ನಾಗಮಂಗಲದ ಕೆರೆಯಲ್ಲಿ ಹಣವಿಲ್ಲದ ಎಟಿಎಂ ಪತ್ತೆ
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ವ್ಯಾಪ್ತಿಯ ಮೊದಲಹಳ್ಳಿ ಕೆರೆಯಲ್ಲಿ ಎಟಿಎಂ ಪತ್ತೆಯಾಗಿದೆ. ಹಣ ಲೂಟಿ ಮಾಡಿದ ನಂತರ ಈ ಎಟಿಎಂ ಅನ್ನು ಬಿಸಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಂಡ್ಯ, ಏಪ್ರಿಲ್ 3: ಹಣವನ್ನು ಲೂಟಿ ಮಾಡಿ ಬಳಿಕ ಎಸೆದು ಹೋದ ಎಟಿಎಂವೊಂದು ನಾಗಮಂಗಲ ತಾಲೂಕಿನ ಮೊದಲಹಳ್ಳಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ.
ಕೆರೆಯಲ್ಲಿ ಮೀನು ಹಿಡಿಯಲು ಹೋದವರಿಗೆ ನೀರಿನಲ್ಲಿ ಕಬ್ಬಿಣದ ಬಾಕ್ಸ್ ಇರುವುದು ಕಂಡುಬಂದಿದ್ದು, ತಕ್ಷಣ ನಾಗಮಂಗಲ ಪಟ್ಟಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಪಿಐ ಹರೀಶ್ ಬಾಬು ಮತ್ತು ಸಿಬ್ಬಂದಿ ಮೀನು ಹಿಡಿಯುತ್ತಿದ್ದವರ ಸಹಾಯದಿಂದ ಆ ಬಾಕ್ಸನ್ನು ಮೇಲೆತ್ತಿದಾಗ ಅದು ಎಟಿಎಂ ಎಂಬುವುದು ಖಚಿತವಾಯಿತು.
ಆ ನಂತರ ಎಟಿಎಂ ಅನ್ನು ಗ್ರಾಮಾಂತರ ಪೊಲೀಸ್ ಠಾಣೆ ಆವರಣಕ್ಕೆ ಟ್ರ್ಯಾಕ್ಟರ್ ಮೂಲಕ ತಂದು, ಯಂತ್ರದ ಒಳಭಾಗ ಪರಿಶೀಲಿಸಿದಾಗ ಹಣವಿರಲಿಲ್ಲ. ಪೊಲೀಸರು ಯಂತ್ರವನ್ನು ಶುಚಿಗೊಳಿಸಿ, ಠಾಣೆಯಲ್ಲಿಟ್ಟಿದ್ದಾರೆ.[ಮುಖ್ಯಶಿಕ್ಷಕನ ಕೊಲೆಗೆ ಹೆಂಡತಿ, ಮಗಳಿಂದಲೇ ಸುಪಾರಿ]

ಎಟಿಎಂ ಬಹಳ ದಿನಗಳ ಹಿಂದೆಯೇ ಕೆರೆಗೆ ತಂದು ಹಾಕಲಾಗಿದ್ದು, ಕೆಸರು ಮತ್ತು ಪಾಚಿ ಕಟ್ಟಿಕೊಂಡಿತ್ತು. ಈ ಎಟಿಎಂ ಎಲ್ಲಿಯದು ಮತ್ತು ಹೇಗೆ ಇಲ್ಲಿಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ.
ಮೊದಲಹಳ್ಳಿ ಕೆರೆಯಲ್ಲಿದ್ದ ನೀರು ಬತ್ತಿ ಕೆರೆ ಬರಿದಾಗಿದ್ದರಿಂದ ಗ್ರಾಮದ ಕೆಲವರು ಮೀನು ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಕೆಸರಿನಲ್ಲಿ ಹೂತು ಹೋಗಿದ್ದ ಯಂತ್ರ ಗೋಚರವಾಗಿದೆ. ಈ ಯಂತ್ರವನ್ನು ದುಷ್ಕರ್ಮಿಗಳು ಕೆರೆಗೆ ಎಸೆದು ಹೋಗಿ ಬಹಳ ಸಮಯವಾಗಿರಬಹುದೆಂದು ಶಂಕಿಸಲಾಗಿದೆ.[ಪ್ರೀತಿ ನಿರಾಕರಣೆ: 3ನೇ ಮಹಡಿಯಿಂದ ಬಾಲಕಿಯ ನೂಕಿದ ಬಾಲಕ]
ಯಂತ್ರದ ಪರಿಶೀಲನೆ ಬಳಿಕವಷ್ಟೆ ಯಾವ ಬ್ಯಾಂಕಿಗೆ ಸೇರಿದ್ದು, ಯಾವ ಊರಿನದು ಎಂಬ ಮಾಹಿತಿ ದೊರೆಯಲಿದೆ. ಸದ್ಯ ಯಂತ್ರದಲ್ಲಿ ಹಣವಿಲ್ಲದಿರುವುದನ್ನು ಗಮನಿಸಿದರೆ ದುಷ್ಕರ್ಮಿಗಳು ಲೂಟಿ ಮಾಡಿ ಖಾಲಿ ಎಟಿಎಂ ಎಸೆದು ಹೋಗಿರುವುದು ಖಚಿತವಾಗಿದೆ.












Click it and Unblock the Notifications