CP Yogeshwara: ಚನ್ನಪಟ್ಟಣ ಮೈತ್ರಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಸೇರ್ತಾರಾ ಸಿಪಿ ಯೋಗೇಶ್ವರ್?
ಬೆಂಗಳೂರು, ಸೆಪ್ಟಂಬರ್ 29: ರಾಜ್ಯ ರಾಜಕಾರಣದಲ್ಲಿ ಮಂಡ್ಯ ಜಿಲ್ಲೆಯ ಚನ್ನಪಟ್ಟಣ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆ ಬಗೆಗಿನ ಚರ್ಚೆಗಳು ತೀವ್ರ ಕುತೂಹಲ ಸೃಷ್ಟಿಸುತ್ತಿವೆ. ಉಪ ಚುನಾವಣೆಗೆ ದಿನಾಂಕ ಘೋಷಣೆಗೆ ದಿನಗಣೆ ಆರಂಭವಾಗಿದೆ. ಇತ್ತ ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿ ಜೆಡಿಎಸ್ ಮೈತ್ರಿಕೂಟವಾಗಲಿ ತನ್ನ ಅಭ್ಯರ್ಥಿಗಳನ್ನು ಫೈನಲ್ ಮಾಡಿಲ್ಲ. ಈ ಮಧ್ಯೆ ಕೇಂದ್ರ ಬಿಜೆಪಿ ಹೈಕಮಾಂಡ್‌ಗೆ ಮಾಜಿ ಎಂಎಲ್‌ಸಿ ಸಿಪಿ ಯೋಗೇಶ್ವರ ಎಚ್ಚರಿಕೆ ಕೊಟ್ಟಂತೆ ಮಾತನಾಡಿದ್ದಾರೆ.
ಹೌದು, ಸಿಪಿ ಯೋಗೇಶ್ವರ ಅವರು ಚನ್ನಪಟ್ಟಣ ಉಪ ಚುನಾವಣೆಯ ಮೈತ್ರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರನ್ನೆ ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಅವರ ವಿರುದ್ಧ ಜೆಡಿಎಸ್ ಮೂಗು ಮುರಿಯುತ್ತಲೇ ಬಂದಿದೆ. ಒಂದು ವೇಳೆ ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಟಿಕೆಟ್ ಸಿಗದಿದ್ದರೆ ಸಿಪಿ ಯೋಗೇಶ್ವರ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿವೆ. ಇದಕ್ಕೆ ಸ್ವತಃ ಅವರೇ ಏನು ಬೇಕಾದರೆ ನಡೆಯಬಹುದು ಎಂದು ಹೇಳಿದ್ದಾರೆ.

ಬಿಜೆಪಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ರಾ ಸಿಪಿವೈ?
ಭಾನುವಾರ ಮಂಡ್ಯದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಮೈತ್ರಿ ಟಿಕೆಟ್ ಕೈತಪ್ಪಿದರೆ ತಾವು ಕಾಂಗ್ರೆಸ್ ಸೇರುತ್ತೀರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ರಾಜಕಾರಣದಲ್ಲಿ ಏನು ಬೇಕಾದರೆ ನಡೆಯಬಹುದು ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು
ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕು ಎಂಬ ಒತ್ತಡ ಹೆಚ್ಚಿದೆ. ಈ ಬಗ್ಗೆ ಮುಂದೆ ಹೇಳುವೆ. ನೀವು ಯಾರು ಆಲೋಚಿಸದಂತಹ ಘಟನೆಗಳು ರಾಜಕೀಯದಲ್ಲಿ ನಡೆಯಲೂ ಬಹುದು. ಸದ್ಯಕ್ಕೆ ನನಗೆ ಪಕ್ಷಾಂತರದ ಆಲೋಚನೆಗಳು ಬಂದಿಲ್ಲ. ಕಾಂಗ್ರೆಸ್‌ನವರು ಯಾರು ತಮ್ಮನ್ನು ಈ ಬಗ್ಗೆ ಭೇಟಿ ಮಾಡಿಲ್ಲ ಎಂದು ತಿಳಿಸಿದರು.
ಚನ್ನಪಟ್ಟಣ ವಿಧಾನಸಭೆಗೆ ಅಕ್ಟೋಬರ್ 10 ರಂದು ಉಪಚುನಾವಣೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಪಕ್ಷ, ಬಿಜೆಪಿ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಮುಂದೆ ಏನಾಗುತ್ತದೇ ಕಾದು ನೋಡೋಣ ಎಂದು ಪರೋಕ್ಷವಾಗಿ ಮೈತ್ರಿ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರಕ್ಕೆ ಡಿಕೆ ಸುರೇಶ್ ಭೇಟಿ: ಏನಂದ್ರು ಸಿಪಿವೈ
ಕಾಂಗ್ರೆಸ್‌ನಿಂದ ಮಾಜಿ ಸಂಸದ ಡಿಕೆ ಸುರೇಶ್ ಅವರು ಹೆಸರು ಕೇಳಿ ಬರುತ್ತಿದೆ. ಮೊದಲಿನಿಂದಲೂ ತಾವು ಚನ್ನಪಟ್ಟಣ ಸ್ಪರ್ಧೆಯ ಆಕಾಂಕ್ಷಿ ಅಲ್ಲ ಎಂದು ಅವರೇ ಹೇಳಿದ್ದಾರೆ. ಆದರೆ ಇತ್ತೀಚೆಗೆ ಉಪ ಚುನಾವಣೆ ಸಮಯ ಹತ್ತಿರ ಬರುತ್ತಿದ್ದಂತೆ ಚನ್ನಪಟ್ಟಣ ಅಭಿವೃದ್ಧಿ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಪದೇ ಪದೇ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಿಪಿ ಯೋಗೇಶ್ವರ್ ಅವರು, ಚುನಾವಣೆ ಸಮಯದಲ್ಲಿ ಆಗಾಗ ಭೇಟಿ ನೀಡುವುದು ಸಹಜ. ಅಭಿವೃದ್ಧಿ ಘೋಷಣೆ ಮಾಡುವುದು, ಸಾಮಾನ್ಯ ಬಜೆಟ್ ಹಾಗೂ ಉಪ ಚುನಾವಣೆ ಘೋಷಣೆಗೆ ತುಂಬಾ ವ್ಯತ್ಯಾಸ ಇದೆ ಎಂದು ಹೇಳಿದರು. ಇನ್ನೂ ಕಾನೂನು ಪ್ರಕ್ರಿಯೆ ಆರಂಭವಾಗಿದೆ, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ಕಾದು ನೋಡೋಣ ಎಂದು ಮುಡಾ ಹಗರಣ ತನಿಖೆ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಮೊದಲಿನಿಂದಲೂ ಸಿಪಿ ಯೋಗೇಶ್ವರ ವಿರುದ್ಧ ಜೆಡಿಎಸ್ ಮುನಿಸು ತೋರಿಸುತ್ತಲೇ ಬಂದಿದೆ. ಇದೀಗ ಬಿಜೆಪಿ ಗೆಳೆತನ ಮಾಡಿದ ಮೇಲೆ ಚನ್ನಪಟ್ಟಣ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿಕೆ ಸುರೇಶ್ ಹೇಸರು ಕೇಳಿ ಬರುತ್ತಿದ್ದಂತೆ ಸಿಪಿ ಯೋಗೇಶ್ವರ ಬೆಂಬಲಿಸುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿಗಳು ಹೊರ ಬೀಳಲಿವೆ.












Click it and Unblock the Notifications