ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರು ನಾಮಕರಣ; ಮಂಡ್ಯದಲ್ಲಿ ಬಿಜೆಪಿ ಸಂಭ್ರಮಾಚರಣೆ
ಮಂಡ್ಯ, ಅಕ್ಟೋಬರ್ 09: ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರನ್ನು ನಾಮಕರಣ ಮಾಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ರೈಲಿಗೆ ಪುಪ್ಪಾರ್ಚನೆ ಮಾಡಿ ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. 12:10ಕ್ಕೆ ಮೈಸೂರಿನಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಒಡೆಯರ್ ಎಕ್ಸ್‌ಪ್ರೆಸ್ ರೈಲಿಗೆ ಪುಷ್ಪಾರ್ಚನೆ ಮಾಡಿ, ಬಲೂನ್, ತಳಿರು-ತೋರಣ ಕಟ್ಟಿ ಸಂಭ್ರಮಿಸಿದರು. ನಂತರ ಮಾತನಾಡಿದ ಉಮೇಶ್ ಅವರು, "ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಜಾಫರ್ ಅವರು ಚೆನ್ನೈ- ಮೈಸೂರಿಗೆ ಸಂಚರಿಸುವ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿದ್ದರು. ಈ ಸಂದರ್ಭದಲ್ಲಿ ಬಹಳಷ್ಟು ಜನ ಇದನ್ನು ವಿರೋಧಿಸಿದ್ದರು. ಆದರೂ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಮತಾಂಧ ಟಿಪ್ಪು ಸುಲ್ತಾನ್ ಹೆಸರಿಡಲಾಯಿತು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಡೆಯರ್ ಎಕ್ಸ್‌ಪ್ರೆಸ್ ರೈಲಿಗೆ ಪುಷ್ಪಾರ್ಚನೆ
"ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಭಾರತಕ್ಕಾಗಿ ಬೆವರು ಸುರಿಸಿಲ್ಲ. ಟಿಪ್ಪು ಕಾಲವೆಂದರೆ ಅದು ಹಿಂದೂ ಮತ್ತು ಕ್ರೈಸ್ತರ ದೌರ್ಭಾಗ್ಯದ ಕಾಲವಾಗಿತ್ತು. ಮೈಸೂರು ಒಡೆಯರನ್ನು ಕಪಟ ಮಾರ್ಗದ ಮೂಲಕ ಅಧಿಕಾರದಿಂದ ಕೆಳಗೆ ಇಳಿಸಿದ್ದು, ಆಗ ಹಿಂದೂಗಳು ಮೂರನೇ ದರ್ಜೆಯ ಪ್ರಜೆಗಳಾಗಿದ್ದರು. ನೆತ್ತರ ಕೆರೆಯಲ್ಲಿ ಸಾವಿರಾರು ಹಿಂದೂಗಳು ಹಾಗೂ ಕ್ರೈಸ್ತರ ಹತ್ಯೆ ನಡೆಯಿತು. ಇಂತಹ ಮತಾಂಧ ವ್ಯಕ್ತಿಯ ಹೆಸರಿನಲ್ಲಿ ರೈಲುಗಾಡಿ ಸಂಚರಿಸುತ್ತಿದ್ದುದು ಸರಿಯಲ್ಲ.

"ಈ ಬಗ್ಗೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪಸಿಂಹ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ಪತ್ರ ಬರೆದು ಟಿಪ್ಪು ಹೆಸರನ್ನು ತೆಗೆದು ಒಡೆಯರ್ ಹೆಸರು ಇಡುವಂತೆ ಒತ್ತಾಯಿಸಿದ್ದರು. ಅವರ ಹೋರಾಟದ ಲವಾಗಿ ಕೇಂದ್ರ ರೈಲ್ವೆ ಸಚಿವಾಲಯ ಟಿಪ್ಪು ಹೆಸರನ್ನು ಬದಲಿಸಿ ಒಡೆಯರ್ ಹೆಸರನ್ನು ಇಟ್ಟಿರುವುದು ಸ್ವಾಗತಾರ್ಹ" ಎಂದು ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷರು ಹೇಳಿದರು.
"ಪ್ರತಾಪ ಸಿಂಹ ಅವರು ದೇಶ ಕಟ್ಟುವ, ಸಂಸ್ಕೃತಿ ನೆಲೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ಜೊತೆಯಾಗಿ ನಾವು ನಿಲ್ಲುತ್ತೇವೆ. ಅಲ್ಲದೆ ಮೈಸೂರು-ಶಿವಮೊಗ್ಗ-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ ಕುವೆಂಪು ಹೆಸರು ಇಡುವುದರ ಮೂಲಕ ಈ ಭಾಗದ ಒಕ್ಕಲಿಗ ಸಮುದಾಯದ ಜನರಿಗೂ ಗೌರವ ತಂದುಕೊಡುವ ಕೆಲಸವನ್ನು ರೈಲ್ವೆ ಇಲಾಖೆ ಮಾಡಿದೆ" ಎಂದು ಸಿ.ಪಿ. ಉಮೇಶ್ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ವಿವೇಕ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಂ, ಎಚ್.ಆರ್. ಅರವಿಂದ್, ಡಾ. ಸದಾನಂದ, ಸಿ.ಟಿ. ಮಂಜುನಾಥ್, ವಸಂತ, ಹರ್ಷ, ವಿನೋದ್, ಹೊಸಹಳ್ಳಿ ಶಿವು, ಮಹಂತಪ್ಪ, ನವೀನ್, ಶಿವಕುಮಾರ್ ಸೇರಿದಂತೆ ಹಲವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications