KRS Dam: ಕೆಆರ್‌ಎಸ್‌ನಿಂದ ವ್ಯರ್ಥವಾಗಿ ನದಿಗೆ ಹರಿದ ಸಾವಿರಾರು ಕ್ಯೂಸೆಕ್ ನೀರು
ಮಂಡ್ಯ, ಮಾರ್ಚ್ 25: ಬೇಸಿಗೆಯ ಬಿಸಿಯಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ ಅಣೆಕಟ್ಟು (ಕೆಆರ್‌ಎಸ್) ಮೂಲಕ ಸಾವಿರಾರು ಕ್ಯೂಸೆಕ್ ನೀರು ನದಿಗೆ ವ್ಯರ್ಥವಾಗಿ ಹರಿದು ಹೋಗಿದೆ. ಬೇಸಿಗೆಯಲ್ಲಿ ಇಂತಹ ಘಟನೆ ನಡೆದಿದ್ದರೂ ಸಹ ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದು ಮಂಡ್ಯ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಆರ್‌ಎಸ್ ಡ್ಯಾಂನ +80 ಗೇಟ್ ಭಾನುವಾರ ರಾತ್ರಿ ಏಕಾಏಕಿ ತೆರದಿದೆ. ಆದ್ದರಿಂದ ಕಾವೇರಿ ನದಿಗೆ ನೀರು ಹರಿದು ವ್ಯರ್ಥವಾಗಿ ಹರಿದು ಹೋಗಿದೆ. ಮಾಹಿತಿಗಳ ಪ್ರಕಾರ ಭಾನುವಾರ ರಾತ್ರಿ ತೆರೆದಿರುವ ಗೇಟ್ ಅನ್ನು ಸೋಮವಾರ ರಾತ್ರಿ ಮುಚ್ಚಲಾಗಿದೆ. ಅಲ್ಲಿಯ ತನಕ ಸುಮಾರು 2 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ವ್ಯರ್ಥವಾಗಿ ನದಿಗೆ ಹೋಗಿದೆ.

ಗೇಟ್ ತೆರೆದಿದ್ದರೂ ಸಹ ಅದನ್ನು ಮುಚ್ಚಲು ಅಧಿಕಾರಿಗಳು ತುರ್ತಾಗಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗುತ್ತಿದೆ. ಗೇಟ್ ಮೂಲಕ ನೀರು ನದಿಗೆ ಹರಿದು ಹೋಗುತ್ತಿರುವ ವಿಡಿಯೋಗಳು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲವು ಅನುಮಾನಗಳು: ಕೆಆರ್‌ಎಸ್ ಡ್ಯಾಂ ಗೇಟ್ ತೆರೆದಿರುವ ಕುರಿತು ಹಲವು ಅನುಮಾನಗಳು ಉಂಟಾಗಿದೆ. ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳಿಗೆ ಏಕೆ ಮಾಹಿತಿ ತಕ್ಷಣ ತಿಳಿದಿಲ್ಲ, ಬೇಸಿಗೆ ಸಮಯದಲ್ಲಿ ಏಕೆ ತುರ್ತು ಕ್ರಮ ಕೈಗೊಂಡಿಲ್ಲ, ಗೇಟ್ ಏಕಾಏಕಿ ತೆರೆದಿದ್ದು ಹೇಗೆ? ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.
ಬೇಸಿಗೆ ನೆತ್ತಿ ಸುಡುವಾಗ ಬೆಂಗಳೂರು ಸೇರಿದಂತೆ ವಿವಿಧ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲವಾದ ಕೆಆರ್‌ಎಸ್ ಡ್ಯಾಂ ಗೇಟ್ ತೆರೆದಿದ್ದರೂ ತುರ್ತಾಗಿ ಅದನ್ನು ಏಕೆ ಮುಚ್ಚಲಿಲ್ಲ. ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ಅಧಿಕಾರಿಗಳು ಏಕೆ ಸುಮ್ಮನಿದ್ದರು? ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ, ಅಧಿಕಾರಿಗಳು ಮೌನ ವಹಿಸಿದ್ದಾರೆ.
2024ರಲ್ಲಿ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹವಿದೆ. ಇಲ್ಲವಾದಲ್ಲಿ ಬೇಸಿಗೆಯಲ್ಲಿ ಡ್ಯಾಂ ನೀರನ್ನು ಜೋಪಾನವಾಗಿ ಕಾದಿಟ್ಟುಕೊಳ್ಳಬೇಕಿದೆ. ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ಮೌವಾಗಿರುವುದು ಏಕೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮಾರ್ಚ್ 24ರ ಮಾಹಿತಿಯಂತೆ 124 ಅಡಿಯ ಕೆಆರ್‌ಎಸ್ ಡ್ಯಾಂನಲ್ಲಿ 106.95 ಅಡಿ ನೀರಿನ ಸಂಗ್ರಹವಿದೆ. 28.76 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 4149 ಕ್ಯುಸೆಕ್ ಹೊರಹರಿವು ದಾಖಲಾಗಿದೆ.
2024ರ ಆಗಸ್ಟ್‌ನಲ್ಲಿ ತುಂಗಭದ್ರಾ ಡ್ಯಾಂನ 19ನೇ ಗೇಟ್‌ಗೆ ಹಾನಿಯಾಗಿ ಅಪಾರ ಪ್ರಮಾಣದ ನೀರು ನದಿಗೆ ವ್ಯರ್ಥವಾಗಿ ಹರಿದು ಹೋಗಿತ್ತು. ಇಂತಹ ಘಟನೆ ನಡೆದಿದ್ದರೂ ಸಹ ಮಂಡ್ಯ ಕೆಆರ್‌ಎಸ್ ಡ್ಯಾಂ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜನಪ್ರತಿನಿಧಿಗಳಾಗಲಿ ಅಥವ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಘಟನೆ ಕುರಿತು ಇನ್ನೂ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications