• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದ ನವಿಲುಮಾರನಹಳ್ಳಿಗಿರುವ ಖ್ಯಾತಿ ಏನು ಗೊತ್ತಾ?

|

ಮಂಡ್ಯ, ಜೂನ್ 17: ಡಾಂಬರು ಕಾಣದೆ ಗುಂಡಿ ಬಿದ್ದ ರಸ್ತೆಗಳು... ಸಮರ್ಪಕ ಚರಂಡಿಯಿಲ್ಲದೆ ಎಲ್ಲೆಂದರಲ್ಲಿ ಹರಿಯುವ ತ್ಯಾಜ್ಯ ನೀರು... ಬೀದಿ ದೀಪವಿಲ್ಲದೆ ಕತ್ತಲಲ್ಲೇ ಓಡಾಡಬೇಕಾದ ಅನಿವಾರ್ಯತೆ... ನ್ಯಾಯಬೆಲೆ ಅಂಗಡಿಯಿಲ್ಲದೆ ಪಡಿತರ ತರಲು ಪಕ್ಕದ ಗ್ರಾಮಕ್ಕೆ ತೆರಳಬೇಕಾದ ದುಸ್ಥಿತಿ... ಗ್ರಾಮದ ತುಂಬಾ ಗಿಡಗಂಟಿ ಬೆಳೆದರೂ ತೆರವುಗೊಳಿಸದ ಗ್ರಾಪಂ... ಹೀಗೆ ಪಟ್ಟಿ ಮಾಡುತ್ತಾ ಹೋದಷ್ಟು ಬೆಳೆಯುತ್ತಾ ಹೋಗುವ ಸಮಸ್ಯೆಗಳ ಸರಮಾಲೆಯನ್ನು ಹೊಂದಿರುವ ಗ್ರಾಮದ ಹೆಸರು ನವಿಲುಮಾರನಹಳ್ಳಿ.

ಈ ನವಿಲುಮಾರನಹಳ್ಳಿ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಗೆ ಸೇರಿದೆ. ಈ ಹಳ್ಳಿ ಬಗ್ಗೆ ಮಾತನಾಡಲು ಕಾಲ ಸನ್ನಿಹಿತವಾಗಿದೆ. ಇನ್ನೊಂದು ವಿಚಾರವೇನೆಂದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುಮಾರು 12 ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು ಎನ್ನುವುದು ಈ ಗ್ರಾಮದ ಹೆಗ್ಗಳಿಕೆ.

ಸಿಎಂ ಗ್ರಾಮ ವಾಸ್ತವ್ಯದಿಂದ ಸಾಲಗಾರನಾದ ಮನೆ ಮಾಲೀಕ

ಹನ್ನೆರಡು ವರ್ಷಗಳ ಬಳಿಕ ಮತ್ತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಹೂಡುತ್ತಿರುವ ಈ ಸಮಯದಲ್ಲಿ, ಹಿಂದೆ ಅವರು ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮ ಈಗ ಹೇಗಿದೆ? ಅವತ್ತು ಅವರು ನೀಡಿದ್ದ ಭರವಸೆ ಈಡೇರಿದೆಯಾ? ಎಂಬುದನ್ನು ಮೆಲುಕು ಹಾಕಲೇಬೇಕಾಗಿದೆ.

 2007ರಲ್ಲಿ ನವಿಲುಮಾರನಹಳ್ಳಿಯಲ್ಲಿ ಸಿಎಂ ಗ್ರಾಮವಾಸ್ತವ್ಯ

2007ರಲ್ಲಿ ನವಿಲುಮಾರನಹಳ್ಳಿಯಲ್ಲಿ ಸಿಎಂ ಗ್ರಾಮವಾಸ್ತವ್ಯ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಅವತ್ತಿನ ಅವರ 20 ತಿಂಗಳ ಅವಧಿಯಲ್ಲಿ ಒಂದಷ್ಟು ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅಷ್ಟೇ ಅಲ್ಲ ಕುಗ್ರಾಮಗಳಲ್ಲಿ ವಾಸ್ತವ್ಯ ಹೂಡುವುದರ ಮೂಲಕ ಜನರ ನಡುವೆ ಬೆರೆಯುವ ಸಿಎಂ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅವತ್ತಿನ ಅವರ ಗ್ರಾಮ ವಾಸ್ತವ್ಯವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದಾದರೆ, 2007ನೇ ನವೆಂಬರ್ 30ರಂದು ನವಿಲುಮಾರನಹಳ್ಳಿ ಗ್ರಾಮಕ್ಕೆ ರಾತ್ರಿ 12 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಂದಿದ್ದರು. ಅಂದು ರಾತ್ರಿ ಗ್ರಾಮದ ಬಡ ಕುಟುಂಬವಾದ ಮಾಯಿಗೌಡ ಮತ್ತು ವಿಜಿಯಮ್ಮ ದಂಪತಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅವರು ಮನೆಯಲ್ಲಿದ್ದ ಸಮಯ ಕೆಲವೇ ಕೆಲವು ಗಂಟೆಗಳಷ್ಟೆ. ಅವರೊಂದಿಗೆ ಇವತ್ತು ಸಚಿವರಾಗಿರುವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಮುಖಂಡರಿದ್ದರು.

ಸಿಎಂ ಗ್ರಾಮವಾಸ್ತವ್ಯದಿಂದ ಸಾಲಗಾರನಾದ ಆರೋಪ: ಸಚಿವ ಪುಟ್ಟರಾಜು ಭೇಟಿ

 ಮಾಯಿಗೌಡರ ಸೊಸೆಗೆ ನೌಕರಿಯ ಭರವಸೆ

ಮಾಯಿಗೌಡರ ಸೊಸೆಗೆ ನೌಕರಿಯ ಭರವಸೆ

ವಾಸ್ತವ್ಯ ಹೂಡಿದ್ದ ಮಾಯಿಗೌಡ ಮತ್ತು ವಿಜಿಯಮ್ಮ ದಂಪತಿ ಮನೆಯಲ್ಲಿ ಭೋಜನ ಸ್ವೀಕರಿಸಿದ್ದ ಮುಖ್ಯಮಂತ್ರಿಗಳು ಬಳಿಕ ಅಲ್ಲಿಯೇ ಮಲಗಿ ನಿದ್ದೆ ಮಾಡಿದ್ದರು. ಗ್ರಾಮವಾಸ್ತವ್ಯ ಮುಗಿಸಿ ಬೆಂಗಳೂರಿಗೆ ತೆರಳುವ ಮುನ್ನ ಗ್ರಾಮಕ್ಕೆ ನ್ಯಾಯ ಬೆಲೆ ಅಂಗಡಿ ಮಂಜೂರು ಮಾಡಿಸಿಕೊಡುತ್ತೇನೆ, ಮಾಯಿಗೌಡರ ಸೊಸೆಗೆ ಅಂಗನವಾಡಿಯಲ್ಲಿ ನೌಕರಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರಂತೆ. ಆದರೆ ಮುಖ್ಯಮಂತ್ರಿಗಳು ಭರವಸೆ ನೀಡಿ ಸುಮಾರು ಹನ್ನೆರಡು ವರ್ಷಗಳು ಕಳೆದರೂ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿಸಿಕೊಡಲಿಲ್ಲ. ಸೊಸೆ ರಜಿನಿ ಅವರಿಗೆ ಅಂಗನವಾಡಿ ನೌಕರಿಯನ್ನೂ ಕೊಡಿಸಲಿಲ್ಲ ಎಂಬುದು ವಾಸ್ತವದ ಸತ್ಯ.

ಅವತ್ತು ಸಿಎಂ ತಮ್ಮ ಮನೆಗೆ ಬರುತ್ತಿದ್ದಾರೆ ಎಂಬುದು ತಿಳಿದಾಗ ಮಾಯಿಗೌಡ ಅವರು ತಮ್ಮ ಮನೆಯ ಎದುರಿದ್ದ ಹೊಂಡವನ್ನು ಸುಮಾರು 1 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಮುಚ್ಚಿಸಿದ್ದರಂತೆ. ಅಲ್ಲದೆ ಅನುಪಯುಕ್ತ ಗಿಡಮರಗಳನ್ನು ಕಡಿದು ಮನೆಗೆ ತೆರಳಲು ದಾರಿ ಮಾಡಿದ್ದರು. ಆದರೆ ಈ ಸಾಲವನ್ನು ತೀರಿಸಲು ಸರ್ಕಾರ ಯಾವುದೇ ಸಹಾಯ ಮಾಡಲಿಲ್ಲ. ಹೀಗಾಗಿ ಬೇವಿನ ಮರಗಳನ್ನು ಮಾರಿ ಸಾಲ ತೀರಿಸಿದ್ದರಂತೆ.

 ಕುಂದುಕೊರತೆ ಆಲಿಸಿದ ಸಚಿವ ಪುಟ್ಟರಾಜು

ಕುಂದುಕೊರತೆ ಆಲಿಸಿದ ಸಚಿವ ಪುಟ್ಟರಾಜು

ಇನ್ನು ಸಿಎಂ ತಮ್ಮ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರೆ ಎಂದಾಗ ಮಾಯಿಗೌಡರಲ್ಲಿಯೂ ಆಸೆ ಆಕಾಂಕ್ಷೆಗಳು ಹುಟ್ಟಿದ್ದವು. ಮುಂದಿನ ದಿನಗಳಲ್ಲಿ ತಮ್ಮ ಬದುಕಿಗೆ ಆಸರೆ ಸಿಗುತ್ತದೆ ಎಂದು ನಂಬಿದ್ದರು. ಆದರೆ ಸಿಕ್ಕಿದೇನೆಂದರೆ 10 ಊಟದ ತಟ್ಟೆಗಳು, 10 ಲೋಟಗಳು. ಈಗ ಆ ಲೋಟ, ತಟ್ಟೆಗಳನ್ನು ತಮ್ಮ ಮಕ್ಕಳಿಗೆ ಮಾಯಿಗೌಡರು ಹಂಚಿಕೊಟ್ಟಿದ್ದಾರಂತೆ.

ಸಿಎಂ ಗ್ರಾಮ ವಾಸ್ತವ್ಯ ಹೂಡಿದ್ದರು ಎಂದ ಮೇಲೆ ಅಲ್ಲಿ ಎಲ್ಲವೂ ಅಭಿವೃದ್ಧಿಯಾಗಿರುತ್ತದೆ ಎಂಬ ಕಲ್ಪನೆ ಸಾಮಾನ್ಯ ಜನರಲ್ಲಿ ಬಂದಿರುತ್ತದೆ. ಆದರೆ ಅಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಯಾವಾಗ ನವಿಲುಮಾರನಹಳ್ಳಿಯ ಚಿತ್ರಣಗಳು ಮಾಧ್ಯಮಗಳಲ್ಲಿ ಬಿಂಬಿತವಾಗಲು ತೊಡಗಿದವೋ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಿದ್ದಾರೆ.

ಅಷ್ಟೇ ಅಲ್ಲ, ಗ್ರಾಮವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗಿಲ್ಲ ಏಕೆ ಎಂಬುದರ ಬಗ್ಗೆಯೂ ಒಂದಷ್ಟು ಸ್ಪಷ್ಟನೆ ನೀಡಿದ್ದಾರೆ. ಅದೇನೆಂದರೆ, ಅಂದು ಕೆಲವೇ ಸಮಯದಲ್ಲಿ ಸರ್ಕಾರ ಬಿದ್ದು ಹೋದ ಕಾರಣ ಗ್ರಾಮದ ಅಭಿವೃದ್ಧಿ ಮತ್ತು ಮಾಯಿಗೌಡ ಕುಟುಂಬಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಈಗ ರಾಜ್ಯದ ಜನರ ಆಶೀರ್ವಾದದಿಂದ ಮತ್ತೊಮ್ಮೆ ಕುಮಾರಣ್ಣ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗಾಗಿ ಕುಮಾರಣ್ಣ ಅವರು ಮಾಯಿಗೌಡರ ಕುಟುಂಬಕ್ಕೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಜಿಲ್ಲಾ ಉಸ್ತುವಾರಿ ಸಚಿವನಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

'ಮುಖ್ಯಮಂತ್ರಿಗಳೇ ಮೊದಲು ಗ್ರಾಮ ವಾಸ್ತವ್ಯದ ನಾಟಕ ನಿಲ್ಲಿಸಿ'

 ಗ್ರಾಮದ ಸಮಗ್ರ ಅಭಿವೃದ್ಧಿಯ ಭರವಸೆ

ಗ್ರಾಮದ ಸಮಗ್ರ ಅಭಿವೃದ್ಧಿಯ ಭರವಸೆ

ನವಿಲುಮಾರನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಎಷ್ಟು ಬೇಕಾದರೂ ಅನುದಾನ ನೀಡುತ್ತೇನೆ. ಗ್ರಾಮದಲ್ಲಿ 2007ರಲ್ಲಿ ಕುಮಾರಣ್ಣ ಅವರು ಗ್ರಾಮ ವಾಸ್ತವ್ಯ ಮಾಡುವುದಕ್ಕಿಂತ ಮೊದಲು ಗ್ರಾಮವು ಒಂದು ಕೊಂಪೆಯಂತೆ ಇತ್ತು. ಕೋಟೆಯಾಕಾರದಲ್ಲಿ ಗಿಡಗಂಟಿಗಳು ಬೆಳೆದುಕೊಂಡು ಗ್ರಾಮವೇ ಕಾಣುತ್ತಿರಲಿಲ್ಲ. ಗ್ರಾಮದೊಳಗೆ ಅಲ್ಲಲ್ಲಿ ಹೊಂಡಗಳು ಇದ್ದವು. ಗ್ರಾಮಕ್ಕೆ ಬರಲು ಬಂಡಿ ರಸ್ತೆ ಇತ್ತು. ಕುಮಾರಣ್ಣ ವಾಸ್ತವ್ಯದ ವೇಳೆ ನೀಡಿದ ಆದೇಶದ ಮೇರೆಗೆ ಗ್ರಾಮದಲ್ಲಿದ್ದ ಎಲ್ಲ ಹೊಂಡಗಳನ್ನು ಮುಚ್ಚಿಸಿ ಸಮತಟ್ಟು ಮಾಡಿಸಲಾಯಿತು. ರಸ್ತೆಯನ್ನು ನಿರ್ಮಿಸಿಕೊಡಲಾಯಿತು. ಕುಮಾರಣ್ಣ ಬಂದು ಹೋದ ಎರಡೇ ದಿನಕ್ಕೆ ಗ್ರಾಮಕ್ಕೆ ಹಾಲಿನ ಡೈರಿಯನ್ನು ಮಂಜೂರು ಮಾಡಿಸಲಾಯಿತು. ಗ್ರಾಮದ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಯಿತು. ಜೊತೆಗೆ ಗ್ರಾಮದಲ್ಲಿ ಚರಂಡಿಗಳನ್ನು ನಿರ್ಮಿಸಿಕೊಡಲಾಯಿತು. ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಅನುಕೂಲ ಮಾಡಿಕೊಡಲಾಯಿತು ಎಂಬುದಾಗಿ ತಮ್ಮ ಸಾಧನೆಯನ್ನು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ನೀಡಿ ತೆರಳಿದ್ದಾರೆ.

ಇನ್ನಾದರೂ ನವಿಲುಮಾರನಹಳ್ಳಿ ಜನರ ನಸೀಬು ಬದಲಾಗುತ್ತಾ? ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Navilu maranahali in mandya is known for its lack of facilities. This is the time to talk about this village. cm kumaraswamy stayed in this village about 12 years ago is the greatness of village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more