ದೂರು ನೀಡಿದ್ದಾರೆ.
ಶಾಸಕ ಅಂಬರೀಶ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿ.ಎಸ್.ಗೌಡ ಮೂರು ಬಾರಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ದೂರು ನೀಡಿದ್ದು, ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಇದೀಗ ಲೋಕಸಭಾ ಸ್ಪೀಕರ್ ಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಶಾಸಕರಾಗಿ ಅಂಬರೀಶ್ ಸಮರ್ಥವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸಚಿವ ಸ್ಥಾನದಿಂದ ಕೆಳಗಿಳಿದ ಬಳಿಕ ಕ್ಷೇತ್ರಕ್ಕೂ ಸರಿಯಾಗಿ ಬರುತ್ತಿಲ್ಲ. ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ, ಕ್ಷೇತ್ರದ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಶಾಸಕರಾಗಿ ತಮ್ಮ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು.
ಅಂಬರೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ದೂರು ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸದ ಸ್ಪೀಕರ್ ಮೌನಕ್ಕೆ ಶರಣಾಗಿದ್ದರು.

ಇದರಿಂದ ಆಕ್ರೋಶಗೊಂಡ ಬಿ.ಎಸ್.ಗೌಡ ಅವರು ಇದೀಗ ಅಂಬರೀಶ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸ್ಪೀಕರ್ ಕೋಳಿವಾಡ ಅವರು ವಿಫಲರಾಗಿದ್ದಾರೆ. ವಿಧಾನಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಪಕ್ಷಪಾತ ಧೋರಣೆ ಪ್ರದರ್ಶಿಸಿದ್ದಾರೆ. ಅದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications