Bengaluru-Mysuru Expressway: ಇದು ಬಿಜೆಪಿ ಯೋಜನೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ ಬೊಮ್ಮಾಯಿ
ಮಂಡ್ಯ, ಮಾರ್ಚ್ 12: ರಾಜ್ಯದ ಎರಡು ಪ್ರಮುಖ ನಗರಗಳಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದು ನಾವೇ. ಇಂದು ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದು ನಾವೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಪ್ರಧಾನಮಂತ್ರಿಗಳ ಮಂಡ್ಯ ಭೇಟಿ ಹಾಗೂ ಎಕ್ಸಪ್ರೆಸ್‌ವೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಭಾನುವಾರ ನಡೆದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ 2015ರಲ್ಲಿ ಹೆದ್ದಾರಿಯ ಡಿಪಿಆರ್ ಸಿದ್ಧವಾಯಿತು. 2016ಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆಯಾಯಿತು. ಅಂದಾಜು ವೆಚ್ಚ ಹೆಚ್ಚಾಗಿದ್ದರಿಂದ ಅದು ಮತ್ತೆ ಮೋದಿ ಅವರ ಬಳಿಗೆ ಹೋಯಿತು. ತಡ ಮಾಡದೆ ಮಂಜೂರಾತಿ ನೀಡಿದರು. ಹೀಗಾಗಿ ಈ ದಶಪಥ ಹೆದ್ದಾರಿ ನಮ್ಮ ಕೊಡುಗೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಬೊಮ್ಮಾಯಿ ಟಾಂಗ್ ನೀಡಿದರು.

ಬೆಂಗಳೂರು-ಮೈಸೂರು ಹೆದ್ದಾರಿಯು 2019ರಲ್ಲಿ ಶಂಕುಸ್ಥಾಪನೆಯಾಗಿ 2023ರಲ್ಲಿ ಉದ್ಘಾಟನೆ ಆಗುತ್ತಿದೆ. ಯೋಜನೆ ಆರಂಭದಿಂದ ಹಿಡಿದು ಕೊನೆಯವರೆಗೂ ಯೋಜಯನ್ನು ಮುನ್ನಡೆಸಿದ್ದು ನಾವೇ ಎಂದು ಗಟ್ಟಿ ಧ್ವನಿಯಲ್ಲಿ ಮುಖ್ಯಮಂತ್ರಿಗಳು ಪುನರುಚ್ಚರಿಸಿದರು. ಇದರ ಮಧ್ಯೆ ಕಾಂಗ್ರೆಸ್‌ನವರು ಇದು ನಮ್ಮ ಕೊಡುಗೆ ಎನ್ನುತ್ತಿದ್ದರೆ, ಜೆಡಿಎಸ್‌ನವರು ಪತ್ರಿಕಾ ಜಾಹೀರಾತು ನೀಡಿ ಇದು ನಮ್ಮ ಯೋಜನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಯೋಜನೆ ಯಾರದ್ದು ಎನ್ನುವುದು ಜನರಿಗೆ ಗೊತ್ತಿದೆ ಎಂದು ಅವರು ಸಷ್ಟಪಡಿಸಿದರು.
ನಿರ್ದಿಷ್ಟ ಕಾಲಮಿತಿಯೊಳಗೆ ಹೆದ್ದಾರಿ ಯೋಜನೆ ಆರಂಭಿಸಿ ಪೂರ್ಣಗೊಳಿಸುವುದು ಪ್ರಧಾನಿ ನರೇಂದ್ರಮೋದಿ ಅವರ ಆಡಳಿತ ಶೈಲಿ ಮತ್ತು ಪದ್ಧತಿ. ಯೋಜನೆಯಲ್ಲಿ ಎಲ್ಲಿಯೂ ಅವ್ಯವಹಾರಕ್ಕೆ ಅವಕಾಶವಾಗದಂತೆ ಪಾರದರ್ಶಕವಾಗಿ ಜಾರಿಗೊಳಿಸುವಂತಹ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸರ್ಕಾರದ ಕಾರ್ಯಕ್ಷಮತೆ ಬಗ್ಗೆ ಬಣ್ಣಿಸಿದರು.
ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಇದು
ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಏನು? ಎಂಬುದು ಹಲವರ ಪ್ರಶ್ನೆಯಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 17 ಲಕ್ಷ ರೈತರಿಗೆ ಕೇಂದ್ರ ಸರ್ಕಾರ 16,500 ಕೋಟಿ ರೂ., ರಾಜ್ಯ ಸರ್ಕಾರ 4000 ಕೋಟಿ ರೂಪಾಯಿ ನಂತೆ ಎರಡು ಸೇರಿ 20 ಸಾವಿರ ಕೋಟಿ ರೂ.ಡಿದೆ. ರಾಜ್ಯದಲ್ಲಿ 6 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 64 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಕರ್ನಾಟಕದ ಅಭಿವೃದ್ಧಿ, ಸಮೃದ್ಧಿ, ಜನಕಲ್ಯಾಣ, ರಾಷ್ಟ್ರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಸರ್ಕಾರಗಳು ಅಭಿವೃದ್ಧಿ ನೀತಿ ಅನುಸರಿಸುತ್ತಿವೆ ಎಂದು ಅವರು ವಿವರಿಸಿದರು.

ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ವರ್ಷಗಳಿಂದ ಬಂದ್ ಆಗಿದ್ದ ಮೈಷುಗರ್ ಕಾರ್ಖಾನೆ ಪುನಾರಂಭಿಸಿದ್ದೇವೆ. ಕಳೆದ ವರ್ಷ 50 ಕೋಟಿ ರೂಪಾಯಿ ನೀಡಿದ್ದಲ್ಲದೇ ಎಥೆನಾಲ್ ಘಟಕ ಈ ವರ್ಷ ಆರಂಭಿಸುತ್ತೇವೆ. ವಿಶ್ವೇಶ್ವರಯ್ಯ ನಾಲೆಯ ವಿತರಣಾ ನಾಲೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಮಂಡ್ಯದ 2 ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಜಮೆ ಮಾಡಲಾಗಿದೆ. ಇಲ್ಲಿನ ಸಾವಿರಾರು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಆರ್ಥಿಕ ನೆರವು ಕಲ್ಪಿಸಲಾಗಿದೆ. ಇಲ್ಲಿ 4.49 ಲಕ್ಷ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ ಎಂದು ಅಭಿವೃದ್ಧಿ ಕಾರ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಸದ್ಯ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಬಾರಿ (2023ರಲ್ಲಿ) ಸಹ ಬಿಜೆಪಿಯನ್ನು ಬೆಂಬಲಿಸಬೇಕು. ಈ ಮೂಲಕ ಮಂಡ್ಯ ಜಿಲ್ಲೆಯನ್ನು ರಾಷ್ಟ್ರದ ಅಗ್ರಸ್ಥಾನದ ಜಿಲ್ಲೆಯಾಗಿ (ನಂಬರ್ 01) ಜಿಲ್ಲೆಯಾಗಿ ಅಭಿವೃದ್ಧಿ ಮಾಡಲು ಸಹಾಯ ಮಾಡಬೇಕು. ಇದರಿಂದ ಕಳೆದ 30 ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಆಡಳಿತ ನೋಡಿದ ನೀವೆಲ್ಲರು ಹೊಸ ಬದಲಾವಣೆಗೆ ಸಾಕ್ಷಿಯಾಗುತ್ತೀರಿ ಎಂದು ಅವರು ಭರವಸೆ ನೀಡುವ ಜೊತೆಗೆ ಮತದಾರರಲ್ಲಿ ಮನವಿ ಮಾಡಿದರು.












Click it and Unblock the Notifications