ದೇವೇಗೌಡರ ಕೈಚಳಕ! ಮಹಿಳೆಗೆ ದಕ್ಕದ ನಾಗಮಂಗಲ ಪುರಸಭೆ ಅಧ್ಯಕ್ಷಗಾದಿ!
ಮಂಡ್ಯ, ಸೆಪ್ಟೆಂಬರ್ 08: ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿತ್ತಾದರೂ ಅದು ನಾಗಮಂಗಲ ಪುರಸಭೆಯಲ್ಲಿ ಜಾರಿಗೆ ಬಾರದೆ ತಿದ್ದುಪಡಿಯಾದ ಕಾರಣ ಮಹಿಳೆಯೊಬ್ಬರು ಅಧ್ಯಕ್ಷರಾಗುವ ಅವಕಾಶ ಕೊನೆಗಳಿಗೆಯಲ್ಲಿ ತಪ್ಪಿಹೋಗಿದೆ.
ಆಗಸ್ಟ್ 31 ರಂದು ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಸೆಪ್ಟೆಂಬರ್ 3 ರಂದು ಹೊರಬಿದ್ದಿದ್ದು, ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಪಡೆದಿದ್ದರೆ, ಬಿಜೆಪಿ 2 ಮತ್ತು ಜೆಡಿಎಸ್ 3 ನೇ ಸ್ಥಾನ ಕಾಯ್ದುಕೊಂದಿವೆ.
ಮಾಜಿ ಪ್ರಧಾನಿ ದೇವೇಗೌಡರ ಮಧ್ಯಪ್ರವೇಶ ಮತ್ತು ಸರ್ಕಾರದ ಮೇಲಿನ ಒತ್ತಡ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ಹಾಗೆನೋಡಿದರೆ ಮಂಡ್ಯ ಜೆಡಿಎಸ್ ನ ಭದ್ರಕೋಟೆ ಎಂಬುದು ಈಗಾಗಲೇ ಸಾಬೀತಾಗಿದೆ. ಅದರಂತೆ ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್ ನ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರಲ್ಲದೆ ಅಧಿಕಾರವನ್ನು ಅವರೇ ಹಿಡಿಯುವುದು ಸ್ಪಷ್ಟವಾಗಿತ್ತು.

ಬದಲಾದ ಲೆಕ್ಕಾಚಾರ
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗಾದಿಯ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದ್ದು, ಆ ಪ್ರಕಾರ ಅಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇದು ಒಂದಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಆದರೂ ಪೈಪೋಟಿ ಸದ್ದಿಲ್ಲದೆ ನಡೆದಿತ್ತು. ಮೀಸಲಾತಿ ಸಾಮಾನ್ಯ ಮಹಿಳೆಯಾದ ಕಾರಣ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಎಂ.ಸಿ.ಚನ್ನಪ್ಪ ಅವರಿಗೆ ನಿರಾಸೆಯಾಗಿತ್ತು. ಇಷ್ಟಕ್ಕೂ ಚನ್ನಪ್ಪ ಇಲ್ಲಿನ ಪ್ರಭಾವಿ ನಾಯಕನಾಗಿದ್ದು ಶಾಸಕ ಸುರೇಶ್ ಗೌಡರ ಬೆಂಬಲಿಗನೂ ಹೌದು. ಹೀಗಾಗಿ ಅವರ ಮೇಲೆ ಅನುಕಂಪವೂ ಇತ್ತು.

ಸದಸ್ಯರಿಂದ ದೇವೇಗೌಡರ ಭೇಟಿ
ಹೇಗಾದರೂ ಮಾಡಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಳ್ಳಲೇ ಬೇಕೆಂಬ ಹಠಕ್ಕೆ ಬಿದ್ದ ಚನ್ನಪ್ಪ ತನ್ನ ಬೆಂಬಲಿಗರು, ಪಕ್ಷದಿಂದ ಗೆದ್ದು ಬಂದ ಇತರೆ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಸುಮಾರು 12 ಜೆಡಿಎಸ್ ಸದಸ್ಯರೊಂದಿಗೆ ದೇವೇಗೌಡರನ್ನು ಭೇಟಿ ಮಾಡಿ ಹೇಗಾದರೂ ಮಾಡಿ ಈಗ ಹೊರಡಿಸಿರುವ ಮೀಸಲಾತಿಯನ್ನು ಹಿಂಪಡೆದು ಸಾಮಾನ್ಯ ವರ್ಗಕ್ಕೆ ತಿದ್ದುಪಡಿ ಮಾಡುವಂತೆ ಅವಲತ್ತುಕೊಂಡಿದ್ದಾರೆ.

ಒತ್ತಡಕ್ಕೆ ಮಣಿದರು ದೇವೇಗೌಡರು!
ಪುರಸಭೆಯ ಜೆಡಿಎಸ್ ನ 12 ಸದಸ್ಯರ ಒತ್ತಡಕ್ಕೆ ಮಣಿದ ದೇವೇಗೌಡರು ರಾಜ್ಯ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಹಿಂದೆ ಹೊರಡಿಸಿದ್ದ ಸಾಮಾನ್ಯ ಮಹಿಳೆಯ ಮೀಸಲನ್ನು ಹಿಂಪಡೆದಿದ್ದಾರೆ. ಇದೀಗ ನಿರಾಳರಾಗಿರುವ ಚನ್ನಪ್ಪ ನಾಗಮಂಗಲ ಪುರಸಭೆಯ ಅಧ್ಯಕ್ಷಗಾದಿಗೇರುವುದು ಬಹುತೇಕ ಖಚಿತವಾಗಿದೆ. ಆ ಮೂಲಕ ಸುರೇಶ್ ಗೌಡರ ಕೈ ಮೇಲಾಗಿದ್ದು ಚನ್ನಪ್ಪರವರ ಅಧ್ಯಕ್ಷ ಸ್ಥಾನದ ಕನಸು ಕೂಡ ನನಸಾಗುವ ದಿನ ಹತ್ತಿರ ಬಂದಂತಾಗಿದೆ.

ಮಹಿಳೆಗೆ ಸಿಗಬೇಕಾಗಿದ್ದ ಸ್ಥಾನವನ್ನು ಕಬಳಿಸಿದ್ದು ಸರಿಯೇ?
ಸದ್ಯ ಚನ್ನಪ್ಪ ಅವರಿಗೆ 8ನೇ ವಾರ್ಡಿನಿಂದ ಗೆದ್ದಿರುವ ಹಾಲಿ ಪುರಸಭಾ ಅಧ್ಯಕ್ಷ ವಿಜಯ ಕುಮಾರ್, 17ನೇ ವಾರ್ಡಿನ ಯೋಗೇಶ್, 18 ನೇ ವಾರ್ಡಿನ ಮಂಜುನಾಥ್ ಹಾಗೂ 21 ನೇ ವಾರ್ಡಿನ ದಿವಾಕರ್ ಸಾಮಾನ್ಯ ಕ್ಷೇತ್ರದಿಂದಲೇ ಪುರಸಭೆ ಪ್ರವೇಶಿಸಿದರೂ ಬೆಂಬಲವಾಗಿಯೇ ನಿಂತಿದ್ದಾರೆ. ಹೀಗಾಗಿ ಚನ್ನಪ್ಪ ನಿರಾಳರಾಗಿದ್ದಾರೆ. ಆದರೆ ಮಹಿಳೆಯೊಬ್ಬರಿಗೆ ಸಿಗಬೇಕಾಗಿದ್ದ ಅವಕಾಶವನ್ನು ಒತ್ತಡ ಹೇರಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿರುವುದು ಎಷ್ಟು ಸರಿ ಎಂಬುದು ಹಲವರ ಪ್ರಶ್ನೆಯಾಗಿದೆ?












Click it and Unblock the Notifications