ಸಾಲು ಸಾಲು ರಜೆ: 'ಅರ್ಧ ಬೆಂಗಳೂರು ಚಿಕ್ಕಮಗಳೂರಲ್ಲಿ, ಉಳಿದರ್ಧ ಮೈಸೂರಲ್ಲಿʼ; Viral ಆಯ್ತು ಟ್ರಾಫಿಕ್ ಜಾಮ್ ವಿಡಿಯೋ
ಕಾರ್ಮಿಕರ ದಿನಾಚರಣೆ ಮೇ 1 ಶುಕ್ರವಾರ ಬಂದಿರುವುದರಿಂದ, ಶನಿವಾರ ಮತ್ತು ಭಾನುವಾರ ಸೇರಿ ಒಟ್ಟು ಮೂರು ದಿನಗಳ ಕಾಲ ಸಾಲು ಸಾಲು ರಜೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಹುತೇಕ ಮಂದಿ ಪ್ರವಾಸಕ್ಕೆ ಹೋಗಿದ್ದು, ಪರಿಣಾಮವಾಗಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮೇ 1 ರಿಂದ 3 ರವರೆಗಿನ ರಜೆಯನ್ನು ಕಳೆಯಲು ಸಿಲಿಕಾನ್ ಸಿಟಿ ಮಂದಿ ಗುರುವಾರ ಸಂಜೆ ಮತ್ತು ಶುಕ್ರವಾರ ಮುಂಜಾನೆಯಿಂದಲೇ ಪ್ರಸಿದ್ಧ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಹೆದ್ದಾರಿಗಳಲ್ಲಿ ವಾಹನಗಳು ಸಾಲುಗಟ್ಟಿ ಟ್ರಾಫಿಕ್ ಶುರುವಾಗಿದೆ. ಸಾಮಾನ್ಯವಾಗಿ ಲಾಂಗ್ ವೀಕೆಂಡ್ ಬಂದರೆ ಬೆಂಗಳೂರಿನ ಜನತೆ ಪ್ರಕೃತಿ ಸೌಂದರ್ಯ ಸವಿಯಲು ಗಿರಿಧಾಮಗಳಿಗೆ ಲಗ್ಗೆ ಇಡುವುದು ವಾಡಿಕೆ. ಆದರೆ ಈ ಬಾರಿ ವಾಹನಗಳ ದಟ್ಟಣೆ ಮಿತಿಮೀರಿದ್ದು, ಟೋಲ್ ಗೇಟ್‌ಗಳ ಬಳಿಯೂ ವಾಹನ ಸವಾರರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಜಾದಿನಗಳಲ್ಲಿ ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣ ಬೆಳೆಸಿದಾಗ ಹೆದ್ದಾರಿಗಳ ವ್ಯವಸ್ಥೆ ಹೇಗೆ ಅಸ್ತವ್ಯಸ್ತಗೊಳ್ಳುತ್ತದೆ ಎಂಬುದಕ್ಕೆ ವೈರಲ್ ಆಗಿರುವ ಈ ವಿಡಿಯೋ ಒಂದು ಸಾಕ್ಷಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್
ಈ ಟ್ರಾಫಿಕ್ ಜಾಮ್ ಕುರಿತು 'ಎಕ್ಸ್' ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪೋಸ್ಟ್‌ಗಳು ಹರಿದಾಡುತ್ತಿವೆ. ಅದರಲ್ಲಿ ಒಂದು ಪೋಸ್ಟ್ ಎಲ್ಲರ ಗಮನ ಸೆಳೆದಿದೆ. "ಅರ್ಧ ಬೆಂಗಳೂರು ಈಗ ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿದೆ. ಉಳಿದ ಅರ್ಧ ಬೆಂಗಳೂರು ಮೈಸೂರು ಮತ್ತು ಕೊಡಗಿನಲ್ಲಿದೆ. ಇನ್ನು ಬೆಂಗಳೂರಿನಲ್ಲೇ ಉಳಿದುಕೊಂಡಿರುವ ನಾನು, ಖಾಲಿ ಇರುವ ರಸ್ತೆಗಳು ಮತ್ತು ಜನಸಂದಣಿ ಇಲ್ಲದ ಸ್ಥಳಗಳನ್ನು ಎಂಜಾಯ್ ಮಾಡುತ್ತೇನೆ. ಎಲ್ಲರಿಗೂ ಲಾಂಗ್ ವೀಕೆಂಡ್‌ನ ಶುಭಾಶಯಗಳು," ಎಂದು ನೆಟ್ಟಿಗರೊಬ್ಬರು ಹಂಚಿಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆಗಳು
ಈ ವಿಡಿಯೋ ಮತ್ತು ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ನಗರ ಜೀವನದ ಕುರಿತು ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
"ನನ್ನ ಪ್ರಕಾರ ಚಿಕ್ಕಮಗಳೂರು ಮತ್ತು ಮೈಸೂರಿನ ಕಡೆಗೆ ಹೋಗುವವರಲ್ಲಿ ಬಹುತೇಕರು ಕನ್ನಡಿಗರೇ ಆಗಿರುತ್ತಾರೆ. ಉತ್ತರ ಭಾರತದವರಿಗೆ ಈ ಸ್ಥಳಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ, ಅವರು ಹೆಚ್ಚಾಗಿ ಕೇರಳ ಅಥವಾ ತಮಿಳುನಾಡಿನ ಕಡೆಗೆ ಹೋಗುತ್ತಾರೆ ಅನಿಸುತ್ತೆ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ಬೆಂಗಳೂರಿನ ಕೆಲವರು ದಾಂಡೇಲಿ, ಗೋವಾದಲ್ಲೂ ಇರುತ್ತಾರೆ. ವಾರಾಂತ್ಯದಲ್ಲಿ ಧಾರವಾಡ-ಗೋವಾ ಮತ್ತು ಧಾರವಾಡ-ದಾಂಡೇಲಿ ರಸ್ತೆಗಳಲ್ಲಿ ನಾನು ನಿಯಮಿತವಾಗಿ ಬೆಂಗಳೂರು ನೋಂದಣಿಯ ವಾಹನಗಳನ್ನು ನೋಡುತ್ತೇನೆ," ಎಂದು ಬರೆದುಕೊಂಡಿದ್ದಾರೆ.
Bangalore- Mangalore highway scene right now! pic.twitter.com/NmxWTZJ4WW
— Sanjeev (@geniusparadox) May 1, 2026
ಒಟ್ಟಾರೆಯಾಗಿ, ಮೂರು ದಿನಗಳ ಬಿಡುವು ಸಿಕ್ಕಿದ್ದೇ ತಡ, ಐಟಿ ಉದ್ಯೋಗಿಗಳು ಸೇರಿ ಬಹುತೇಕರು ಬೆಂಗಳೂರು ತೊರೆದಿದ್ದಾರೆ. ಪ್ರವಾಸಿ ತಾಣಗಳಲ್ಲಿ ರೆಸಾರ್ಟ್, ಹೋಂ ಸ್ಟೇಗಳು ಭರ್ತಿಯಾಗಿದ್ದು, ಹೆದ್ದಾರಿಗಳಲ್ಲಿ ವಾಹನಗಳ ಹಾರ್ನ್ ಸದ್ದು ಮಾತ್ರ ಜೋರಾಗಿದೆ.












Click it and Unblock the Notifications