ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಲ ಹೆಚ್ಚಾಗಿದೆ; ಸಿ. ಟಿ. ರವಿ

ಮಂಡ್ಯ, ಜೂನ್ 02; "ರಾಜ್ಯಸಭೆ ಚುನಾವಣೆ ನಂತರ ಎ ಮತ್ತು ಬಿ ಟೀಮ್ ಹಣೆಬರಹ ಬಯಲಿಗೆ ಬರುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದರು.

ಗುರುವಾರ ಮದ್ದೂರು ತಾಲೂಕಿನ ಸೋಮನಹಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ. ವಿ. ರವಿಶಂಕರ್ ಪರ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

"ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷದ ಬೆಂಬಲ ಕೋರಿರುವುದು ಎರಡೂ ಪಕ್ಷಗಳ ನಾಯಕರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಸಂಖ್ಯಾಬಲದ ಕೊರತೆಯಿಂದ ಚುನಾವಣೆಯಲ್ಲಿ ಜೆಡಿಎಸ್ ಮತ ಕೇಳುವುದಕ್ಕೆ ಸರ್ವ ಸ್ವತಂತ್ರವಾಗಿದೆ. ಬೆಂಬಲ ನೀಡುವುದು ಕಾಂಗ್ರೆಸ್ ನಾಯಕರಿಗೆ ಬಿಟ್ಟ ವಿಚಾರವಾಗಿದೆ" ಎಂದು ಸಿ. ಟಿ. ರವಿ ಹೇಳಿದರು.

"ಚುನಾವಣೆಯಲ್ಲಿ ಬಿಜೆಪಿಯ 32 ಹೆಚ್ಚುವರಿ ಮತಗಳಿವೆ. ಬೇರೆ ಪಕ್ಷಗಳ ನಾಯಕರುಗಳು ಸಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಪರ ಒಲವು ಹೊಂದಿದ್ದಾರೆ. ಇಂತಹ ನಾಯಕರ ಮತಗಳನ್ನು ಅನುಕೂಲಕರವಾಗಿ ಪರಿವರ್ತನೆ ಮಾಡಿಕೊಡಬೇಕು ಹಾಗೂ ಪಕ್ಷದ ಹೆಚ್ಚುವರಿ ಮತಗಳನ್ನು ಹಿಡಿದಿಟ್ಟುಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂಬ ಕಾರಣಕ್ಕೆ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚುನಾವಣೆಯಲ್ಲಿ ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಹೀನ ಸಂಸ್ಕೃತಿಗೆ ತಕ್ಕ ಪಾಠ

ಜೆಡಿಎಸ್ ಹೀನ ಸಂಸ್ಕೃತಿಗೆ ತಕ್ಕ ಪಾಠ

"ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಬಿಜೆಪಿ ಪರ ಬಹುದೊಡ್ಡ ಬಲ ಹಾಗೂ ಒಲವು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಜನನಾಯಕರುಗಳು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚು ಲಾಭವಾಗುವುದರಲ್ಲಿ ಸಂಶಯವಿಲ್ಲ. ಪದವೀಧರ ಕ್ಷೇತ್ರದ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುನ್ನುಡಿ ಬರೆಯಲಿದೆ" ಎಂದು ಸಿ. ಟಿ. ರವಿ ಹೇಳಿದರು.

ಸಚಿವ ನಾರಾಯಣ ಗೌಡ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ನಡುವಿನ ವಾಕ್ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ. ಟಿ. ರವಿ, "ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರು ನಡೆದುಕೊಂಡ ಹೀನ ಸಂಸ್ಕೃತಿಗೆ ಜಿಲ್ಲೆಯ ಜನರು ಚುನಾವಣಾ ಫಲಿತಾಂಶದ ಮೂಲಕ ತಕ್ಕ ಪಾಠ ಕಲಿಸಿದ್ದಾರೆ" ಎಂದು ಲೇವಡಿ ಮಾಡಿದರು.

"ಜೆಡಿಎಸ್ ನಾಯಕರ ಇಂತಹ ಸಂಘರ್ಷವನ್ನು ಹಿಂದೆಯೂ ನೋಡಿದ್ದೇವೆ. ಮುಂದೆಯೂ ನಡೆಯಲಿದೆ ಎಂಬ ಸಂಶಯವಿದೆ. ಇದನ್ನು ಎದುರಿಸಲು ನಾವು ಸಿದ್ಧರಿದ್ದೇವೆ" ಎಂದು ಸವಾಲು ಹಾಕಿದರು.

ವಿರೋಧ ಪಕ್ಷಗಳ ಷಡ್ಯಂತ್ರ

ವಿರೋಧ ಪಕ್ಷಗಳ ಷಡ್ಯಂತ್ರ

"ರಾಷ್ಟ್ರದಲ್ಲಿ ಬಿಜೆಪಿ ಆಡಳಿತ ನಡೆಸುವುದನ್ನು ಸಹಿಸದ ಕೆಲವರು ರಾಜಕೀಯ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ. ಆಡಳಿತ ಅಸಹಿಷ್ಟತೆಯಿಂದ ಬೇರೆ ಬೇರೆ ವಿಚಾರಗಳನ್ನೆತ್ತಿಕೊಂಡು ಇಲ್ಲದ ಗೂಂದಲ ಸೃಷ್ಠಿಸಲು ವಿಪಕ್ಷಗಳು ಮುಂದಾಗಿವೆ. ಮೊದಲು ನಾರಾಯಣಗುರು ಪಠ್ಯವನ್ನು ತೆಗೆಯಲಾಗಿದೆ ಎಂದರು, ಇಲ್ಲವೆಂದು ಗೊತ್ತಾದ ಮೇಲೆ ಭಗತ್‌ಸಿಂಗ್ ವಿಷಯವನ್ನು ಪಠ್ಯದಲ್ಲಿ ಸೇರಿಸಿಲ್ಲ ಎಂದು ಸುದ್ದಿ ಅಬ್ಬಿಸಿದರು, ನಂತರ ಕುವೆಂಪುರವರ ಪಠ್ಯವನ್ನು ತೆಗೆಯಲಾಗಿದೆ ಎಂದು ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಜೊತೆಗೆ ಆದಿಚುಂಚನಗಿರಿ ಪೀಠಾಧ್ಯಕ್ಷರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಇದನ್ನರಿತ ನಮ್ಮ ಶಿಕ್ಷಣ ಸಚಿವರು ಶ್ರೀಗಳನ್ನು ಭೇಟಿ ಮಾಡಿ ಬರಗೂರು ರಾಮಚಂದ್ರಪ್ಪವರು ಇದ್ದಾಗ 7 ಕುವೆಂಪು ಪಠ್ಯಗಳನ್ನು ಅಳವಡಿಸಲಾಗಿತ್ತು. ಈಗ 10 ವಿಷಯಗಳನ್ನು ಪಠ್ಯದಲ್ಲಿ ಜೋಡಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಶ್ರೀಗಳು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ" ಎಂದು ಸಿ. ಟಿ. ರವಿ ಹೇಳಿದರು.

ಬಸವಣ್ಣನವರ ಪಠ್ಯ ಕೈಬಿಡಲು ಎಂದಿಗೂ ಸಾಧ್ಯವಿಲ್ಲ

ಬಸವಣ್ಣನವರ ಪಠ್ಯ ಕೈಬಿಡಲು ಎಂದಿಗೂ ಸಾಧ್ಯವಿಲ್ಲ

"ಇದೀಗ ಬಸವಣ್ಣನವರ ವಿಚಾರ ಎತ್ತಿದ್ದಾರೆ. ದೇಶ ಕಂಡ ಅಪ್ರತಿಮ ಸಮಾಜ ಸುಧಾರಕ ಬಸವಣ್ಣ. ಅವರ ವಿಚಾರಧಾರೆಗಳು ರಾಜ್ಯ, ರಾಷ್ಟ್ರ ಹಾಗೂ ವಿಶ್ವಮಟ್ಟದಲ್ಲಿ ಪ್ರಸಿದ್ಧವಾಗಿದೆ. ಪಧಾನಿ ಮೋದಿಯವರು ಹತ್ತಾರು ಬಾರಿ ಬಸವಣ್ಣನವರ ವಿಚಾರಧಾರೆಗಳನ್ನು ಕೊಂಡಾಡಿದ್ದಾರೆ. ಹೀಗಿರುವಾಗ ಬಸವಣ್ಣನವರನ್ನು ಬಿಟ್ಟು ಪಠ್ಯ ಪರಿಷ್ಕರಣೆಯಾದರೂ ಹೇಗೆ ಸಾಧ್ಯ?" ಎಂದು ಸಿ. ಟಿ. ರವಿ ಪ್ರಶ್ನಿಸಿದರು.

ಮೊಸರಲ್ಲಿ ಕಲ್ಲು ಹುಡುಕುವ ಕೆಲಸ

ಮೊಸರಲ್ಲಿ ಕಲ್ಲು ಹುಡುಕುವ ಕೆಲಸ

"ಕುವೆಂಪು ಅವರ ಬಗ್ಗೆ ಯಾರೋ ಏನೋ ಬರೆದಿದ್ದನ್ನು ರೋಹಿತ್ ಚಕ್ರವತಿ ಶೇರ್ ಮಾಡಿದ್ದರು. ಈ ಬಗ್ಗೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲೇ ಪ್ರಕರಣ ದಾಖಲಿಸಿ, ತನಿಖೆಯನ್ನೂ ನಡೆಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಇಲ್ಲವೆಂಬ ಕಾರಣ ಅವರ ಮೇಲಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದ್ದಾರೆ.

ಹೀಗಿರುವಾಗ ಮತ್ತೆ ಅದೇ ವಿಚಾರವನ್ನು ಇಟ್ಟುಕೊಂಡು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಲಾಗುತ್ತಿದೆ.
ದೇಶದ ಜನರ ಅಭಿಮಾನದ ಸಂಕೇತದಂತೆ ಪಠ್ಯ ಪುಸ್ತಕ ರಚಿಸುತ್ತೇವೆ. ಒಂದು ವೇಳೆ ಪಠ್ಯ ಪರಿಷ್ಕರಣೆಯಲ್ಲಿ ಲೋಪವಾಗಿದ್ದರೆ ಸರಿಪಡಿಸುತ್ತೇವೆ. ಹಿಂದೆ ಆಗಿರುವ ತಪ್ಪುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ಗೊಂದಲ ಸೃಷ್ಠಿಸುವ ಸಲುವಾಗಿ ಇಂತಹ ಹಾದಿ ಹಿಡಿಯುತ್ತಿದ್ದಾರೆ. ಏನೇ ಆದರೂ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+