ಮಂಡ್ಯದಲ್ಲಿ ಹುಲಿ ಬೇಟೆ ವೀರಗಲ್ಲುಗಳು ಪತ್ತೆ! ಏನಿದರ ವಿಶೇಷ?
ಮಂಡ್ಯ, ಏಪ್ರಿಲ್ 5: ಅತಿ ವಿಶಿಷ್ಟ ಮತ್ತು ಅಪರೂಪದ ಹಳೆಯ ಕಾಲದ ಹುಲಿಬೇಟೆಯ ನಾಲ್ಕು ವೀರಗಲ್ಲುಗಳು ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಇದನ್ನು ಪತ್ತೆ ಹಚ್ಚುವಲ್ಲಿ ಹವ್ಯಾಸಿ ಸಂಶೋಧಕ ಮತ್ತು ಶಿಕ್ಷಕರಾಗಿರುವ ಸಂತೇಬಾಚಹಳ್ಳಿ ರಂಗಸ್ವಾಮಿ ಅವರು ಯಶಸ್ವಿಯಾಗಿದ್ದಾರೆ.
ಸದ್ಯ ನಾಯಕನಹಳ್ಳಿ ಗ್ರಾಮದ ಊರ ಹೆಬ್ಬಾಗಿಲ ಬಳಿಯಿರುವ ಬೋರೇದೇವರ ದೇವಾಲಯದ ಆವರಣದಲ್ಲಿ ಅಪರೂಪದ ನಾಲ್ಕು ವೀರಗಲ್ಲುಗಳು ಪತ್ತೆಯಾಗಿದ್ದು, ಇವು ಹುಲಿ ಬೇಟೆಯ ವೀರಗಲ್ಲುಗಳಾಗಿರುವುದು ಮತ್ತು ಗ್ರಾಮದ ಒಂದೇ ಸ್ಥಳದಲ್ಲಿರುವುದು ವಿಶೇಷವಾಗಿದೆ. ಗ್ರಾಮದಲ್ಲಿ ಈ ರೀತಿಯ ವೀರಗಲ್ಲುಗಳು ಹಲವಿದ್ದು, ಈ ಹಿಂದೆ ತಮ್ಮ ಗ್ರಾಮದಲ್ಲಿ ಪತ್ತೆಯಾದ ಸಂದರ್ಭ ಅವುಗಳನ್ನು ಸಂಗ್ರಹಿಸಿಡುವ ಕೆಲಸವನ್ನು ಗ್ರಾಮಸ್ಥರು ಮಾಡಿದ್ದಾರೆ.

ಅದರಂತೆ ನಾಯನಹಳ್ಳಿಯ ಬೋರೇದೇವರ ದೇವಾಲಯದ ಆವರಣದಲ್ಲಿ ಗ್ರಾಮಸ್ಥರು ಸುಮಾರು 9 ವೀರಗಲ್ಲುಗಳನ್ನು ಪರಸ್ಪರ ಜೋಡಿಸಿ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಕೆಲವು ವೀರಗಲ್ಲುಗಳಿದ್ದು ಈ ಪೈಕಿ ಕೆಲವು ಭಗ್ನಗೊಂಡಿದ್ದರೆ ಮತ್ತಷ್ಟು ವೀರಗಲ್ಲುಗಳ ಮೇಲೆ ಗಿಡಗೆಂಟೆಗಳು ಬೆಳೆದು ನಿಂತಿವೆ. ಇಂತಹ ವೀರಗಲ್ಲುಗಳ ಪೈಕಿ ಅಪರೂಪದ ಹುಲಿಬೇಟೆಯ ನಾಲ್ಕು ವೀರಗಲ್ಲುಗಳನ್ನು ಪತ್ತೆ ಹಚ್ಚಲಾಗಿದೆ.
ಹುಲಿಯನ್ನೇ ಬೇಟೆಯಾಡುತ್ತಿದ್ದ ಶೂರರು!
ಇಷ್ಟಕ್ಕೂ ಏನಿದು ಹುಲಿಬೇಟೆಯ ವೀರಗಲ್ಲು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುವುದು ಸಹಜ. ಅದು ಮನದಟ್ಟಾಗ ಬೇಕಾದರೆ ಹಿಂದಿನ ದಿನಗಳಿಗೆ ಹೋಗಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ವ್ಯವಸಾಯ ಮಾಡಿ ಜನ ಜೀವನ ನಿರ್ವಹಣೆ ಮಾಡುತ್ತಿದ್ದರು. ಕೃಷಿಗೆ ಜಾನುವಾರುಗಳ ಅಗತ್ಯತೆಯಿತ್ತು. ಹೀಗಾಗಿ ದನಕರುಗಳನ್ನು ಸಾಕುತ್ತಿದ್ದ ಜನರು ಅವುಗಳನ್ನು ಕ್ರೂರ ಪ್ರಾಣಿ ಹುಲಿಯಿಂದ ರಕ್ಷಿಸಬೇಕಾಗಿತ್ತು. ಅವತ್ತಿಗೆ ಅದು ಅನಿವಾರ್ಯವಾಗಿತ್ತು.

ಇಂತಹ ಸಂದರ್ಭಗಳಲ್ಲಿ ದಾಳಿ ಮಾಡುವ ಹುಲಿಯಿಂದ ಜಾನುವಾರುಗಳನ್ನು ರಕ್ಷಿಸಬೇಕಾದರೆ ಹುಲಿಯನ್ನು ಎದುರಿಸುವ ಧೈರ್ಯ ಬೇಕಾಗಿತ್ತು. ಜತೆಗೆ ಹುಲಿಯನ್ನು ಬೇಟೆಯಾಡಿ ಕೊಲ್ಲುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಹೀಗಾಗಿ ಊರವರೆಲ್ಲ ಸೇರಿ ಉಪಟಳ ನೀಡುವ ಹುಲಿಯನ್ನು ಬೇಟೆಯಾಡುತ್ತಿದ್ದರು. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಹುಲಿದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅಂತಹ ವೀರ ಬೇಟೆಗಾರರ ನೆನಪಿಗಾಗಿ ವೀರಗಲ್ಲುಗಳನ್ನು ಸ್ಥಾಪಿಸಲಾಗುತ್ತಿತ್ತು. ಅಂತಹದ್ದೇ ವೀರಗಲ್ಲುಗಳು ಇದೀಗ ಪತ್ತೆಯಾಗಿದೆ.
ಹುಲಿ ಕೊಂದು ಹೊಯ್ಸಳ ಸಾಮ್ರಾಜ್ಯ ಸ್ಥಾಪನೆ
ಕರ್ನಾಟಕದಲ್ಲಿ ಹುಲಿಯೊಂದಿಗೆ ಹೋರಾಡಿದವರ ಹಲವು ಕಥೆಗಳು ಜನಜನಿತವಾಗಿವೆ. ಅದರಲ್ಲೂ ಹುಲಿಯೊಂದಿಗೆ ಹೋರಾಡಿ ಹೊಯ್ಸಳ ಸಾಮ್ರಾಜ್ಯವನ್ನೇ ಕಟ್ಟಿದ ಸಳನ ಬಗ್ಗೆ ಗೊತ್ತೇ ಇದೆ. ಕೊಡಗಿನಲ್ಲಿ ಹುಲಿಯನ್ನು ಕೊಂದವನನ್ನು ಶೂರನೆಂದು ಕರೆದು ಹುಲಿಯೊಂದಿಗೆ ನಿಲ್ಲಿಸಿ ಮದುವೆ ಮಾಡಿ ಊರಿನಲ್ಲಿ ಮೆರವಣಿಗೆ ಮಾಡುವ ಸಂಪ್ರದಾಯವಿತ್ತು.

ಕಾಲ ಬದಲಾದಂತೆ ಎಲ್ಲವೂ ಬದಲಾಗಿದ್ದು, ಇವತ್ತು ಹುಲಿಯನ್ನು ಸಂರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಅದು ಆಚೆಗಿರಲಿ. ಆದರೆ ಈಗ ದೊರೆತಿರುವ ಹುಲಿಬೇಟೆಯ ವೀರಕಲ್ಲುಗಳು ಹಲವು ಶತಮಾನಗಳ ಹಿಂದಿನ ಕಥೆಯನ್ನು ತೆರೆದಿಡುತ್ತಿವೆ. ಸಾಮಾನ್ಯವಾಗಿ ಹುಲಿಬೇಟೆಯ ವೀರಗಲ್ಲುಗಳಲ್ಲಿ ವೀರನೊಬ್ಬ ಕತ್ತಿ ಗುರಾಣಿಗಳನ್ನು ಹಿಡಿದು ಹುಲಿಬೇಟೆಯಲ್ಲಿ ನಿರತರಾದ ಶಿಲ್ಪಗಳಿರುವುದು ಕಾಣಿಸುತ್ತದೆ. ಆದರೆ ನಾಯಕನಹಳ್ಳಿಯ ಎರಡು ವೀರಗಲ್ಲುಗಳಲ್ಲಿ ಹುಲಿ ಬೇಟೆಗಾರ ಬಿಲ್ಲು ಹಿಡಿದಿರುವುದು ವಿಶೇಷ.
ಹುಲಿಬೇಟೆಯಲ್ಲಿ ಪ್ರಾಣತ್ಯಾಗ ಮಾಡಿದವರ ವೀರಗಲ್ಲು
ಹುಲಿ ಬೇಟೆಯ ಸಂದರ್ಭದಲ್ಲಿ ಈ ವೀರರು ವೀರಮರಣವನ್ನಪ್ಪಿದ್ದು ಅವರು ವೀರಸ್ವರ್ಗವನ್ನು ಹೊಂದುತ್ತಿರುವ ದೃಶ್ಯಗಳು ಇಲ್ಲಿನ ವೀರಗಲ್ಲುಗಳಲ್ಲಿ ಕಂಡು ಬರುತ್ತವೆ. ಇಲ್ಲಿನ ಮೂರು ವೀರಗಲ್ಲುಗಳಲ್ಲಿ ವೀರರು ಕೈಲಾಸವಾಸಿಗಳಾಗುತ್ತಿರುವ ದೃಶ್ಯಗಳನ್ನು ಮೂರು ಹಂತದಲ್ಲಿ ಕೆತ್ತಿದ್ದರೆ ಮತ್ತೊಂದು ವೀರಗಲ್ಲಿನಲ್ಲಿ ನಾಲ್ಕು ಹಂತದ ದೃಶ್ಯಗಳಿರುವುದನ್ನು ಕಾಣಬಹುದಾಗಿದೆ.
ಬೆಂಗಳೂರಿನ ಶಾಸನ ಶಾಸ್ತ್ರಜ್ಞ ಎಚ್.ಜಿ.ಶಶಿಧರ್ ಅವರು ಹೇಳುವ ಪ್ರಕಾರ ಒಂದೇ ಸ್ಥಳದಲ್ಲಿ ನಾಲ್ಕು ಹುಲಿಬೇಟೆಯ ವೀರಗಲ್ಲುಗಳು ದೊರಕಿರುವುದು ಇದೇ ಪ್ರಥಮ. ಅಳಿವಿನ ಅಂಚಿನಲ್ಲಿರುವ ಈ ವೀರಗಲ್ಲುಗಳನ್ನು ಸಂರಕ್ಷಿಸಬೇಕಲ್ಲದೆ ಇವುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಶಿಕ್ಷಕ ರಂಗಸ್ವಾಮಿರವರ ಶ್ಲಾಘನೀಯ ಕಾರ್ಯ
ಇನ್ನು ಈ ವೀರಗಲ್ಲುಗಳನ್ನು ಪತ್ತೆ ಮಾಡಿರುವ ಶಿಕ್ಷಕ ಸಂತೇಬಾಚಹಳ್ಳಿ ರಂಗಸ್ವಾಮಿ ಅವರದು ಶ್ಲಾಘನೀಯ ಕಾರ್ಯವಾಗಿದೆ. ಇವರು ಹಲವು ವರ್ಷಗಳಿಂದ ಪುರಾತತ್ವ ಇಲಾಖೆಗೆ ಸಂಬಂಧಿಸಿದಂತೆ ನೂರಾರು ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದು ಇವರ ಕಾರ್ಯವನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಸಂಶೋಧಕರು ಶ್ಲಾಘಿಸಿದ್ದಾರೆ.
ಬಿಡುವು ಸಿಕ್ಕಾಗಲೆಲ್ಲ ಇತಿಹಾಸದ ಗರ್ಭದಲ್ಲಿ ಅಡಗಿರುವ ಅನೇಕ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ಓರೆಗೆ ಹಚ್ಚಿ, ಪರಾಮರ್ಶಿಸಿ ಅವುಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು ಇದರಿಂದ ಹಿಂದಿನ ಕಾಲದ ಹಲವು ವಿಚಾರಗಳು ಮುನ್ನಲೆಗೆ ಬರಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ಹಲವು ಪಳೆಯುಳಿಕೆಗಳನ್ನು ಸಂರಕ್ಷಿಸಲು ಸಾಧ್ಯವಾಗಿದೆ. ಇಂತಹ ನೂರಾರು ಕೆಲಸಗಳಿಗೆ ಇದೀಗ ಹುಲಿಬೇಟೆಯ ವೀರಗಲ್ಲುಗಳನ್ನು ಪತ್ತೆ ಮಾಡಿರುವುದು ನಿದರ್ಶನವಾಗಿದೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications