ತೊರೆಕಾಡನಹಳ್ಳಿ ಗ್ರಾಮದ ಬಳಿ ಆಕಸ್ಮಿಕವಾಗಿ ಸೃಷ್ಟಿಯಾದ ಕಾರಂಜಿ!
ಮಂಡ್ಯ, ಜನವರಿ 25:ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ನೀರನ್ನು ನೋಡಿ ಇದ್ಯಾವುದಪ್ಪಾ ಕಾರಂಜಿ ಎಂದು ಅಚ್ಚರಿ ಪಡುತಿದ್ದೀರಾ? ಇದು ಯಾವುದೇ ಕಾರಂಜಿ ಅಲ್ಲ ನೀರು ಸರಬರಾಜಾಗುವ ಪೈಪ್‌ನ ವಾಲ್ ಒಡೆದು ಹೋದ ವೇಳೆ ಪೈಪ್‌ನಿಂದ ನೀರು ಚಿಮ್ಮಿದ ದೃಶ್ಯವಷ್ಟೆ. ಇದು ಕಂಡುಬಂದಿದ್ದು ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿ.
ಬೆಂಗಳೂರು ನೀರು ಸರಬರಾಜು ಜಲಮಂಡಳಿಯಿಂದ ಕೆ.ಆರ್.ಎಸ್ ಜಲಾಶಯದಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಪೈಪ್ ತೊರೆಕಾಡನಹಳ್ಳಿ ಗ್ರಾಮದ ಮೂಲಕ ಹಾದು ಹೋಗಿದೆ. ಈ ಗ್ರಾಮದ ಮೂಲಕ 4 ಹಂತದ ಪೈಪುಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ.
ಈ ನಡುವೆ ಗ್ರಾಮದ ಗುಂಡಾಪುರ ಮತ್ತು ಹೆಚ್.ಬಸವಾಪುರ ಮಧ್ಯ ಭಾಗದಲ್ಲಿ3 ನೇ ಹಂತದ ಪೈಪ್‌ನಲ್ಲಿ ಏರ್‌ಸ್ಟ್ರಕ್ ಆಗಿ ಪೈಪ್‌ಗೆ ಅಳವಡಿಸಿದ ವಾಲ್‌ಪ್ಲೇಟ್ ಹಾರಿ ಹೋಗಿ ಸುಮಾರು 40 ರಿಂದ 50 ಅಡಿ ಮೇಲಕ್ಕೆ ನೀರು ಚಿಮ್ಮತೊಡಗಿದೆ. ಇದರಿಂದ ಬೃಹತ್ ಮಾದರಿಯ ಕಾರಂಜಿ ನಿರ್ಮಾಣವಾಗಿದ್ದು, ಜನ ಈ ಸುಂದರ ದೃಶ್ಯವನ್ನು ನೋಡುತ್ತಾ ನಿಂತಿದ್ದಾರೆ.

ಕೆಲವರು ಹತ್ತಿರ ಹೋದರೆ ನೆನೆದು ಒದ್ದೆಯಾಗುತ್ತೇವೆ ಎಂಬ ಭಯದಲ್ಲಿ ಆ ಕಡೆ ಹೋಗಲೇ ಇಲ್ಲ. ಇಡೀ ಪ್ರದೇಶ ನೀರಿನಿಂದ ತೋಯ್ದು ಹೋಗಿದ್ದು, ಭಾರೀ ಪ್ರಮಾಣದಲ್ಲಿ ನೀರು ಪೋಲಾಗಿ ಚರಂಡಿ ಪಾಲಾಗಿದೆ. ನೀರು ಕಾರಂಜಿಯಂತೆ ಚಿಮ್ಮಿ ಪೋಲಾಗುತ್ತಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಜಲಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ದುರಸ್ತಿ ಮಾಡುವ ಮೂಲಕ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸಿದ್ದಾರೆ.
ಆದರೆ ಆಕಸ್ಮಿಕವಾಗಿ ಸೃಷ್ಟಿಯಾದ ಮುಗಿಲೆತ್ತರಕ್ಕೆ ಚಿಮ್ಮುವ ನೀರಿನ ಕಾರಂಜಿಯ ಸುಂದರ ದೃಶ್ಯವನ್ನು ಹಲವರು ಸೆರೆಹಿಡಿದು ಸಂಭ್ರಮಿಸುತ್ತಿದ್ದದ್ದು ಮಾತ್ರ ಸಾಮಾನ್ಯವಾಗಿತ್ತು.












Click it and Unblock the Notifications