ಬೆಂಗಳೂರು-ಜಲ್ಸೂರು ರಾಜ್ಯ ಹೆದ್ದಾರಿ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳಿಸಲು ಕ್ರಮ: ಸಚಿವ ಚಲುವರಾಯಸ್ವಾಮಿ
ನಾಗಮಂಗಲ, ಸೆಪ್ಟೆಂಬರ್, 06: ನಾಗಮಂಗಲ ತಾಲೂಕಿನಲ್ಲಿ ಹಾಯ್ದು ಹೋಗುತ್ತಿರುವ ಬೆಂಗಳೂರು-ಜಲ್ಸೂರು ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಮುಂದಿನ 6 ತಿಂಗಳಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌಡ್ಲೆ ಗೇಟ್‌ನಿಂದ ದೇವಲಾಪುರ, ನಾಗಮಂಗಲ, ಬೋಗಾದಿ ಮಾರ್ಗವಾಗಿ ಕೆ.ಆರ್.ಪೇಟೆ ಮೂಲಕ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಧಿಕಾರಿಗಳ ಜೊತೆಗೂಡಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಕಳೆದ 2018ರಲ್ಲಿ ಬೆಂಗಳೂರು-ಜಲ್ಸೂರು ರಾಜ್ಯ ಹೆದ್ದಾರಿ ಕಾಮಗಾರಿಗೆ ಅನುಮೋದನೆ ದೊರಕಿದ್ದು, 2020ರಲ್ಲಿ ಕಾಮಗಾರಿ ಆರಂಭವಾಗಿ 3ವರ್ಷಗಳಿಂದ ಯಾವುದೇ ಸಮಸ್ಯೆಯಿಲ್ಲದ ಪ್ರದೇಶದಲ್ಲಿ ಮಾತ್ರ ಕಾಮಗಾರಿಯನ್ನು ನಡೆಸಲಾಗಿದೆ ಎಂದರು.

ಇನ್ನುಳಿದಂತೆ ಗ್ರಾಮ ಪರಿಮಿತಿ ಮತ್ತು ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಕೋವಿಡ್ ಸಂದರ್ಭ ಸೇರಿದಂತೆ ಅಧಿಕಾರಿಗಳ ಬದಲಾವಣೆ, ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆಗೆ ಸೇರಿದ ಕೆಲವು ಭಾಗಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅರಣ್ಯ ಪ್ರದೇಶದಲ್ಲಿಯೇ ಹೆಚ್ಚು ಸಮಸ್ಯೆಯಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ನಿರ್ಮಾಣಕ್ಕೆ ತೊಡಕಾಗಿರುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಇಂದು ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನಿಂದ ಜಲ್ಸೂರು ರಸ್ತೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಸೇರಿದ ಸ್ಥಳ 13 ಕಿಲೋ ಮೀಟರ್ ಇದ್ದು, ಇದರಲ್ಲಿ 8 ಕಿ.ಮೀ. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಇರುತ್ತದೆ. ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆ ಪರಿಹರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳ ಹಂತದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕಿರುವುದರಿಂದ ಡಿಸಿ, ಎಸಿ ಸೇರಿದಂತೆ ಕೆಶಿಪ್ ಅಧಿಕಾರಿಗಳು ಮತ್ತು ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥರ ಜೊತೆಗೂಡಿ ತಪಾಸಣೆ ನಡೆಸಿದ್ದು, ಎಲ್ಲೆಲ್ಲಿ ಏನೆಲ್ಲಾ ಸಮಸ್ಯೆಯಿದೆ, ಅವುಗಳಿಗೆ ಪರಿಹಾರ ಕಂಡುಹಿಡಿಯಲು ಕಾನೂನಾತ್ಮಕ ಮಾರ್ಗೋಪಾಯ ಕಂಡುಹಿಡಿಯಲು ಸಮಗ್ರ ಮಾಹಿತಿ ಪಡೆದುಕೊಳ್ಳಲಾಗಿದೆ. ಮುಂದಿನ 6 ತಿಂಗಳಲ್ಲಿ ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ್, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ಕೆಶಿಪ್ ಮುಖ್ಯ ಇಂಜಿನಿಯರ್ ಶಿವಕುಮಾರ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications