Rain: ಮಳೆಗಾಗಿ ಮಕ್ಕಳ ವಿಶೇಷ ಪ್ರಾರ್ಥನೆ; ಮಳೆ ಬರೋದು ಯಾವಾಗ?
ಬಿರು ಬೇಸಿಗೆಗೆ ಇಡೀ ಕರುನಾಡು ಕಂಗಾಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ಸದ್ಯ ಮಳೆ ಬಂದ್ರೆ ಸಾಕಪ್ಪ ಎನ್ನುವ ಪರಿಸ್ಥಿತಿ ಇದೆ. ಆದಷ್ಟು ಬೇಗ ಮಳೆ ಬರಲಿ ಎಂದು ಮಂಡ್ಯ ಜನತೆ ಮಳೆರಾಯನ ಮೊರೆ ಹೋಗಿದ್ದಾರೆ.
ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ.. ಎಂದು ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಮಳೆರಾಯನ ಮೂರ್ತಿ ಸ್ಥಾಪಿಸಿಕೊಂಡು ಮನೆಮನೆಗೆ ತೆರಳಿ ತಣ್ಣೀರನ್ನು ತಲೆಮೇಲೆ ಸುರಿಸಿಕೊಂಡು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಗ್ರಾಮದ ಬೀದಿಗಳಲ್ಲಿ ಮಳೆರಾಯನ ಮೂರ್ತಿಯನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಲಾಗುತ್ತದೆ. ತಮಟೆ ಸದ್ದಿಗೆ ಮಕ್ಕಳು ಸಹ ನೃತ್ಯ ಮಾಡಿ ಮನೆಮನೆಯ ಬಳಿ ತಣ್ಣೀರನ್ನು ಸುರಿಸಿಕೊಂಡು ಮುಂದೆ ಸಾಗಲಾಗುತ್ತದೆ.
ದಾರಿ ಉದ್ದಕ್ಕೂ ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಎಂದು ಕೂಗುತ್ತಾ ಹೆಜ್ಜೆ ಹಾಕಿ ಮಳೆಗಾಗಿ ಪ್ರಾರ್ಥಿಸಲಾಗುತ್ತದೆ.
ಮಳೆರಾಯನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿಕೊಂಡು ಅದನ್ನು ಗ್ರಾಮದ ಸುತ್ತ ಹೊತ್ತು ಮೆರೆಸಲಾಗುತ್ತದೆ. ಜೊತೆಗೆ ಮಕ್ಕಳು ಸಹ ಭಾಗವಹಿಸಿ ಬೇವಿನ ಸೊಪ್ಪನ್ನು ನಡುವಿಗೆ ಕಟ್ಟಿಕೊಂಡು ತಮಟೆ ಸದ್ದಿಗೆ ನೃತ್ಯ ಮಾಡುತ್ತಾ ಮಳೆರಾಯನ ಕೂಗಿ ಕರೆದರು.
ಗ್ರಾಮಸ್ಥರಿಂದ ಪೂಜೆ
ಮನೆಮನೆಯಲ್ಲಿ ಅಕ್ಕಿ, ಬೆಲ್ಲ ಸೇರಿದಂತೆ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಒಟ್ಟಾರೆ ಸೇರಿಸಿಕೊಂಡು ಅಡುಗೆ ತಯಾರಿಸಿ ಪ್ರಸಾದ ರೂಪದಲ್ಲಿ ಜನರಿಗೆ ನೀಡಲಾಗುತ್ತದೆ. ಕಳೆದ 12 ವರ್ಷದ ಹಿಂದೆ ಈ ಮಳೆರಾಯನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿ ಮೆರವಣಿಗೆ ಮಾಡಿ ಪೂಜೆ ಮಾಡುವ ಮೂಲಕ ಮಳೆ ಬೇಗ ಬರಬೇಕು ಎಂದು ಪ್ರಾರ್ಥನೆ ಮಾಡಿದ್ದೆವು, ಅದೇ ರೀತಿ ಪ್ರಸ್ತುತದಲ್ಲಿ ಬರಗಾಲ ಆವರಿಸಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಮಳೆಗಾಗಿ ಇಡೀ ಗ್ರಾಮಸ್ಥರೇ ಪೂಜೆ ಮಾಡುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.
ರಾಜ್ಯದಲ್ಲಿ ಮಳೆ ಯಾವಾಗ?
ಹವಾಮಾನ ಇಲಾಖೆ ವರದಿಗಳ ಪ್ರಕಾರ, ರಾಜ್ಯದಲ್ಲಿ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳ ಮೊದಲ ಎರಡು ವಾರದಲ್ಲಿ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್ ಮೊದಲ ವಾರದ ವೇಳೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಲಾಗಿದೆ. ಆದರೆ ಅದಕ್ಕೆ ಮೊದಲೆ ಮಳೆಯಾಗಲಿ ಎಂದು ಜನ ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications