ಬಿಜೆಪಿಯಲ್ಲಿ ಗೆಲುವು ಅನುಮಾನ: ಕಾಂಗ್ರೆಸ್‌ಗೆ ಜಿಗಿಯಲು ಕೆ.ಸಿ.ನಾರಾಯಣಗೌಡ ಸಜ್ಜು..?
ಬಿಜೆಪಿ ಬಿಟ್ಟು ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿರುವ ಸಚಿವ ಕೆ.ಸಿ ನಾರಾಯಣ ಗೌಡ, ಕಾಂಗ್ರೆಸ್ ಪಾಳಯಕ್ಕೆ ಜಿಗಿಯುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದೆಲ್ಲೆಡೆ ದಟ್ಟವಾಗಿ ಕೇಳಿಬರುತ್ತಿವೆ.
ಮಂಡ್ಯ, ಫೆಬ್ರವರಿ 7: ಮುಂಬರುವ ಚುನಾವಣೆಯಲ್ಲಿ ಸಚಿವ ಹಾಗೂ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಲು ಕಾತುರರಾಗಿದ್ದಾರೆ. ಬಿಜೆಪಿ ಬಿಟ್ಟು ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದರೂ, ಕಾಂಗ್ರೆಸ್ ಪಾಳಯಕ್ಕೆ ಜಿಗಿಯುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದೆಲ್ಲೆಡೆ ದಟ್ಟವಾಗಿ ಕೇಳಿಬರುತ್ತಿವೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಯಾವುದೇ ಕಾರಣಕ್ಕೂ ಗೆಲ್ಲಲಾಗದು ಎಂಬ ಸತ್ಯ ಗೊತ್ತಾಗಿರುವುದರಿಂದ ಅವರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದರೆ ಜೆಡಿಎಸ್ ಒಡಕಿನ ಲಾಭವನ್ನು ಪಡೆಯಬಹುದು. ಕ್ಷೇತ್ರದೊಳಗೆ ಕೈ ಪರವಾದ ವಾತಾವರಣ ಸೃಷ್ಟಿಯಾಗಿರುವುದರಿಂದ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಗೆಲುವಿಗೆ ಸಹಕರಿಸಲಿಲ್ಲ. ಕಾಂಗ್ರೆಸ್ ಪರ ವೋಟುಗಳು ಹರಿದುಹೋಗುವಂತೆ ಮಾಡಿದರೆಂಬ ಆರೋಪದಿಂದ ವರಿಷ್ಠರ ಕೆಂಗಣ್ಣಿಗೆ ಗುರಿಯಾದರು. ಬಳಿಕ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರಿಗೆ ದೂರದ ಶಿವಮೊಗ್ಗ ಉಸ್ತುವಾರಿ ನೀಡಲಾಯಿತು. ಅನಂತರದಲ್ಲೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ನಾರಾಯಣಗೌಡರು ಪ್ರಬಲ ಹೋರಾಟ ನಡೆಸಿದರೂ ಸಿಗಲಿಲ್ಲ. ಡಿ.ಗೋಪಾಲಯ್ಯ ಬಳಿಕ ಚುನಾವಣಾ ಸಮಯದಲ್ಲಿ ಉಸ್ತುವಾರಿ ಆರ್.ಅಶೋಕ್ ಪಾಲಾಗಿದೆ.

ವೀರಶೈವರ ವಿರೋಧ ಕಟ್ಟಿಕೊಂಡ ಕೆ.ಸಿ.ನಾರಾಯಣಗೌಡ
ಕೆ.ಸಿ.ನಾರಾಯಣಗೌಡರು ಶಾಸಕರಾಗಿ ಆಯ್ಕೆಯಾದ ನಂತರ ಬಿಜೆಪಿ ಸಂಘಟನೆಗೆ ಹೆಚ್ಚಿನ ಉತ್ಸಾಹ ತೋರಿಸಲಿಲ್ಲ. ಬಿಜೆಪಿಯನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡದಿದ್ದರಿಂದ ಅವರ ಬೇಡಿಕೆಗಳಿಗೆ ರಾಜ್ಯ ಬಿಜೆಪಿ ನಾಯಕರು ಸ್ಪಂದಿಸಲಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜುನಾಥ್‌ಗೆ ಮೋಸ ಮಾಡಿದರೆಂಬ ಕಾರಣಕ್ಕೆ ಕ್ಷೇತ್ರದೊಳಗೆ ವೀರಶೈವರ ವಿರೋಧ ಕಟ್ಟಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕೂಡ ನಾರಾಯಣಗೌಡರನ್ನು ದೂರವಿಟ್ಟಿದ್ದಾರೆ. ಕ್ಷೇತ್ರದ ಕುರುಬರ ಮತಗಳು ಕಾಂಗ್ರೆಸ್ ಪರ ಹರಿದುಹೋಗುವ ವಾತಾವರಣ ಸೃಷ್ಟಿಯಾಗಿದೆ. ಇದರ ನಡುವೆ ಬಿಜೆಪಿಯಿಂದ ಸ್ಫರ್ಧಿಸಿದರೆ ಗೆಲ್ಲುವುದು ಹೇಗೆ ಎಂಬ ಪ್ರಶ್ನೆ ನಾರಾಯಣಗೌಡರನ್ನು ಕಾಡುತ್ತಿದೆ ಎನ್ನಲಾಗಿದೆ.

ನಾರಾಯಣಗೌಡರನ್ನು ಸೋಲಿಸುವುದು ಖಚಿತ ಎಂದ ಕಾಂಗ್ರೆಸ್ ಕಾರ್ಯಕರ್ತರು
ಜಿಲ್ಲೆಯೊಳಗೆ ಕಾಂಗ್ರೆಸ್ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ನಾರಾಯಣಗೌಡರನ್ನು ಪಕ್ಷಕ್ಕೆ ಕರೆದುಕೊಳ್ಳಲು ಕಾಂಗ್ರೆಸ್‌ನೊಳಗೆ ಒಂದು ಗುಂಪು ಪ್ರಯತ್ನಿಸುತ್ತಿದೆ. ಆದರೆ ಸ್ಥಳೀಯ ಮುಖಂಡರಿಂದ ಇದಕ್ಕೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಪ್ರಮುಖ ಅಡ್ಡಗಾಲಾಗಿದ್ದಾರೆ. ಯಾವುದೇ ಕಾರಣಕ್ಕೂ ನಾರಾಯಣಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಅವರನ್ನು ಸೋಲಿಸಲು ನಾವು ಸಿದ್ಧರಾಗುತ್ತೇವೆ ಎಂಬ ಎಚ್ಚರಿಕೆಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಥಳೀಯವಾಗಿ ನಾರಾಯಣಗೌಡರ ಸೇರ್ಪಡೆಗೆ ವಿರೋಧಗಳು ವ್ಯಕ್ತವಾಗುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಆತುರಪಡುತ್ತಿಲ್ಲ ಎನ್ನಲಾಗಿದೆ.

ಆಂತರಿಕವಾಗಿ ಕಾಂಗ್ರೆಸ್ ಸೇರುವ ತವಕ
ಈ ನಡುವೆ ನಾರಾಯಣಗೌಡರು ಮೇಲ್ನೋಟಕ್ಕೆ ಬಿಜೆಪಿ ಪರ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಆಂತರಿಕವಾಗಿ ಕಾಂಗ್ರೆಸ್ ಸೇರುವ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ಕೆ.ಆರ್.ಪೇಟೆ ಕ್ಷೇತ್ರದ ಹೊನ್ನೇನಹಳ್ಳಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೊಗಳಿ ಕುರುಬರ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದರು. ಉಳಿದಂತೆ ಈಗಾಗಲೇ ಜಾತಿ ಮತಗಳ ಮೇಲೆ ಕಣ್ಣಿಟ್ಟು ಸಮಾವೇಶಗಳನ್ನು ನಡೆಸುವುದರೊಂದಿಗೆ ಅವರನ್ನು ಓಲೈಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಕಾಂಗ್ರೆಸ್ ಸೇರ್ತಾರಾ ಕೆ.ಸಿ ನಾರಾಯಣ ಗೌಡ..?
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರ ಒಕ್ಕಲಿಗರು, 35 ಸಾವಿರ ಕುರುಬರು, 25 ಸಾವಿರ ದಲಿತರು, 15 ಸಾವಿರ ವೀರಶೈವರಿದ್ದಾರೆ. ಕುರುಬರು ಹಾಗೂ ಸಣ್ಣ ಸಮುದಾಯದವರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಕ್ಕಲಿಗ ಮತಗಳು ಜೆಡಿಎಸ್-ಕಾಂಗ್ರೆಸ್ ಎರಡೂ ಕಡೆ ಹಂಚಿಹೋಗಲಿವೆ. ಕುರುಬ ಸಮುದಾಯದ ಮತಗಳು ಬಹುಪಾಲು ಕಾಂಗ್ರೆಸ್ ಬೆನ್ನಿಗೆ ನಿಂತರೆ, ವೀರಶೈವರ ಮತಗಳು ಬಿಜೆಪಿಗೆ ಹರಿದುಹೋಗಲಿವೆ. ದಲಿತರು ಕಾಂಗ್ರೆಸ್ ಪರ ಹೆಚ್ಚು ಒಲವು ತೋರುವ ಸಾಧ್ಯತೆಗಳಿವೆ. ಕಳೆದ ಚುನಾವಣಾ ಸಮಯದಲ್ಲಿ ಸಚಿವ ಸಂಪುಟದ ಬಹುತೇಕ ಸಚಿವರು ಕೆ.ಆರ್.ಪೇಟೆ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರಿಂದ ನಾರಾಯಣಗೌಡರಿಗೆ ಗೆಲುವು ಸಾಧ್ಯವಾಯಿತು. ಈಗ ಆ ಪರಿಸ್ಥಿತಿ ಕ್ಷೇತ್ರದೊಳಗಿಲ್ಲ ಎನ್ನುವ ಅಭಿಪ್ರಾಯಗಳು ಬಲವಾಗಿ ಕೇಳಿ ಬರುತ್ತಿದೆ.












Click it and Unblock the Notifications