Bengaluru-Mysuru expressway; ದರೋಡೆಕೋರರ ಟಾರ್ಗೆಟ್ ಯಾರು?
ಮಂಡ್ಯ, ಆಗಸ್ಟ್ 27: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಗಳ ಬಳಿಕ ಅಪಘಾತಗಳಿಂದ ಸುದ್ದಿಯಾಗಿತ್ತು. ಈಗ ಪೊಲೀಸರು ಅಪಘಾತ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಈಗ ದರೋಡೆಕೋರರು ವಾಹನ ಸವಾರರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ರಾಜ್ಯದ ಪ್ರಮುಖ ಯೋಜನೆಯಾದ ಮತ್ತು ಬೆಂಗಳೂರು ಹಾಗೂ ಮೈಸೂರು ಸಂಪರ್ಕಿಸುವ ಎಕ್ಸ್‌ಪ್ರೆಸ್ ವೇ ಉದ್ಘಾಟಿಸಿದ್ದರು. ಈ ಮಾರ್ಗ ಉದ್ಘಾಟನೆಯಾದ ಬಳಿಕ ಇದುವರೆಗೂ 11 ದರೋಡೆ ಪ್ರಕರಣಗಳು ನಡೆದಿವೆ ಎಂಬುದು ಪೊಲೀಸರು ನೀಡುವ ಮಾಹಿತಿ.

30 ವರ್ಷದ ಗೋವಿಂದ ರಮೇಶ್ ಎನ್ನುವ ವಕೀಲರು ಕೆಲವು ದಿನಗಳ ಹಿಂದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ದರೋಡೆಕೋರರು ಇರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೈಕ್‌ನಲ್ಲಿ ಸಂಚಾರ ನಡೆಸುವವರು, ಸರ್ವೀಸ್ ರಸ್ತೆಯಲ್ಲಿ ಕಾರು ನಿಲ್ಲಿಸುವವರು ದರೋಡೆಕೋರರ ಟಾರ್ಗೆಟ್ ಆಗಿದ್ದಾರೆ.
ರಾತ್ರಿ ಸುಮಾರು 10.45ರ ಹೊತ್ತಿಗೆ ಮಂಡ್ಯದ ಬಳಿ ಸರ್ವೀಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಕೀಲ ಗೋವಿಂದ ರಮೇಶ್ ಫೋನ್‌ನಲ್ಲಿ ಮಾತನಾಡಲು ಕೆಳಗೆ ಇಳಿದಿದ್ದರು. ಆಗ ಒಬ್ಬ ವ್ಯಕ್ತಿ ಅವರ ಬಳಿ ಬರುವುದು ನೋಡಿ ತಕ್ಷಣ ಕಾರು ಹತ್ತಿ, ಅಲ್ಲಿಂದ ತೆರಳಿದರು. ಅಲ್ಲಿ ಆತನೊಬ್ಬನೇ ಇರಲಿಲ್ಲ, ಅವರ ಬಳಿ ಬರುತ್ತಿದ್ದ ವ್ಯಕ್ತಿ ಹಿಂದಿಯಲ್ಲಿ ಮತ್ತೊಬ್ಬನ ಜೊತೆ ಮಾತನಾಡುತ್ತಿದ್ದ, ಈ ಘಟನೆ ಕುರಿತು ಗೋವಿಂದ ರಮೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
11 ದರೋಡೆ ಪ್ರಕರಣಗಳು; ಪೊಲೀಸರು ನೀಡುವ ಮಾಹಿತಿ ಪ್ರಕಾರ 2023ರ ಮಾರ್ಚ್‌ನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾದ ಬಳಿಕ ಇದುವರೆಗೂ 11 ದರೋಡೆ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 7, ಉಳಿದವು ರಾಮನಗರ ವ್ಯಾಪ್ತಿಯಲ್ಲಿ ದಾಖಲಾಗಿವೆ. ಆಗಸ್ಟ್ ತಿಂಗಳಿನಲ್ಲಿ 2 ದರೋಡೆ ಪ್ರಕರಣ ವರದಿಯಾಗಿದೆ ಎಂದು The Hindu ಪತ್ರಿಕೆ ವರದಿ ಮಾಡಿದೆ.
ಮಂಡ್ಯ ಮತ್ತು ರಾಮನಗರ ಪೊಲೀಸರು ಹೇಳುವ ಪ್ರಕಾರ 8 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ದಾಖಲಾಗದ ಹಲವು ಪ್ರಕರಣಗಳು ಸಹ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಹಲವು ಪ್ರಕರಣಗಳಲ್ಲಿ ದರೋಡೆ ಮಾಡುವವರು ಬೈಕ್‌ಗಳನ್ನು ಅಥವ ರಸ್ತೆ ಬದಿ ವಾಹನ ನಿಲ್ಲಿಸುವವರನ್ನು ಟಾರ್ಗೆಟ್ ಮಾಡಿದ್ದಾರೆ. ಒಂದು ಪ್ರಕರಣದಲ್ಲಿ ದರೋಡೆ ಮಾಡುವವರು 8 ಕಿ. ಮೀ. ವಾಹನ ಹಿಂಬಾಲಿಸಿಕೊಂಡು ಬಂದಿರುವುದು ನಡೆದಿದೆ. ರಸ್ತೆ ಬದಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ದಂಪತಿಗಳನ್ನು ಸಹ ದರೋಡೆಕೋರರು ಟಾರ್ಗೆಟ್ ಮಾಡಿದ್ದರು.
ವಕೀಲ ಗೋವಿಂದ ರಮೇಶ್ ಹೇಳುವ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಹೈವೇ ಗಸ್ತನ್ನ ಹೆಚ್ಚಿಸಬೇಕಿದೆ. ಗಸ್ತು ಕೇವಲ ಹೆದ್ದಾರಿಯಲ್ಲಿ ಇದ್ದರೆ ಸಾಲದು ಸರ್ವೀಸ್ ರಸ್ತೆಯಲ್ಲಿಯೂ ಸಂಚಾರ ನಡೆಸಬೇಕಿದೆ. ಇಲ್ಲವಾದಲ್ಲಿ ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ಮನವಿಯೊಂದನ್ನು ಮಾಡಿದ್ದಾರೆ. ಹೆದ್ದಾರಿಯಲ್ಲಿ ದರೋಡೆ ತಡೆಯಲು ಗಸ್ತುವಾಹನಗಳನ್ನು ಹೆಚ್ಚಳ ಮಾಡಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಹೆದ್ದಾರಿ, ಸರ್ವೀಸ್ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನಗಳನ್ನು ನಿಲ್ಲಿಸಬೇಡಿ ಎಂದು ಹೇಳಿದ್ದಾರೆ.
ವಾಹನ ಸವಾರರಿಗೆ ವಿಶ್ರಾಂತಿಯ ಅಗತ್ಯವಿದ್ದರೆ ಪೆಟ್ರೋಲ್ ಬಂಕ್, ಸರ್ವೀಸ್ ರಸ್ತೆಯ ರೆಸ್ಟೋರೆಂಟ್‌ಗಳ ಬಳಿ ನಿಲ್ಲಿ, ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಅಲ್ಲಿ ವಾಹನ ನಿಲ್ಲಿಸಿಕೊಂಡು ಕೆಳಗೆ ಇಳಿಯುವುದು, ಫೋನ್‌ನಲ್ಲಿ ಮಾತನಾಡುವುದು ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications