ಪರಿಷತ್ತಿನ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಮೋದಿಗೆ ಉಡುಗೊರೆ: ಮಹೇಶ್
ಮಂಡ್ಯ, ಜೂ.11: ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ನಾಲ್ಕೂ ಸ್ಥಾನಗಳನ್ನು ಬಿಜೆಪಿ ಗೆದ್ದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಗಳಿಸಿದೆ. ಇದುವರೆವಿಗೂ ರಾಜ್ಯಸಭೆಯಲ್ಲಿ ಸ್ವಂತ ಶಕ್ತಿ ಮೇಲೆ ನಿಲ್ಲಲು ಸಾಧ್ಯವಾಗಿರಲಿಲ್ಲ. ರಾಜ್ಯಸಭೆಯಲ್ಲಿ ಕಾಯಿದೆಗಳು ಅನುಮೋದನೆಯಾಗಲು ಎನ್‌ಡಿಎ ಸಮರ್ಥವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಚನಾವಣೆ: ಅರುಣ್ ಶಹಪುರ, ಹನುಮಂತ ನಿರಾಣಿ ಪರ ಸಿಎಂ ಪ್ರಚಾರ
ರಾಜ್ಯದಲ್ಲೂ ಸಹ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದ ವಿಧಾನ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮೇಲ್ಮನೆಯಲ್ಲಿ ಅನುಮೋದನೆ ಪಡೆಯ ಬೇಕಿತ್ತು. ಬಹುಮತವಿಲ್ಲದ ಕಾರಣ ನಿರ್ಣಯಗಳು ವಾಪಸ್ಸಾಗುತ್ತಿದ್ದವು. ಆದರೆ ಈಗ ನಾವು ರಾಜ್ಯಸಭೆ ಮತ್ತು ವಿಧಾನ ಪರಿಷತ್ತು ಎರಡೂ ಸದನಗಳಲ್ಲೂ ಬಹುಮತ ಹೊಂದಿದ್ದೇವೆ. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳುವ ಪ್ರಮುಖ ನಿರ್ಣಯಗಳು ಅನುಮೋದನೆಗೊಂಡು ಜಾರಿಯಾಗಲಿವೆ ಎಂದು ತಿಳಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ 1.41 ಲಕ್ಷ ಪದವೀಧರ ಮತದಾರರಿದ್ದಾರೆ. ಕೃಷ್ಣಮೂರ್ತಿ ಅಭ್ಯರ್ಥಿಯಾಗಿದ್ದ ವೇಳೆ ಕೇವಲ 35 ಮತಗಳಿದ್ದವು. ಗೋ.ಮಧುಸೂದನ್ ಅಭ್ಯರ್ಥಿಯಾಗಿದ್ದ ವೇಳೆ 55 ಸಾವಿರ ಮತಗಳಿತ್ತು. ಈಗ 1.41 ಲಕ್ಷ ಮತದಾರರು ನೋಂದಣಿಯಾಗಿದ್ದಾರೆ. ಇದರಲ್ಲಿ 68 ಸಾವಿರ ಮಂದಿಯನ್ನು ಬಿಜೆಪಿ ನೋಂದಣಿ ಮಾಡಿದೆ. ನಾಲ್ಕೂ ಜಿಲ್ಲೆಗಳಲ್ಲೂ ಮತದಾರರನ್ನು ಸಂಪರ್ಕಿಸಲು 6500 ಘಟಕ ನಾಯಕರನ್ನು ನೇಮಕ ಮಾಡಲಾಗಿದೆ. ಇವರು ಪ್ರತೀ ಮತದಾರರನ್ನು ಎರಡೆರೆಡು ಬಾರಿ ಭೇಟಿ ಮಾಡಿ ಮತಯಾಚಿಸಿದ್ದಾರೆ. ನಮ್ಮ ಅಭ್ಯರ್ಥಿ ಮೈ.ವಿ.ರವಿಶಂಕರ್ ಸಹ 87 ಸಾವಿರ ಮತದಾರರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದರು.

ಚುನಾವಣಾ ಅಕ್ರಮ ತಡೆಗೆ ಒತ್ತಾಯ
ಪ್ರಸ್ತುತ ದಿನಮಾನಗಳಲ್ಲಿ ಬಿಜೆಪಿಗೆ ಜನಬೆಂಬಲ ಹೆಚ್ಚುತ್ತಿರುವುದನ್ನು ಸಹಿಸದ ವಿರೋಧಿಗಳು ಚುನಾವಣಾ ಅಕ್ರಮಕ್ಕೆ ಮುಂದಾಗಿವೆ. ಮತದಾರರಿಗೆ ಹಣ ಹಂಚುವುದು ಸೇರಿದಂತೆ ಬೇರೆ ಬೇರೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ಚುನಾವಣಾ ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಬಿಜೆಪಿ ವರ್ಚಸ್ಸನ್ನು ಗಮನಿಸಿರುವ ಬೇರೆ ಬೇರೆ ಪಕ್ಷಗಳ ಮುಖಂಡರು ಕಾಯಕರ್ತರು ಬಿಜೆಪಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿ ರಾಜಕೀಯ ಧೃವೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದರು.












Click it and Unblock the Notifications