ವೈರಮುಡಿ ಉತ್ಸವ: ಪುನೀತರಾದ ಭಕ್ತರು
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವದ ಸಂಭ್ರಮಕ್ಕೆ ಬುಧವಾರ ರಾತ್ರಿ ಸಾವಿರಾರು ಭಕ್ತರು ಸಾಕ್ಷಿಯಾದರು.
ಮಂಡ್ಯ, ಏಪ್ರಿಲ್ 6: ದಕ್ಷಿಣ ಬದರೀಕಾಶ್ರಮ, ಯದುಗಿರಿ ಎಂದೇ ಪ್ರಸಿದ್ಧಿಯಾಗಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವದ ಸಂಭ್ರಮಕ್ಕೆ ಬುಧವಾರ ರಾತ್ರಿ(ಏಪ್ರಿಲ್ 5) ಸಾವಿರಾರು ಭಕ್ತರು ಸಾಕ್ಷಿಯಾದರು.
ವಜ್ರಖಚಿತ ವೈರಮುಡಿ ಕಿರೀಟ ಧರಿಸಿರುವ ಚಲುವನಾರಾಯಣಸ್ವಾಮಿ ಮೆರವಣಿಗೆ ಹೊರಕ್ಕೆ ಬರುತ್ತಿದ್ದಂತೆಯೇ ದರ್ಶನ ಪಡೆದ ಭಕ್ತರು ಧನ್ಯತೆಯ ಭಾವದಲ್ಲಿ ತೇಲಿದರು.[ತಪ್ಪದೇ ಬನ್ನಿ ಮೇಲುಕೋಟೆ ವೈರಮುಡಿ ಉತ್ಸವಕ್ಕೆ]

ವೈರಮುಡಿಯನ್ನು ಮಂಡ್ಯದಿಂದ ಮೇಲುಕೋಟೆ ದೇವಸ್ಥಾನಕ್ಕೆ ಪಲ್ಲಕ್ಕಿ ಮೆರವಣಿಗೆಯಲ್ಲಿ ತರುವ ವೇಳೆಗೆ ಸಂಜೆ 7 ಗಂಟೆಯಾಗಿತ್ತು. ನಂತರ ಚಲುವನಾರಾಯಣಸ್ವಾಮಿಯನ್ನು ಆಭರಣಗಳಿಂದ ಅಲಂಕರಿಸಿ, ಗರುಡದೇವನ ಮೆರವಣಿಗೆ ನಂತರ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು.

ವಜ್ರ ಕಿರೀಟ ಧರಿಸಿದ ಚಲುವನಾರಾಯಣಸ್ವಾಮಿಯ ಮೆರವಣಿಗೆ ಹೂವಿನಿಂದ ಅಲಂಕೃತ ಪಲ್ಲಕ್ಕಿಯಲ್ಲಿ ರಾಜಬೀದಿಗೆ ಬರುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಎಲ್ಲೆಲ್ಲೂ 'ಗೋವಿಂದ... ಗೋವಿಂದ...' ಎಂಬ ಭಜನೆ ಮೊಳಗಿತು.
ರಾಜ್ಯದ ವಿವಿಧೆಡೆಯಿಂದ ಮಾತ್ರಲ್ಲದೇ ನೆರೆರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದಲೂ ಬಂದಿದ್ದ ಭಕ್ತರು ಬ್ರಹ್ಮೋತ್ಸವದ ಸಂಭ್ರಮವನ್ನು ಕಣ್ತುಂಬಿಸಿಕೊಂಡರು.












Click it and Unblock the Notifications