ವಿಧಾನಸಭೆ ಚುನಾವಣೆ 2023: ಡಿಸೆಂಬರ್ 30ರಂದು ಮಂಡ್ಯಕ್ಕೆ ಅಮಿತ್ ಶಾ ಭೇಟಿ, ಬಿಜೆಪಿ ಪ್ಲಾನ್ ಏನು?
ಮಂಡ್ಯ, ಡಿಸೆಂಬರ್, 25: ಬಿಜೆಪಿ ರಾಜಕೀಯದ ಚಾಣಾಕ್ಷ ಅಮಿತ್ ಶಾ ಡಿಸೆಂಬರ್ 30ರಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕರು ಕಮಲ ಅರಳಿಸುವ ಸಂಕಲ್ಪ ಮಾಡಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಜಿಲ್ಲೆಯ 6 ಸ್ಥಾನಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಮುಖಂಡರು-ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಸಜ್ಜಾಗಿದ್ದಾರೆ.
2019ರ ಕೆ.ಆರ್.ಪೇಟೆ ಉಪ ಚುನಾವಣೆಯ ಗೆಲುವಿನೊಂದಿಗೆ ಹಳೇ ಮೈಸೂರು ಭಾಗದಲ್ಲೂ ಕಮಲ ಅರಳಿಸಬಹುದೆಂಬ ಖಚಿತ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆ ಸಮಯದಿಂದಲೂ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟು, ಪಕ್ಷಕ್ಕೆ ಶಕ್ತಿ ತುಂಬುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸಿತ್ತು. ಅದುವರೆಗೂ ಖಾತೆಯನ್ನೇ ತೆರೆಯದೆ ಸೋಲಿನ ಸುಳಿಯಲ್ಲೇ ಸಿಲುಕಿದ್ದ ಬಿಜೆಪಿಗೆ, ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರ ಗೆಲುವು ಜಿಲ್ಲೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಅಲ್ಲಿಯವರೆಗೂ ಹಳೇ ಮೈಸೂರು ಭಾಗವನ್ನು ನಿರ್ಲಕ್ಷಿಸುತ್ತಲೇ ಬಂದಿದ್ದ ಬಿಜೆಪಿ ನಾಯಕರು ಈ ಭಾಗದ ಮೇಲೆ ಕಣ್ಣರಳಿಸಿ ನೋಡಲಾರಂಭಿಸಿದರು.

ಟಿಕೆಟ್‌ಗಾಗಿ ಶುರುವಾಗಿದ್ದ ಭಾರಿ ಪೈಪೋಟಿ
ಪ್ರತಿ ಕ್ಷೇತ್ರದಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡುತ್ತಿದ್ದು, ಅವರಿಗೆ ಶಕ್ತಿ ತುಂಬುವ ಪ್ರಯತ್ನವನ್ನು ನಡೆಸಿದರು. ಅದರಂತೆಯೇ ಮಂಡ್ಯ ಕ್ಷೇತ್ರದಲ್ಲೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಎಚ್.ಆರ್.ಅರವಿಂದ್, ಪಾಂಡವಪುರದಲ್ಲಿ ಡಾ.ಇಂದ್ರೇಶ್, ಶ್ರೀರಂಗಪಟ್ಟಣದಿಂದ ಎಸ್.ಸಚ್ಚಿದಾನಂದ, ನಾಗಮಂಗಲದಿಂದ ರೈಟರ್ ರವಿ, ಮದ್ದೂರಿನಿಂದ ಎಸ್.ಪಿ.ಸ್ವಾಮಿ, ಮಳವಳ್ಳಿಯಿಂದ ಬಿ.ಸೋಮಶೇಖರ್,
ಮುನಿರಾಜು ಹೀಗೆ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುವಷ್ಟರ ಮಟ್ಟಿಗೆ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ನಡೆದಿದೆ. ಜಿಲ್ಲೆಯಲ್ಲಿ ಇದುವರೆಗೂ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಡುತ್ತಿದೆ. ಆದರೂ, ಮುಂಬರುವ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಕಾಂಗ್ರೆಸ್-JDSಗೆ ಪೈಪೋಟಿ ನೀಡಲು ಪ್ಲಾನ್
ಮಂಡ್ಯ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಕೂಡ ಇದೀಗ ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್-ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡುವಷ್ಟು ಸಾಮರ್ಥ್ಯ ಬೆಳೆಸಿಕೊಂಡಿರುವುದು ಹೊಸ ರಾಜಕೀಯ ಬೆಳವಣಿಗೆಯಾಗಿದೆ. ಚುನಾವಣಾ ಸಮಯದಲ್ಲಷ್ಟೇ ಮಂಡ್ಯ ಜಿಲ್ಲೆಯತ್ತ ಮುಖ ಮಾಡುತ್ತಿದ್ದ ಬಿಜೆಪಿ ರಾಜ್ಯ ನಾಯಕರು ಈಗ ಹಳೇ ಮೈಸೂರು ಭಾಗದ ಮೇಲೂ ಕಣ್ಣಿಟ್ಟಿದ್ದಾರೆ. ಈ ಮೂಲಕ ಮಂಡ್ಯ ನೆಲದಿಂದ ಚುನಾವಣಾ ಸಂಗ್ರಾಮಕ್ಕೆ ನಾಂದಿ ಹಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಜನಸಂಕಲ್ಪ ಯಾತ್ರೆ ಹೆಸರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಗೆ ಬಂದು ಚುನಾವಣಾ ಪ್ರಚಾರ ನಡೆಸಿ ಹೋಗಿದ್ದಾರೆ.

ಚುನಾವಣೆಗೆ ತಂತ್ರಗಾರಿಕೆ ರೂಪಿಸಲು ನಿರ್ಧಾರ
ಹಾಗೆಯೇ ಡಿಸೆಂಬರ್ 30ರಂದು ಅಮಿತ್ ಶಾ ಕೂಡ ಮಂಡ್ಯಕ್ಕೆ ಭೇಡು ನೀಡಲಿದ್ದಾರೆ. ಮಂಡ್ಯ ಜಿಲ್ಲೆಯೊಳಗೆ ಆರು ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನಿಟ್ಟುಕೊಂಡು ಚುನಾವಣೆಗೆ ನಾಲ್ಕು ತಿಂಗಳು ಮುಂಚಿತವಾಗಿಯೇ ಪ್ಲಾನ್ ರೂಪಿಸಲು ಆಗಮಿಸುತ್ತಿದ್ದಾರೆ. ಇದರಿಂದ ಬಿಜೆಪಿ ಹಿಂದೆಂದಿಗಿಂತಲೂ 2023ರ ಚುನಾವಣೆಗೆ ರಾಜಕೀಯವಾಗಿ ಹೆಚ್ಚು ಸಂಘಟನಾತ್ಮಕವಾಗಿರುವಂತೆ ಕಂಡುಬರುತ್ತಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

ಮಂಡ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿ
ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಸಾಮರ್ಥ್ಯ ಹೊಂದಿದೆ. ಕಾರ್ಯಕರ್ತರಲ್ಲಿರುವ ಸಂಘಟನಾ ಸಾಮರ್ಥ್ಯಕ್ಕೆ ಇನ್ನಷ್ಟು ಹುರುಪು ತುಂಬಲು ಕೇಂದ್ರ ಮತ್ತು ರಾಜ್ಯ ನಾಯಕರು ಆಗಮಿಸುತ್ತಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ನವರಿಗೆ ತಲೆಬಿಸಿ ಉಂಟುಮಾಡಿದಂತಿದೆ.












Click it and Unblock the Notifications