ಸೋನಿಯಾ ಗಾಂಧಿ ಸುಂಕಾತೊಣ್ಣೂರಿನ ಸಣ್ಣೇಗೌಡರ ಕುಟುಂಬದವರಾ?
ಮಂಡ್ಯ, ಜನವರಿ 30: ಅಮಿತ್ ಶಾ ಗುಜರಾತಿ, ಯೋಗಿ ಆದಿತ್ಯನಾಥ್ ಉತ್ತರಪ್ರದೇಶದವರು. ನಾನು ಈ ಮಣ್ಣಿನ ಮಗ, ಕನ್ನಡದವನು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಇದೀಗ ಮಂಡ್ಯದ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಅವರು ಲಘು ಧಾಟಿಯಲ್ಲಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.
ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪ್ರಶ್ನೆ ಕೇಳಲಾಗಿದೆ. ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಕನ್ನಡಿಗರಲ್ಲ ಎಂದಿದ್ದೀರಿ. ಹಾಗಿದ್ದರೆ ಸೋನಿಯಾ ಗಾಂಧಿ ಸುಂಕಾತೊಣ್ಣೂರಿನ ಸಣ್ಣೇಗೌಡರ ಕುಟುಂಬದವರಾ? ರಾಹುಲ್ ಗಾಂಧಿ ರಾಯಶೆಟ್ಟಿಪುರದ ರಾಜಣ್ಣನ ಮನೆತನದವರಾ? ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬನ್ನೂರು ಪಟೇಲರ ನೆಂಟರಾ? ಇವರು ಕನ್ನಡಿಗರೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖಾಧಿಕಾರಿಗಳಾಗಿ ಪ್ರಕಾಶ್ ರೈ, ಕನ್ಹಯ್ಯ, ಎಚ್.ಎಸ್.ದೊರೆಸ್ವಾಮಿ, ಜಿಗ್ನೇಶ್ ಮೇವಾನಿ ಅವರನ್ನು ನೇಮಿಸಲಾಗಿದೆಯಾ ಎಂದು ಪ್ರಶ್ನೆ ಮಾಡಲಾಗಿದ್ದು, ಮಂಡ್ಯ ಜಿಲ್ಲಾಧಿಕಾರಿ ಮೂಲಕ ಈ ಪ್ರಶ್ನೆಗಳನ್ನು ಸಲ್ಲಿಸಲಾಗಿದೆ.












Click it and Unblock the Notifications