ಕೋರ್ಟ್ ತೀರ್ಪಿನ ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನದ ನಿರ್ಧಾರ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಸೆಪ್ಟಂಬರ್ 01: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದು ಪಾತ್ರ ಇದೆ ಎಂಬ ಆರೋಪ ಕೇಳಿ ಬಂದ ನಂತರ ಮುಡಾ ಹಗರಣ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಆಗುತ್ತಿವೆ. ದೂರಿನ ಆಧಾರದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟ ಬೆನ್ನಲ್ಲೆ ರಾಜ್ಯ ಸರ್ಕಾರ ಕಾನೂನು ಮೊರೆ ಹೋಗಿದೆ. ಇದೀಗ ಹೈಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ ನಿರ್ಧಾರವಾಗಲಿದೆ ಎಂದು ಮಾಜಿ ಸಿಎಂ, ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾನುವಾರ ಮಂಡ್ಯದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಮುಡಾ ಹಗರಣದ ವಿಚಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನ್ಯಾಯಾಲಯದ ಆದೇಶದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರೆಯುತ್ತಾರೆಯೋ ಇಲ್ಲವೋ? ಎಂಬುದು ನಿರ್ಧಾರವಾಗಲಿದೆ ಎಂದು ಹೇಳಿದರು.

ಪ್ರಾಸಿಕ್ಯೂಷನ್‌ಗೆ ಅನುಮತಿ ಇದೇ ಮೊದಲೇನಲ್ಲ!
ರಾಜ್ಯಪಾಲರು ಪ್ರಕರಣವೊಂದರ ತನಿಖೆಗೆ ಅನುಮತಿ ಕೊಟ್ಟಿರುವುದು ಇದೇ ಮೊದಲೇನಲ್ಲ. ಅನೇಕ ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ಆಗಿವೆ. ನಮ್ಮ ಕರ್ನಾಟಕದಲ್ಲಿಯೂ ಆಗಿವೆ. ಇದೊಂದು ಸ್ಥಾಪಿತ ವ್ಯವಸ್ಥೆ ಆಗಿದೆ ಎಂದರು.
2018 ರಲ್ಲಿ ಒಂದು ತಿದ್ದುಪಡಿ ಆಗಿದೆ. ಅದರ ಆಧಾರದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ. ಸಂವಿಧಾನದ ಕಲಂ 17/2 ತಿದ್ದುಪಡಿ ಆದ ನಂತರ ಏನು ಬದಲಾವಣೆ ಆಗಿದೆ ಎನ್ನುವುದನ್ನು ಇಲ್ಲಿ ಒಂದು ಗಮನಿಸಬೇಕು. ಹಲವಾರು ಸುಪ್ರೀಂ ಕೋರ್ಟ್ ತೀರ್ಪುಗಳು ಇಂತಹ ಪ್ರಕರಣದಲ್ಲಿ ಪ್ರಕಟಗೊಂಡಿವೆ.

ಆದರೆ ಕಾಂಗ್ರೆಸ್ ಮಿತ್ರರು ಯಾಕೆ ಅಷ್ಟೊಂದು ಆತಂಕಕ್ಕೆ ಒಳಗಾಗಿದ್ದಾರೊ ಗೊತ್ತಿಲ್ಲ. ರಾಜ್ಯಪಾಲರು ಒಂದು ತನಿಖೆ ನಡೆಸುವಂತೆ ಆದೇಶ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಪ್ರಕರಣದ ಉದಾಹರಣೆ ನೀಡಿ ಅವರು ತಿಳಿಸಿದರು.
ಮುಡಾ ಪ್ರಕರಣ ಕೋರ್ಟ್‌ನಲ್ಲಿದೆ, ಕಾದು ನೋಡೋಣ
ಎಫ್‌ಐಆರ್ ಆಗಿ ತನಿಖೆಯಾಗಿ, ಚಾರ್ಜ್ ಶೀಟ್ ಆದ ನಂತರ ಪ್ರಾಶಿಕ್ಯೂಷನ್ ಮಾಡಲಾಗುತ್ತದೆ. ಅದು ಯಾವುದನ್ನೂ ಮಾಡದೇ ನೇರವಾಗಿ ಸೆಸನ್ಸ್ ಕೋರ್ಟ್‌ಗೆ ಸಮನ್ಸ್ ಮಾಡುವ ಅಧಿಕಾರವನ್ನು ನೀಡಲಾಗಿತ್ತು. ಅವತ್ತಿನ ಗೌರ್ನರ್ ಆದೇಶದ ಬಗ್ಗೆ ಹಲವಾರು ಕೋರ್ಟ್‌ಗಳಲ್ಲಿ ಟೀಕೆ ಟಿಪ್ಪಣಿ ಆಗಿ, ಆದೇಶಗಳೂ ಆಗಿವೆ. ಇವತ್ತು ರಾಜ್ಯಪಾಲರು ಕೇವಲ ತನಿಖೆ ನಡೆಸಲು ಹೇಳಿದ್ದಾರೆ. ಕೋರ್ಟ್‌ನಲ್ಲಿ ನಡೆಯುತ್ತಿದೆ. ಅಂತಿಮ ಘಟಕ್ಕೆ ಬಂದಿದೆ. ಏನಾಗುತ್ತದೆಯೋ ಕಾದು ನೋಡೋಣ ಎಂದು ತಿಳಿಸಿದರು.
ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳಿಗೆ ಪ್ರಾಶಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ಖುದ್ದು ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿ ಬೊಮ್ಮಾಯಿಯವರು, ಈಗಾಗಲೇ ರಾಜ್ಯಪಾಲರು ಉತ್ತರ ಕೊಟ್ಟಿದ್ದಾರೆ. ಕೆಲವು ಮಾಹಿತಿ ಕೇಳಿದ್ದೇನೆ ಎಂದು ಹೇಳಿದ್ದಾರೆ. ಅದು ಏನೇ ಇರಲಿ, ಆ ಪ್ರಕರಣಗಳಿಗೂ, ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ತಳಕು ಹಾಕುವ ಕೆಲಸ ಮಾಡಬಾರದು. ಇದು ರಾಜ್ಯದ ಮುಖ್ಯಸ್ಥನ ಮೇಲೆ ಇರುವ ಪ್ರಕರಣ ಆಗಿರುವುದರಿಂದ ಹೆಚ್ಚಿನ ಆದ್ಯತೆ ದೊರೆಯುತ್ತದೆ ಎಂದು ತಿಳಿಸಿದರು.
ಕೋರ್ಟ್ ನಿರ್ಧಾರದ ಬಳಿಕ ಸಿಎಂ ಮುಂದುವರಿಕೆ ನಿರ್ಧಾರ
ಮುಖ್ಯಮಂತ್ರಿಗಳ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣವು ಕೋರ್ಟ್‌ನಲ್ಲಿದೆ. ನ್ಯಾಯಾಲಯದ ತೀರ್ಮಾನ ಬಂದ ಬಳಿಕವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದುವರೆಯುವ ಬಗ್ಗೆ ತೀರ್ಮಾನ ಆಗಲಿದೆ. ರಾಜಕೀಯವಾಗಿ ಏನೇ ವಿಶ್ಲೇಷಣೆ ಮಾಡಿದರೂ, ಪ್ರಕರಣ ಕೋರ್ಟ್‌ಗೆ ಹೋಗಿರುವುದರಿಂದ ಕೋರ್ಟ್ ಆದೇಶದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಪುನರುಚ್ಚರಿಸಿದರು.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂಬ ಆರೋಪದಲ್ಲು ಹುರುಳಿಲ್ಲ. ತಮ್ಮನ್ನು ತಾವು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಾಜಕೀಯ ಆರೋಪ ಬಂದಾಗ ಈ ರೀತಿ ಮಾಡುತ್ತಾರೆ. ಇದು ಸಹಜ. ಇನ್ನೂ ಕೊವಿಡ್ ವಿಚಾರದಲ್ಲಿ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದರು. ಆ ಆಯೋಗ ಸಿಎಂಗೆ ವರದಿ ಸಲ್ಲಿಸಿದೆ. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಎಲ್ಲವೂ ಹೊರಗೆ ಬರಲಿ ಅದಕ್ಕೆ ಉತ್ತರ ಕೊಡುತ್ತೇವೆ ಎಂದು ತಿಲಿಸಿದರು.
ಉಪಚುನಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ
ಇನ್ನೂ ಚನ್ನಪಟ್ಟಣ ಉಪ ಚುನಾವಣೆ ಕುರಿತು ಮಾಜಿ ಮುಖ್ಯಮಂತಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಅವರು ತಮ್ಮ ಪಕ್ಷದ ಪಮುಖರ ಜೊತೆಗೆ ಚರ್ಚೆ ಮಾಡುತ್ತಾರೆ. ಹಾಗೂ ಎನ್‌ಡಿಎ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಬಿಜೆಪಿ ವರಿಷ್ಠರು ಹಾಗೂ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.












Click it and Unblock the Notifications